ಸಾವರ್ಕರ್‌ ಫಲಕಕ್ಕೆ ಮಸಿ ಬಳೆದವರು ಅಯೋಗ್ಯರು: ಸಿ.ಟಿ.ರವಿ

KannadaprabhaNewsNetwork |  
Published : May 29, 2024, 12:48 AM IST
28ಕೆಪಿಆರ್‌ಸಿಆರ್‌ 01: ಸಿ.ಟಿ.ರವಿ | Kannada Prabha

ಸಾರಾಂಶ

ವೀರ್‌ ಸಾವರ್ಕರ್ ಮಹಾನ್ ದೇಶ ಭಕ್ತರು ಎನ್ನುವುದು ಇವರಿಗೆ ಗೊತ್ತಿಲ್ಲ. ಸಾವರ್ಕರ್‌ ದೇಶ ಸ್ವಾತಂತ್ರ್ಯಕ್ಕಾಗಿ ಶಿಕ್ಷೆಗೊಳಗಾದವರು, ಅವರ ಇಡೀ ಕುಟುಂಬವೇ ಸ್ವಾತಂತ್ರ್ಯ ಹೋರಾಟದಲ್ಲಿ ಆಹುತಿಯಾಗಿದೆ

ಕನ್ನಡಪ್ರಭ ವಾರ್ತೆ ರಾಯಚೂರು

ಬೆಂಗಳೂರಿನ ಯಲಹಂಕ ಮೇಲ್ಸೇತುವೆಯ ವೀರ್‌ ಸಾವರ್ಕರ್‌ ಫಲಕಕ್ಕೆ ಮಸಿ ಬಳಿದು ಅಪಮಾನಿಸಿರುವುದು ಖಂಡನೀಯ ಸಂಗತಿಯಾಗಿದ್ದು, ಈ ಕೃತ್ಯವನ್ನೆಸಗಿದ ಎನ್‌ಎಸ್‌ಯುಐನವರು ಅಯೋಗ್ಯರಾಗಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಕಿಡಿಕಾರಿದರು.

ನಗರದ ಶಾಸಕರ ನಿವಾಸದಲ್ಲಿ ಮಾತನಾಡಿದ ಅವರು, ಇಂಥಹ ತರಬೇತಿ ಪಡೆದವರು ಯಾವ ದೇಶಭಕ್ತರಾಗುತ್ತಾರೆ. ಇಂಥವರೇ ವಿಧಾನಸೌಧಕ್ಕೆ ಬಂದು ಪಾಕಿಸ್ತಾನಕ್ಕೆ ಜಿಂದಾಬಾದ್‌ ಕೂಗುತ್ತಾರೆ. ವೀರ್‌ ಸಾವರ್ಕರ್ ಮಹಾನ್ ದೇಶ ಭಕ್ತರು ಎನ್ನುವುದು ಇವರಿಗೆ ಗೊತ್ತಿಲ್ಲ. ಸಾವರ್ಕರ್‌ ದೇಶ ಸ್ವಾತಂತ್ರ್ಯಕ್ಕಾಗಿ ಶಿಕ್ಷೆಗೊಳಗಾದವರು, ಅವರ ಇಡೀ ಕುಟುಂಬವೇ ಸ್ವಾತಂತ್ರ್ಯ ಹೋರಾಟದಲ್ಲಿ ಆಹುತಿಯಾಗಿದೆ. ಇಂಥಹ ದೇಶಭಕ್ತರ ನಾಮ ಫಲಕಕ್ಕೆ ಮಸಿಬಳಿಯೋದಲ್ಲ ಕಾಂಗ್ರೆಸ್‌ ತನ್ನ ಮುಖಕ್ಕೆ ತಾನು ಮಸಿ ಬಳೆದುಕೊಂಡಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರಿನ ರಸ್ತೆಯಲ್ಲಿ ನಮಾಜ್‌ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮಂಗಳೂರಿನಲ್ಲಿ ಮಸೀದಿ ಖಾಲಿ ಹೊಡಿಯುತ್ತಿವೆ. ಅದಕ್ಕಾಗಿಯೇ ರಸ್ತೆಗೆ ಬಂದು ನಮಾಜ್‌ ಮಾಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಯಾರ ಮೇಲೆ ಪ್ರಕರಣ ದಾಖಲಾಗಿದೆ. ಎಷ್ಟು ಜನರನ್ನು ಬಂಧಿಸಲಾಗಿದೆ ಎಂದು ಪ್ರಶ್ನಿಸಿದರು. ನಾಳೆ ರಸ್ತೆಯಲ್ಲಿ ಮಂಗಳಾರತಿ ಮಾಡಿದರೆ ಸರಿನಾ? ಇದಕ್ಕೇಲ್ಲಾ ಯಾರು ಪ್ರಚೋದನೆ ಕೊಡುತ್ತಿದ್ದಾರೆ. ಸರ್ಕಾರವೇ ಅವರ ಪರವಾಗಿ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ಚನ್ನಗಿರಿಯಲ್ಲಿ ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಲಾಗಿದೆ. ಮುಸ್ಲಿಂ ಸಮಾಜದವರೇ ಯಾಕೆ ಸಾಮೂಹಿಕವಾಗಿ ಹಲ್ಲೆ ನಡೆಸುತ್ತಾರೆ. ಈ ಹಿಂದೆ ಡಿಜೆ ಹಾಗೂ ಕೆಜೆ ಹಳ್ಳಿ ಘಟನೆಗಳು ನಡೆದಿದ್ದವು. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆಯಿತು. ಇದೀಗ ಚನ್ನಗಿರಿಯಲ್ಲಿ ಘಟನೆ ಜರುಗಿದೆ. ಸಾಮೂಹಿಕವಾಗಿಯೇ ಯಾಕೆ ಅವರು ದಾಳಿ ನಡೆಸುತ್ತಾರೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಿಂತ ಮುಂಚೆ ಪೊಲೀಸ್‌ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಿರುವುದು ಎಷ್ಟು ಸರಿ? ಈ ವಿಚಾರವಾಗಿ ಮುಖ್ಯಮಂತ್ರಿಯಾಗಿ ಇನ್ನು ಎಫ್ಐಆರ್‌ ದಾಖಲಾಗಿಲ್ಲ ಎಂದು ಹೇಳುತ್ತಾರೆ ಎಂದು ಟೀಕಿಸಿದರು.

ಶಿವಮೊಗ್ಗ ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ ವಿಚಾರವಾಗಿ ರಾಜ್ಯ ಸರ್ಕಾರದ ಆರಂಭಿಕ ನಡೆ ಅನುಮಾನ ಮೂಡಿಸುತ್ತಿದೆ ಎಂದು ತಿಳಿಸಿದರು.

ಈ ವೇಳೆ ಸ್ಥಳೀಯ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶಿವರಾಜ ಪಾಟೀಲ್, ಮುಖಂಡ ಕೆ.ಎಂ.ಪಾಟೀಲ್‌ ಸೇರಿ ಅನೇಕರಿದ್ದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!