ಕನ್ನಡಪ್ರಭ ವಾರ್ತೆ ಮಲ್ಪೆ
ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ತೊಟ್ಟಂ ಸಂತ ಅನ್ನಮ್ಮ ಚರ್ಚ್ ಘಟಕದ ವಿವಿಧ ಯೋಜನೆಗಳ ಸಹಾಯರ್ಥವಾಗಿ ಭಾನುವಾರ ಚರ್ಚಿನ ಬಯಲು ರಂಗ ವೇದಿಕೆಯಲ್ಲಿ ಆಯೋಜಿಸಿದ್ದ ಈಸ್ಟರ್ ಕಲಾ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನೆರೆದ ಪ್ರೇಕ್ಷಕರಿಗೆ ಮುದ ನೀಡಿತು.ಕಾರ್ಯಕ್ರಮವನ್ನು ಹೆಸರಾಂತ ಕೊಂಕಣಿ ಗಾಯಕರಾದ ದಿ.ವಿಲ್ಫಿ ರೆಬಿಂಬಸ್ ಮತ್ತು ಕೊಂಕಣ್ ಮೈನಾ ಮೀನಾ ರೆಬಿಂಬಸ್ ಅವರ ಪುತ್ರ ಗಾಯಕ ವಿಶ್ವಾಸ್ ರೆಬಿಂಬಸ್ ಉದ್ಘಾಟಿಸಿ ಶುಭ ಹಾರೈಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷ ರೊನಾಲ್ಡ್ ಡಿ ಆಲ್ಮೇಡಾ ಮಾತನಾಡಿ, ಸಮುದಾಯದಲ್ಲಿ ಸಂಘಟನಾತ್ಮಕವಾಗಿ ಒಗ್ಗಟ್ಟಿನಿಂದ ಸೇವಾ ಕಾರ್ಯದಲ್ಲಿ ತೊಡಗಿಕೊಂಡಾಗ ಉತ್ತಮ ಫಲಿತಾಂಶ ಸಾಧ್ಯವಿದೆ. ನಾವು ನೀಡುವ ಸೇವೆ ಸಮುದಾಯದ ಒಳಿತಿಗೆ ಕಾರಣವಾಗುವಂತಿರಬೇಕು ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಬೇಕು ಎಂದರು.
ಪ್ರತಿಭಾಂಗಣ್ ಸಾಂಸ್ಕೃತಿಕ ಸಂಘಟನೆಯ ಉದ್ಘಾಟನೆಯನ್ನು ಚರ್ಚಿನ ಪ್ರಧಾನ ಧರ್ಮಗುರು ವಂ.ಡೆನಿಸ್ ಡೆಸಾ ನೆರವೇರಿಸಿ, ನಾವು ಮನುಷ್ಯರಾಗಬೇಕೆ ಹೊರತು ಯಂತ್ರಗಳಾಗಬಾರದು. ಮನುಷ್ಯನ ಬದುಕಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅತೀ ಅಗತ್ಯವಾಗಿ ಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ ಸಾಧ್ಯವಿದೆ ಎಂದರು.ಸಭಾ ಕಾರ್ಯಕ್ರಮದಲ್ಲಿ ಕಥೊಲಿಕ್ ಸಭಾ ಸಂಘಟನೆಯ ವತಿಯಿಂದ ಆಧ್ಯಾತ್ಮಿಕ ನಿರ್ದೇಶಕರಾಗಿರುವ ವಂ.ಡೆನಿಸ್ ಡೆಸಾ ಅವರನ್ನು ಸರ್ವ ಸದಸ್ಯರು ಸೇರಿಕೊಂಡು ಸನ್ಮಾನಿಸಿದರು.
ಕಲಾಸಂಜೆ ಕಾರ್ಯಕ್ರಮದಲ್ಲಿ ಹೆಸರಾಂತ ಸಂಗೀತ ತಂಡ ನೆಲ್ಸನ್ ಲೂವಿಸ್ ಸಂತೆಕಟ್ಟೆ ಇವರ ಕ್ಯಾರಲ್ಸ್ ಬೀಟ್ ಗ್ರೂಪ್ ತಂಡ ಹಾಗೂ ಸ್ಥಳೀಯ ಕಲಾವಿದರಿಂದ ಉತ್ತಮವಾದ ಕೊಂಕಣಿ, ಕನ್ನಡ, ಹಿಂದಿ, ಹಾಡುಗಳು ಪ್ರದರ್ಶನಗೊಂಡವು. ಮಂಗಳೂರಿನ ಹಾಸ್ಯ ತಂಡ ಮೆಮೊರಿ ಇವರಿಂದ ಹಾಸ್ಯ ಕಾರ್ಯಕ್ರಮಗಳು ನೆರೆದಿದ್ದವರನ್ನು ರಂಜಿಸಿತು. ಪ್ರತಿಭಾಂಗಣ್ ಸಂಘಟನೆಯ ಕಲಾವಿದರಿಂದ ವೆಚಿಕ್ ಪೂತ್ ಹಾಸ್ಯ ಪ್ರಹಸನ ಪ್ರದರ್ಶನಗೊಂಡಿತುವಂ.ಡೆನಿಸ್ ಡೆಸಾ ಅವರಿಂದ ತಾಯಿಯ ಪ್ರೀತಿ ಮತ್ತು ಮಮತೆ ಸಾರುವ ಕೊಂಕಣಿ ಗೀತೆ ನೆರೆದಿದ್ದ ಪ್ರೇಕ್ಷಕರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷ ಸುನೀಲ್ ಫರ್ನಾಂಡಿಸ್, ಸ್ಥಳೀಯ ಕಾನ್ವೆಂಟಿನ ಮುಖ್ಯಸ್ಥ ಸಿಸ್ಟರ್ ಸುಶ್ಮಾ, ಪ್ರತಿಭಾಂಗಣ್ ಸಂಘಟನೆಯ ಅಧ್ಯಕ್ಷರಾದ ಕ್ಲಾರೆನ್ಸ್ ಫರ್ನಾಂಡಿಸ್ ಇದ್ದರು.ಕೆಥೊಲಿಕ್ ಸಭಾ ತೊಟ್ಟಂ ಘಟಕದ ಅಧ್ಯಕ್ಷ ವೀನಾ ಫರ್ನಾಂಡಿಸ್ ಸ್ವಾಗತಿಸಿದರು. ಕಾರ್ಯದರ್ಶಿ ಶಾಂತಿ ಪಿಕಾರ್ಡೊ ವಂದಿಸಿದರು. ಲವೀನಾ ಫರ್ನಾಂಡಿಸ್ ಸಭಾ ಕಾರ್ಯಕ್ರಮ ಹಾಗೂ ನಾನು ಮರೋಲ್ ತೊಟ್ಟಂ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.