ನಗರಾಭಿವೃದ್ಧಿ ಕಾಮಗಾರಿಗಳು ಕಳಪೆಯಾದರೆ ಶಿಸ್ತು ಕ್ರಮ: ಅಧಿಕಾರಿಗಳಿಗೆ ಶಾಸಕ ಪುಟ್ಟಸ್ವಾಮಿಗೌಡ ಎಚ್ಚರಿಕೆ

KannadaprabhaNewsNetwork |  
Published : Oct 06, 2025, 01:00 AM IST
ನಗರಸಭೆ ತಾಂತ್ರಿಕ ವಿಭಾಗದ ಎ.ಇ. ವಿರುದ್ದ ಭ್ರಷ್ಟಾಚಾರ ಆರೋಪ | Kannada Prabha

ಸಾರಾಂಶ

ಶಾಸಕರು ನಗರಸಭೆಗೆ ವಾರ್ಡುಗಳ ರಸ್ತೆ, ಚರಂಡಿ ನೀರಿನ ಪೈಪ್ ಲೈನ್ ಇತರೆ ಅಭಿವೃದ್ಧಿ ಕಾರ್ಯಗಳಿಗೆ 8 ಕೋಟಿ ರು. ತಂದಿದ್ದು, ಕೇವಲ 40ರಷ್ಟು ಮಾತ್ರ ವಾರ್ಡುಗಳಲ್ಲಿ ಕಾಮಗಾರಿ ನಡೆದಿದೆ ಎಂದು ಸಭೆಯಲ್ಲಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ನಗರಸಭೆ ತಾಂತ್ರಿಕ ವಿಭಾಗದ ಎಇ ದಾನಿಯಾ ಫೈರೋಜ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ನಗರಸಭೆ ಸದಸ್ಯರು ಸಾಮಾನ್ಯ ಸಭೆಯಲ್ಲಿ ಆರೋಪಗಳ ಸುರಿಮಳೆಗೈದರು.

ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ವಿವಿಧ ವಾರ್ಡ್ಗಳಲ್ಲಿ ಅಭಿವೃದ್ಧಿ ಕಾಮಗಾರಿ ಅನುಮೋದನೆ, ರಸ್ತೆ, ಚರಂಡಿ, ನೀರಿನ ಪೈಪ್ ಅಳವಡಿಕೆ, ಬೀದಿ ನಾಯಿಗಳ ನಿಯಂತ್ರಣ, ರಸ್ತೆಗಳಿಗೆ ಸೂಚನಾ ಫಲಕಗಳು, ಸಂಚಾರಿ ನಿಯಮ ಹೀಗೆ ಹಲವು ವಿಷಯಗಳನ್ನು ಚರ್ಚಿಸಲಾಯಿತು.

8ನೇ ವಾರ್ಡ್ ಸದಸ್ಯೆ ಮಂಜುಳಾ ಮಾತನಾಡಿ, ಅಧಿಕಾರಿಗಳು ಮಾಡಿರುವ ತಪ್ಪಿಗೆ ಜನರು ನಮ್ಮನ್ನು ಕೇಳುತ್ತಿದ್ದಾರೆ, ನಮ್ಮ ಬಳಿ ಉತ್ತರವಿಲ್ಲ, ನಮ್ಮ ವಾರ್ಡಿನಲ್ಲಿ ಎರಡು ಬೋರ್ವೆಲ್ ಇರುತ್ತವೆ, 400 ಮನೆಗಳಿಗೆ ನೀರು ಸರಬರಾಜು ಆಗುತ್ತಿದೆ, ಯಾವುದೇ ಅನುಮತಿ ಇಲ್ಲದೆ ಖಾಸಗಿ ಜಾಗದಲ್ಲಿ ಬೋರ್ವೆಲ್ ಕೊರೆಸಲು ಇಂಜಿನಿಯರ್ ದಾನಿಯಾ ಅನುಮತಿ ನೀಡಿದ್ದಾರೆ, 2,46 ಲಕ್ಷ ರು.ವೆಚ್ಚದಲ್ಲಿ 30 ಮೀಟರ್ ರಸ್ತೆ ನಿರ್ಮಾಣ ಮಾಡಿ, 100 ಮೀಟರ್ ಎಂದು ಹೇಳುತ್ತಿದ್ದಾರೆ ಎಂದು ಶಾಸಕರ ಗಮನಕ್ಕೆ ತಂದರು.

ಈ ಬಗ್ಗೆ ಇಂಜಿನಿಯರ್ ದನಿಯಾರನ್ನು ಕೇಳಿದಾಗ ಇಂತಹ ಸಣ್ಣ ವಿಷಯಗಳ ಬಗ್ಗೆ ಪ್ರಸ್ತಾಪ ಬೇಡವೆಂದರು, ಇದಕ್ಕೆ ಗರಂ ಆದ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ, ಇದು ಸಣ್ಣ ವಿಚಾರವೇ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ಯಾವುದೇ ಅಧಿಕಾರಿ ತಪ್ಪು ಮಾಡಿದರೆ ಅವರನ್ನು ಅಮಾನತು ಮಾಡಲು ಕ್ರಮ ಕೈಗೊಳ್ಳಿ ಎಂದು ಪೌರಾಯುಕ್ತ ರಮೇಶ್ ಅವರಿಗೆ ಸೂಚನೆ ನೀಡಿದರು.

ನಾಮ ನಿರ್ದೇಶಿತ ಸದಸ್ಯ ಚಂದ್ರಮೋಹನ್ ಮಾತನಾಡಿ, ನಗರಸಭೆಯ ತಾಂತ್ರಿಕ ವಿಭಾಗದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ, ಇಲ್ಲಿ ಕೆಲಸ ನಿರ್ವಹಿಸುವ ಎಇ ದಾನಿಯಾ ಫೈರೋಜ್ ಯಾರ ಅನುಮತಿ ಕೇಳದೆ ಸರ್ವಾಧಿಕಾರಿ ಧೋರಣೆ ಮೂಲಕ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ, ಕಾಮಗಾರಿ ನಡೆದ ಯಾವುದೇ ಸ್ಥಳ ವೀಕ್ಷಣೆ ಮಾಡದೇ, ಕಚೇರಿಯಲ್ಲೇ ಎಲ್ಲಾ ಕಡತಗಳನ್ನು ವಿಲೇವಾರಿ ಮಾಡುತ್ತಾರೆ, ಕೊಳವೆ ಬಾವಿಗಳನ್ನು ಕೊರೆಸುವ ವಿಷಯದಲ್ಲಿ ಇವರಿಂದ ನಗರಸಭೆ ಸದಸ್ಯರು ತುಂಬಾ ನೊಂದಿದ್ದಾರೆ ಎಂದು ಆರೋಪಿಸಿದರು.

ಶಾಸಕರು ನಗರಸಭೆಗೆ ವಾರ್ಡುಗಳ ರಸ್ತೆ, ಚರಂಡಿ ನೀರಿನ ಪೈಪ್ ಲೈನ್ ಇತರೆ ಅಭಿವೃದ್ಧಿ ಕಾರ್ಯಗಳಿಗೆ 8 ಕೋಟಿ ರು. ತಂದಿದ್ದು, ಕೇವಲ 40ರಷ್ಟು ಮಾತ್ರ ವಾರ್ಡುಗಳಲ್ಲಿ ಕಾಮಗಾರಿ ನಡೆದಿದೆ ಎಂದು ಸಭೆಯಲ್ಲಿ ತಿಳಿಸಿದರು. ಶಾಸಕ ಪುಟ್ಟಸ್ವಾಮಿಗೌಡ ಮಾತನಾಡಿ, ನಾನು ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ತರುತ್ತಿದ್ದೇನೆ. ಕಾಮಗಾರಿಗಳ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಎಚ್ಚರಿಸಿದರು.

8 ಕೋಟಿ ರು.ವೆಚ್ಚದಲ್ಲಿ ವಿವಿಧ ವಾರ್ಡ್ಗಳಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ, ಕೆಲವೇ ದಿನಗಳಲ್ಲಿ 6 ಕೋಟಿ ರು. ಅನುದಾನ ತಂದು ಉಳಿದಿರುವ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುವುದಾಗಿ ತೀರ್ಮಾನಿಸಿದ್ದೇನೆ, ಇರುವ ಕೆಲಸಗಳು ಆದಷ್ಟು ಬೇಗ ಪೂರ್ಣಗೊಳ್ಳಬೇಕು, ಇಲ್ಲವಾದರೆ ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಅಧಿಕಾರಿಗಳು ಮುಂದಾಗಬೇಕು, ಒಟ್ಟಾರೆಯಾಗಿ ನಗರ ಮತ್ತು ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದರು.

ಸಭೆಯಲ್ಲಿ ಉಪಾಧ್ಯಕ್ಷ ಫರೀದ್, ಪೌರಾಯುಕ್ತ ರಮೇಶ್, ಮಾರ್ಕೆಟ್ ಮೋಹನ್, ನಗರಸಭೆ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ