ರಮೇಶ್ ಬಿದರಕೆರೆ
ಕನ್ನಡಪ್ರಭ ವಾರ್ತೆ ಹಿರಿಯೂರುಸಾವಿರದ ಇನ್ನೂರರಷ್ಟು ಮನೆಗಳು ಹಾಗೂ ಎರಡೂವರೆ ಸಾವಿರದಷ್ಟು ಮತದಾರರಿರುವ ತಾಲೂಕಿನ ರಂಗೇನಹಳ್ಳಿ ಗ್ರಾಮದ ರುದ್ರಭೂಮಿಯ ಅವ್ಯವಸ್ಧೆ ಇದು. ಮೃತರನ್ನು ರುದ್ರಭೂಮಿಯಲ್ಲಿ ಹೂಳಲು ಸಹ ಸಂಬಂಧಿಕರು ಹೆದರುತ್ತಾರೆ. ಮಣ್ಣುಗಳ್ಳರ ಹಾವಳಿಗೆ ಸಮಾಧಿಯೇ ಕಣ್ಮರೆಯಾಗುತ್ತದೆ ಎಂಬ ಆತಂಕ ಅಲ್ಲಿನ ಜನರದ್ದು. ರಂಗೇನಹಳ್ಳಿ ಗ್ರಾಮದ ಸರ್ವೇ ನo.61 ರಲ್ಲಿ ಇರುವ 13 ಎಕರೆ 20 ಗುಂಟೆ ಸರ್ಕಾರಿ ಭೂಮಿ ಇದ್ದು. ಅದರಲ್ಲಿ 9 ಎಕರೆ 20 ಗುಂಟೆ ಗೋಮಾಳದ ಜೊತೆಗೆ ಎರಡು ಎಕರೆ ರುದ್ರಭೂಮಿಗೆ ಮಂಜೂರು ಮಾಡಲಾಗಿದೆ. ಮಂಜೂರಾದ ರುದ್ರಭೂಮಿಗೆ ಒಂದು ಬೋರ್ಡ್ ಹಾಕಿ ಸುತ್ತಲೂ ತಂತಿ ಬೇಲಿ ಹಾಕಲಾಗಿದೆ. ಆದರೆ ಮಣ್ಣು ಸಾಗಣೆದಾರರು ರುದ್ರಭೂಮಿಯ ತಂತಿಬೇಲಿಯನ್ನೇ ಕಿತ್ತು ಬಿಸಾಕಿ ಗೋಮಾಳವೆನ್ನದೆ, ರುದ್ರಭೂಮಿಯೆನ್ನದೆ ಅಕ್ರಮವಾಗಿ ಮಣ್ಣು ಸಾಗಣೆ ಮಾಡಿದ್ದಾರೆ. ರುದ್ರಭೂಮಿಯಲ್ಲಿ ಆಳುದ್ದ ಗುಂಡಿಗಳವರೆಗೆ ಮಣ್ಣು ಸಾಗಿಸಿದ್ದು ಮೃತರ ಮನೆಯವರು ಇಲ್ಲಿ ಎಲ್ಲಿ ಹೂಳಿದರೆ ಶವ ಉಳಿಯುತ್ತದೆ ಎಂದು ಪರದಾಡುವ ಸ್ಥಿತಿ ಇದೆ. ರುದ್ರಭೂಮಿಯೂ ಅಲ್ಲದೇ ಪಕ್ಕದ ಗೋಮಾಳ ಭೂಮಿಯನ್ನು ಸಹ ಬಗೆದು ಹಾಕಿದ್ದು ಇಡೀ ಟ್ರ್ಯಾಕ್ಟರ್ ಮುಳುಗಿಸುವಷ್ಟು ಆಳದ ಗುಂಡಿಗಳಾಗಿವೆ. ಇದೆಲ್ಲಾ ಒಂದೇ ರಾತ್ರಿಯಲ್ಲಿ ತೆಗೆದ ಮಣ್ಣಲ್ಲ. ಸುಮಾರು ವರ್ಷಗಳಿಂದ ನಿರಂತರವಾಗಿ ಮಣ್ಣು ದೋಚಲಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿಯವರನ್ನು, ಧರ್ಮಪುರ ಹೋಬಳಿ ಆರ್‌ಐ ಹಾಗೂ ಪತ್ರಿಕೆಯವರನ್ನು ಸಂಪರ್ಕಿಸಿದರೆ ಒಬ್ಬರ ಮೇಲೊಬ್ಬರು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ.
ರಂಗೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಪ್ರತಿಕ್ರಿಯಿಸಿ, ರುದ್ರಭೂಮಿಯನ್ನು ಗ್ರಾಮ ಪಂಚಾಯಿತಿ ಅಧೀನಕ್ಕೆ ನೀಡಿಲ್ಲ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ರುದ್ರಭೂಮಿಗೆ ತಂತಿಬೇಲಿ ನಿರ್ಮಿಸಲಾಗಿದೆ. ನಮ್ಮ ಸುಪರ್ದಿಗೆ ನೀಡಿದ ಮೇಲೆ ಅದರ ಅಭಿವೃದ್ಧಿ ಮಾಡಲಾಗುವುದು ಎಂದರು. ಆದರೆ ಆರ್‌ಐ ಅವರು ಪಂಚಾಯಿತಿಯವರ ಹೇಳಿಕೆಗೆ ತದ್ವಿರುದ್ಧವಾಗಿ ಉತ್ತರಿಸಿ ನಾವೀಗಾಗಲೇ ರಂಗೇನಹಳ್ಳಿ ಸಾರ್ವಜನಿಕ ರುದ್ರಭೂಮಿಯನ್ನು ಗ್ರಾಮ ಪಂಚಾಯಿತಿಯವರಿಗೆ ಜನಸ್ಪಂದನ ಕಾರ್ಯಕ್ರಮದಲ್ಲಿ ಹಸ್ತಾಂತರ ಮಾಡಿದ್ದೇವೆ. ಗುರುತಿಸಿಕೊಡುವುದಷ್ಟೇ ನಮ್ಮ ಕೆಲಸ. ಅದಕ್ಕೆ ಅನುದಾನ ನೀಡುವುದು ಅಭಿವೃದ್ಧಿ ಪಡಿಸುವುದು ಗ್ರಾಮ ಪಂಚಾಯಿತಿಯವರ ಜವಾಬ್ದಾರಿ ಎಂದರು.ರುದ್ರಭೂಮಿ ಮತ್ತು ಪಕ್ಕದ ಗೋಮಾಳದ ಜಮೀನಿನಲ್ಲಿ ನಿರಂತರವಾಗಿ ಅಕ್ರಮವಾಗಿ ಮಣ್ಣು ಎತ್ತಲಾಗಿದೆ.
ಇದು ಕಂದಾಯ ಇಲಾಖೆ ತಡೆಯುವ ಕೆಲಸವಲ್ಲವಾ ಎಂಬ ಪ್ರಶ್ನೆಗೆ ಆರ್‌ಐ ಅವರು ಉತ್ತರ ನೀಡದಾದರು. ಗೋಮಾಳಕ್ಕೆ ಹೊಂದಿಕೊಂಡಂತೆ ಗ್ರಾಮ ಪಂಚಾಯಿತಿ ವತಿಯಿಂದ 3-4 ವರ್ಷದ ಹಿಂದೆ ಕಟ್ಟಲಾಗಿರುವ ಘನತ್ಯಾಜ್ಯ ಸಂಪನ್ಮೂಲ ನಿರ್ವಹಣ ಘಟಕದ ಸ್ವಚ್ಛ ಸಂಕೀರ್ಣ ಘಟಕ ಇನ್ನೂವರೆಗೂ ಕಾರ್ಯಾರಂಭ ಮಾಡಿಲ್ಲ. ಘಟಕದ ಸುತ್ತ ಖಾಲಿ ಬಾಟಲುಗಳು ಬಿದ್ದಿದ್ದು ಗಿಡ ಗೆಂಟೆಗಳು ಬೆಳೆದಿವೆ. ಈಗಲಾದರೂ ಸಂಬಂಧಪಟ್ಟ ಇಲಾಖೆಯವರು ರುದ್ರಭೂಮಿ ಉಳಿಸಿಕೊಡುವ ಜೊತೆಗೆ ತಂತಿಬೇಲಿ ಭದ್ರ ಪಡಿಸಿ ಸುರಕ್ಷಿತವಾಗಿ ಮೃತರನ್ನು ಹೂಳಲು ಅನುವು ಮಾಡಿಕೊಡಬೇಕಾಗಿದೆ.ಸೂಕ್ತ ಕ್ರಮಕ್ಕೆ ಆಗ್ರಹಿಸಿ ಶೀಘ್ರವೇ ಹೋರಾಟ: ಶ್ರೀನಿವಾಸ್‌ಮಹಾನಾಯಕ ದಲಿತ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಕೆ.ಪಿ ಶ್ರೀನಿವಾಸ್ ಪ್ರತಿಕ್ರಿಯೆ ನೀಡಿ, ರಂಗೇನಹಳ್ಳಿ ಗ್ರಾಮದ ಸ್ಮಶಾನ ಭೂಮಿಯ ಜಾಗ ಸೇರಿದಂತೆ ಅದಕ್ಕೆ ಹೊಂದಿಕೊಂಡಿರುವ ಗೋಮಾಳದ ಸುಮಾರು 12ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಮಣ್ಣುಗಳ್ಳರು ಅಕ್ರಮವಾಗಿ ಅಗೆದು ಮಾರಾಟ ಮಾಡುತ್ತಿದ್ದರು ಸಹ ಸಂಬಂಧ ಪಟ್ಟ ಇಲಾಖೆಯವರು ಕ್ರಮವಹಿಸದೆ ಇರುವುದು ಖಂಡನೀಯ. ಕಂದಾಯ ಇಲಾಖೆ ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದು ರುದ್ರಭೂಮಿಯನ್ನು ಸಹ ಬಗೆದು ಮಣ್ಣು ಎತ್ತುತ್ತಾರೆ ಎಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಇಂತಹ ಅಕ್ರಮ ಮಣ್ಣು ಸಾಗಾಣಿಕೆ ವಿರುದ್ಧ ಹಿರಿಯೂರಿನ ದಲಿತಪರ ಸಂಘಟನೆಗಳ ಒಕ್ಕೂಟದಡಿಯಲ್ಲಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಶೀಘ್ರವೇ ಹೋರಾಟ ಮಾಡಲಾಗುವುದು ಎಂದರು.