ಅಗತ್ಯ ಸ್ಥಳಗಳಲ್ಲಿ ಚೆಕ್‌ಪೋಸ್ಟ್ ನಿರ್ಮಾಣಕ್ಕೆ ಕ್ರಮ ವಹಿಸಿ: ನಲಿನ್ ಅತುಲ್

KannadaprabhaNewsNetwork |  
Published : Apr 03, 2024, 01:31 AM IST
ನಲಿನ್ ಅತುಲ್ | Kannada Prabha

ಸಾರಾಂಶ

ಚುನಾವಣಾ ಆಯೋಗದ ನಿರ್ದೇಶನದಂತೆ ಈಗಾಗಲೇ ಜಿಲ್ಲೆಯಾದ್ಯಂತ ಜಿಲ್ಲಾ ಗಡಿಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ.

ಚುನಾವಣಾ ಸಿದ್ಧತಾ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಚುನಾವಣಾ ಆಯೋಗದ ನಿರ್ದೇಶನದಂತೆ ಈಗಾಗಲೇ ಜಿಲ್ಲೆಯಾದ್ಯಂತ ಜಿಲ್ಲಾ ಗಡಿಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಆದಾಗ್ಯೂ ಜಿಲ್ಲಾ ವ್ಯಾಪ್ತಿಯೊಳಗೆ ಅಗತ್ಯವಿರುವ ಕಡೆ ಚೆಕ್‌ಪೋಸ್ಟ್ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ಚುನಾವಣಾಧಿಕಾರಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣಾ-2024ರ ಸಿದ್ಧತಾ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಬಿಸಿಲಿನಿಂದ ಸಿಬ್ಬಂದಿ ರಕ್ಷಣೆಗೆ ಸೂಕ್ತ ನೆರಳಿನ ವ್ಯವಸ್ಥೆ ಮಾಡಬೇಕು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ಥಾಪಿಸಿದ ಚೆಕ್‌ ಪೋಸ್ಟ್‌ಗಳಿಗೆ ಶಾಮಿಯಾನ ಹಾಕಿಸಬೇಕು. ತೆಂಗಿನ ಗರಿ ಅಥವಾ ಭತ್ತದ ಹುಲ್ಲುಗಳಿಂದ ನೆರಳನ್ನು ಕಲ್ಪಿಸಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಚೆಕ್‌ಪೋಸ್ಟ್ ಸಿಬ್ಬಂದಿಗೆ ರಿಪ್ಲೆಕ್ಷನ್ ಬ್ಯಾಡ್ಜ್ ಒದಗಿಸಬೇಕು. ಚೆಕ್‌ಪೋಸ್ಟ್‌ಗಳಲ್ಲಿ ಹಾಕಲಾದ ಬ್ಯಾರಿಕೇಡ್‌ಗಳಿಗೆ ಪ್ರತಿಫಲಿತ ಸ್ಟಿಕ್ಕರ್‌ಗಳನ್ನು ಅಂಟಿಸಬೇಕು. ಇದರಿಂದ ರಾತ್ರಿ ಸಮಯದಲ್ಲಿ ಸಿಬ್ಬಂದಿ ಸುರಕ್ಷತೆ ಹಾಗೂ ಕಾರ್ಯನಿರ್ವಹಣೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಸಿ-ವಿಜಿಲ್ ತಂತ್ರಾಂಶದಲ್ಲಿ ದಾಖಲಾಗುವ ಯಾವುದೇ ದೂರನ್ನು ಗರಿಷ್ಠ 100 ನಿಮಿಷಗಳಲ್ಲಿ ಪರಿಹರಿಸಬೇಕು. ಅದಕ್ಕೂ ಹೆಚ್ಚಿನ ಸಮಯ ತೆಗೆದುಕೊಳ್ಳಬೇಡಿ. ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಮಾಧ್ಯಮ ಮೇಲ್ವಿಚಾರಣಾ ಸಮಿತಿಯಿಂದ ಪ್ರತಿನಿತ್ಯ ಪೇಯ್ಡ್ ನ್ಯೂಸ್, ಜಾಹೀರಾತುಗಳ ಮೇಲೆ ನಿಗಾ ವಹಿಸಿ ವರದಿ ಸಲ್ಲಿಸಬೇಕು. ದಿನಪತ್ರಿಕೆಗಳು, ಸುದ್ದಿ ವಾಹಿನಿಗಳನ್ನು ಗಮನಿಸಬೇಕು. ಸೆಕ್ಟರ್ ಅಧಿಕಾರಿಗಳಿಗೆ ಸೂಕ್ತ ವಾಹನದ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಬಂಧಿಸಿದ ಸಮಿತಿಯ ಅಧಿಕಾರಿಗಳಿಗೆ ತಿಳಿಸಿದರು.

ಅಂಚೆ ಮೂಲಕ ಮತದಾನ ಮಾಡಲು ಅಂಚೆ ಮತ್ರ ನೀಡಲು ಚುನಾವಣಾ ಆಯೋಗ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಆ ಮಾರ್ಗಸೂಚಿಗಳನ್ವಯ 85 ವರ್ಷ ಮೇಲ್ಪಟ್ಟವರಿಗೆ, ವಿಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು, ಚುನಾವಣಾ ಕರ್ತವ್ಯ ನಿಯೋಜಿತ ಅಧಿಕಾರಿ ಸಿಬ್ಬಂದಿಗೆ ನಿಗದಿಪಡಿಸಿದ ನಮೂನೆ 12, 12ಎ ಹಾಗೂ 12ಡಿ ಅನ್ನು ಒದಗಿಸಲು ಎಆರ್‌ಒಗಳು ಕ್ರಮ ವಹಿಸಬೇಕು. ಅಂಚೆ ಮತ ಪತ್ರ ನೋಡಲ್ ಅಧಿಕಾರಿಗಳು ಅರ್ಹರಿಗೆ ಅಂಚೆ ಮತ ಪತ್ರ ಒದಗಿಸಲು ಸಹಕಾರಿಯಾಗುವಂತೆ ಅಗತ್ಯ ಸಲಹೆ, ಸೂಚನೆಗಳನ್ನು ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗೆ ನೀಡಬೇಕು. ಉಳಿದಂತೆ ಎಲ್ಲ ಮತಗಟ್ಟೆಗಳಲ್ಲಿ ಎಲ್ಲ ರೀತಿಯ ಅಗತ್ಯ ಮೂಲ ಸೌಕರ್ಯಗಳಿರುವ ಬಗ್ಗೆ ಮತ್ತೊಮ್ಮೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಎಆರ್‌ಒಗಳಿಗೆ ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಸಹಾಯಕ ಆಯುಕ್ತ ಕ್ಯಾ. ಮಹೇಶ್ ಮಾಲಗಿತ್ತಿ ಸೇರಿದಂತೆ ಎಲ್ಲ ತಾಲೂಕುಗಳ ಎಆರ್‌ಒಗಳು, ವಿವಿಧ ಇಲಾಖೆ ಅಧಿಕಾರಿಗಳು, ಚುನಾವಣಾ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ