ಮತಗಳ್ಳತನದಿಂದ ಅಧಿಕಾರ ಹಿಡಿಯುವವರಿಗೆ ಬುದ್ಧಿ ಕಲಿಸಬೇಕಿದೆ

KannadaprabhaNewsNetwork |  
Published : Oct 06, 2025, 01:00 AM IST
ಚಿತ್ರ 3 | Kannada Prabha

ಸಾರಾಂಶ

ವೋಟ್ ಚೋರ್ ಗದ್ದಿ ಚೋಡ್ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮದಲ್ಲಿ ಸಚಿವ ಡಿ ಸುಧಾಕರ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ದೀನ ದಲಿತರು, ಬಡವರು, ಮುಸ್ಲಿಂರು, ಕ್ರಿಶ್ಚಿಯನ್ನರು, ಹಿಂದುಳಿದ ವರ್ಗದವರ ಮತಗಳನ್ನು ತೆಗೆದು ಹಾಕುವ ಕುತಂತ್ರ ಮಾಡಲಾಗುತ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಉಸ್ತುವಾರಿ ಮಯೂರ್ ಜೈ ಕುಮಾರ್ ಆಪಾದಿಸಿದರು.

ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೋಟ್ ಚೋರ್ ಗದ್ದಿ ಚೋಡ್ ಸಹಿ ಸಂಗ್ರಹ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬಿಜೆಪಿ ಚುನಾವಣೆಗಳನ್ನು ವಾಮಮಾರ್ಗಗಳಿಂದ ಗೆಲ್ಲುತ್ತಿದೆ. ಮತ ಕಳ್ಳತನದಿಂದ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಾರೆ. ಇಂತಹ ಪ್ರಧಾನಿ ಬೇಕು ಅಥವಾ ಬೇಡವೇ ಎಂಬುದನ್ನು ಜನರು ನಿರ್ಧರಿಸಬೇಕಾಗಿದೆ. ಚುನಾವಣೆಯ ಸಮೀಕ್ಷೆಗಳು ಬಹುತೇಕ ಸುಳ್ಳಾಗುವುದಿಲ್ಲ. ಆದರೆ ಬಿಜೆಪಿಯವರು ಸಮೀಕ್ಷೆಗಳನ್ನೇ ಸುಳ್ಳಾಗಿಸುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ಬಿಹಾರ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ.

ಅಲ್ಲಿ ಈಗಾಗಲೇ ಸುಮಾರು 65 ಲಕ್ಷದಷ್ಟು ಮತಗಳನ್ನು ಕಿತ್ತು ಹಾಕಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವವರ ಮತಗಳನ್ನು ತೆಗೆದು ಹಾಕುವ ಹೀನ ಕೆಲಸಕ್ಕೆ ಬಿಜೆಪಿ ಮುಂದಾಗಿದೆ. ಈ ಬಗ್ಗೆ ರಾಹುಲ್ ಗಾಂಧಿಯವರು ಹೋರಾಟ ನಡೆಸಿದಾಗ ಕೆಲವೇ ಕೆಲವು ಮತಗಳನ್ನು ಮತ್ತೆ ಸೇರ್ಪಡೆ ಮಾಡಲಾಗಿದೆ. ಈ ಚುನಾವಣಾ ಅಕ್ರಮಗಳ ಬಗ್ಗೆ ಎಲ್ಲರೂ ಧ್ವನಿ ಎತ್ತುವ ಕಾಲ ಬಂದಿದೆ. ಇದು ಸರಿಯಾದ ಸಮಯ. ಮತಗಳ್ಳತನವನ್ನು ಮುಲಾಜಿಲ್ಲದೇ ಪ್ರಶ್ನಿಸಬೇಕಾಗಿದೆ. ಒಬ್ಬನೇ ಮತದಾರ 4-5 ಬೂತ್ ಗಳಲ್ಲಿ ಮತದಾನ ಮಾಡಿರುವುದನ್ನು ನಮ್ಮ ನಾಯಕ ರಾಹುಲ್ ಗಾಂಧಿ ಸಾಬೀತು ಮಾಡಿದ್ದಾರೆ.

ಯಾರು ಗೆಲ್ಲಬೇಕು ಯಾರು ಅಧಿಕಾರ ನಡೆಸಬೇಕು ಎಂದು ಮತದಾರ ನಿರ್ಧರಿಸಬೇಕು. ಆದರೆ ಮತದಾರನ ಹಕ್ಕನ್ನೇ ಬುಡಮೇಲು ಮಾಡುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಜನ ಧ್ವನಿ ಎತ್ತಬೇಕು. ಈ ಸಹಿ ಸಂಗ್ರಹಣಾ ಅಭಿಯಾನದಿಂದ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಾಗಿದೆ. ಜಿಲ್ಲೆಯಲ್ಲಿ ಬಲಿಷ್ಟ ಕಾಂಗ್ರೆಸ್ ತಂಡವಿದೆ. ಕನಿಷ್ಠ ಎರಡು ಲಕ್ಷಕ್ಕಿಂತಲೂ ಹೆಚ್ಚಿನ ಸಹಿ ಸಂಗ್ರಹ ಮಾಡಿ ಕಾಂಗ್ರೆಸ್ ಪಕ್ಷ ಜನರ ಪಕ್ಷ ಎಂಬುದನ್ನು ವಿರೋಧಿಗಳಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ನನ್ನ ಕ್ಷೇತ್ರದಲ್ಲಿ 31 ಸಾವಿರಕ್ಕಿಂತ ಹೆಚ್ಚು ಮತಗಳ ಲೀಡ್ ನಲ್ಲಿ ಗೆದ್ದಿದ್ದೇನೆ. ಆದರೆ ಲೋಕಸಭಾ ಚುನಾವಣೆಯಲ್ಲಿ ನನ್ನ ಕ್ಷೇತ್ರದಲ್ಲಿ 6 ಸಾವಿರ ಮತಗಳ ಹಿನ್ನಡೆಯಾಗುತ್ತದೆ. ರಾಜ್ಯದ ಸಮೀಕ್ಷೆಗಳಲ್ಲಿ ಹಾಗೂ ಆಲ್ ಇಂಡಿಯಾ ಲೆವೆಲ್ ಸಮೀಕ್ಷೆಗಳಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ. ಆ ಜಿಲ್ಲೆಯ ರಿಸಲ್ಟ್ ಮೊದಲು ಬರುತ್ತದೆ ಅನ್ನುವ ಮಾಹಿತಿ ಇತ್ತು. ಆದರೆ ರಿಸಲ್ಟ್ ಉಲ್ಟಾ ಆಯಿತು. ಎಷ್ಟೋ ಕಡೆ ಬಿಜೆಪಿ ಪಕ್ಷದ ಎಂಪಿ ಕ್ಯಾಂಡಿಡೇಟ್ ಹೆಸರು ಸಹ ಯಾರಿಗೂ ಗೊತ್ತಿರಲಿಲ್ಲ. ಯಾವ ಪಂಚಾಯಿತಿಗಳಿಗೂ ಅವರು ಭೇಟಿ ಕೊಟ್ಟಿರಲಿಲ್ಲ. ಎಲ್ಲೂ ಓಡಾಡದೇ ಗೆಲ್ತಾರೆ ಅಂದ್ರೆ ಏನಿದರ ಅರ್ಥ ಎಂದು ಜನರೇ ಊಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮುರಳೀದರ ಹಾಲಪ್ಪ, ಮಾಜಿ ಸಂಸದ ಚಂದ್ರಪ್ಪ, ಚಳ್ಳಕೆರೆ ಶಾಸಕ ರಘುಮೂರ್ತಿ,ವಿಪ ಸದಸ್ಯ ಡಿಟಿ ಶ್ರೀನಿವಾಸ್ ಮಾತನಾಡಿದರು. ಈ ವೇಳೆ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಯೋಗೀಶ್ ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ನಂದಿನಿಗೌಡ, ನಗರಸಭೆ ಅಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷೆ ಮಂಜುಳಾ, ಕೆಪಿಸಿಸಿ ಸದಸ್ಯ ಅಮೃತೇಶ್ವರ ಸ್ವಾಮಿ, ಪ್ರಚಾರ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಈರಲಿಂಗೇಗೌಡ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಮತಾ, ಸಣ್ಣಪ್ಪ, ರತ್ನಮ್ಮ, ವಿಠ್ಠಲ್ ಪಾಂಡುರಂಗ, ನಗರಸಭಾ ಸದಸ್ಯರಾದ ಅಂಬಿಕಾ ಆರಾಧ್ಯ, ವಿಶಾಲಾಕ್ಷಮ್ಮ, ಕವಿತಾ, ಮೊದಲ ಮರಿಯಾ, ಜಿಪಂ ಮಾಜಿ ಸದಸ್ಯ ನಾಗೇಂದ್ರ ನಾಯ್ಕ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಗ್ರಾಮ ಪಂಚಾಯತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ವಾರ್ಡ್ ಸದಸ್ಯರುಗಳು, ಮುಖಂಡರುಗಳು, ಕಾರ್ಯಕರ್ತರು ಹಾಜರಿದ್ದರು.

ವೋಟ್ ಚೋರ್ ಗದ್ದಿ ಚೋಡ್ ಸಹಿ ಸಂಗ್ರಹ:

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಪೀರ್ ಮಾತನಾಡಿ, ವೋಟ್ ಚೋರ್ ಗದ್ದಿ ಚೋಡ್ ಸಹಿ ಸಂಗ್ರಹ ಅಭಿಯಾನವನ್ನು ಹಿರಿಯೂರು ತಾಲೂಕಿನಲ್ಲಿ ಮಾಡಿದ್ದೇವೆ. ಈ ಹಿಂದೆ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ತಾಲೂಕು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿತ್ತು. ಮತಗಳ್ಳತನದ ಸಹಿ ಸಂಗ್ರಹ ಅಭಿಯಾನದಲ್ಲೂ ಕೂಡ ಹಿರಿಯೂರು ಪ್ರಥಮ ಸ್ಥಾನ ಪಡೆದುಕೊಳ್ಳುತ್ತದೆ ಎಂಬ ಅಭಿಮಾನದಿಂದ ಇದೇ ತಾಲೂಕಿನಲ್ಲಿ ಚಾಲನೆ ಕೊಟ್ಟಿದ್ದೇವೆ ಎಂದರು.

ಚಿತ್ರ 1 ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ವೋಟ್ ಚೋರ್ ಗದ್ದಿ ಚೋಡ್ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮದಲ್ಲಿ ಎಐಸಿಸಿ ಉಸ್ತುವಾರಿ ಮಯೂರ್ ಜೈ ಕುಮಾರ್ ಮಾತನಾಡಿದರು.

PREV

Recommended Stories

5 ವರ್ಷ ಸಿಎಂ ಎಂದೇ ಸಿದ್ದುಗೆ ಮತ ಹಾಕಿದ್ದೇವೆ : ರಾಯರಡ್ಡಿ
ಹಸು ಕೊಂದಿದ್ದಕ್ಕೆ ಎಂ.ಎಂ.ಹಿಲ್ಸ್‌ ಹುಲಿಯ ಹತ್ಯೆಗೈದು ಪ್ರತೀಕಾರ!