ಹಸಿರು ನಿಶಾನೆ । ಸ್ವೀಪ್ ಸಮಿತಿಯಿಂದ ಬೈಕ್ ರ್‍ಯಾಲಿ
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಓಟ್ ಮಾಡಿದವನೇ ಹೀರೋ ಮತ್ತು ಮತ ಹಾಕಿದ ಮಹಿಳೆಯೇ ಹೀರೋಯಿನ್. ಓಟ್ ಮಾಡದವರು ಜೀರೋ’ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಿ. ಸತ್ಯಭಾಮ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಲೋಕಸಭಾ ಚುನಾವಣೆ ೨೦೨೪, ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಜಂಟಿಯಾಗಿ ಮಂಗಳವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಬೈಕ್ ರ್‍ಯಾಲಿ ಕಾರ್ಯಕ್ರಮವನ್ನು ಹಸಿರು ಬಾವುಟ ಪ್ರದರ್ಶಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ‘ನಗರ ಪ್ರದೇಶದ ಕೆಲವರು ನಮ್ಮದೊಂದು ಮತ ಹಾಕದಿದ್ದರೆ ಏನು ಆಗುವುದಿಲ್ಲ ಎಂದು ಸುಮ್ಮನಾಗುವುದುಂಟು. ಮತಾದರರ ಪಟ್ಟಿಯಲ್ಲಿರುವ ಎಲ್ಲಾ ಮತದಾರರು ಕೂಡ ಓಟು ಮಾಡಬೇಕೆಂದು ಸರ್ಕಾರಿ ನೌಕರರು ಜಾಗೃತಿ ಮೂಡಿಸುತ್ತಿದ್ದು, ಈ ಮೂಲಕವಾದರೂ ನೂರರಷ್ಟು ಮತ ಚಲಾಯಿಸಲಿ’ ಎಂದು ಹೇಳಿದರು.‘ಓಟು ಮಾಡಿದವನೇ ಹೀರೋ, ಓಟು ಮಾಡದವನು ಜೀರೋ, ಹಾಗೆಯೇ ಮತ ಹಾಕಿದ ಮಹಿಳೆ ಹೀರೋಯಿನ್, ಮಾಡದವರು ಏನೆಂದು ನೀವೆ ತಿಳಿಯಬೇಕು. ವರ್ಗಾವಣೆಯಾಗಿ ಬಂದಂತಹ ಅಧಿಕಾರಿಗಳು ಸಹ ಯಾವುದೇ ಕಾರಣಕ್ಕೂ ತಪ್ಪದೆ ಮತವನ್ನು ಇಲ್ಲಿಯೇ ಮಾಡಬೇಕು. ಮತದಾನ ಎಂದರೆ ಕೈಲಿ ಇರುವ ಶಕ್ತಿ. ಅದನ್ನು ಕಳೆದುಕೊಂಡರೆ ಪ್ರಜಾಪ್ರಭುತ್ವದ ಅಂತರಾತ್ಮವೇ ಕಳೆದುಕೊಂಡಂತೆ’ ಎಂದು ಹೇಳಿದರು.
ಮನೆ ಮನೆಗಳಿಗೆ ಭೇಟಿ ಕೊಡುವುದರ ಮೂಲಕ ಮತಗಟ್ಟೆಗಳಲ್ಲಿ ಶೇಕಡವಾರು ಮತ ಚಲಾಯಿಸಲು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ ಎಲ್ಲರೂ ಮತ ಹಾಕುವುದರ ಮೂಲಕ ನೂರರಷ್ಟು ಮತದಾನ ಆಗಲು ಸಹಕರಿಸಿ ಎಂದು ಮನವಿ ಮಾಡಿದರು.
ಮತದಾನ ಕುರಿತು ಜನಜಾಗೃತಿ ಮೂಡಿಸುವ ಬೈಕ್ ರ್‍ಯಾಲಿಗೆ ಜಿಲ್ಲಾಧಿಕಾರಿ ಸತ್ಯಭಾಮ ಹಸಿರು ನಿಶಾನೆ ತೋರಿಸಿದರು.