ಕುಷ್ಟಗಿ: ಉತ್ತಮ ಸಮಾಜ ನಿರ್ಮಿಸುವಲ್ಲಿ ನಿವೃತ್ತ ನೌಕರರ, ಹಿರಿಯ ನಾಗರಿಕರ ಚಿಂತನೆ, ಮಾರ್ಗದರ್ಶನ ಅಗತ್ಯವಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಅಭಿಪ್ರಾಯಪಟ್ಟರು.
ಇಂದಿನ ದಿನಗಳಲ್ಲಿ ಸಮಾಜದ ದಿಕ್ಕು ತಪ್ಪುತ್ತಿದ್ದು, ಮಾನವೀಯ ಮೌಲ್ಯ ಕುಸಿಯುತ್ತಿವೆ. ಹಿರಿಯ ನಾಗರಿಕರು ಯುವಕರಿಗೆ ಉತ್ತಮ ಮಾರ್ಗದರ್ಶನ ಮಾಡುವ ಮೂಲಕ ಸಮಾಜದ ಪರಿವರ್ತನೆಗೆ ಮುಂದಾಗಬೇಕು ಯಾವುದೆ ಖಿನ್ನತೆಗೆ ಒತ್ತಡಕ್ಕೆ ಒಳಗಾಗದೆ ಖುಷಿಯಿಂದ ನಿವೃತ್ತಿಯ ಜೀವನ ನಡೆಸಬೇಕು ಎಂದು ತಿಳಿಸಿದರು.
ನಿವೃತ್ತ ನೌಕರರ ಭವನಕ್ಕೆ ಈಗಾಗಲೆ ಐದು ಲಕ್ಷ ಅನುದಾನ ಕೊಟ್ಟಿದ್ದು, ಈ ವರ್ಷ ಸುಮಾರು ₹10 ಲಕ್ಷ ಅನುದಾನ ನೀಡಲಾಗುವದು ತಮ್ಮ ಕಷ್ಟಗಳಿಗೆ ಎಂದಿಗೂ ನಿಮ್ಮ ಮಗನಾಗಿ ಸೇವೆ ಸಲ್ಲಿಸುತ್ತೇನೆ ಎಂದು ಭರವಸೆ ಮಾತುಗಳನ್ನಾಡಿದರು.ಮಾಜಿ ಶಾಸಕ ಕೆ ಶರಣಪ್ಪ ವಕೀಲರು ಮಾತನಾಡಿ, ಹಿರಿಯರಾದ ನಾವು ಸಮಾಜದ ಅಭಿವೃದ್ದಿಗೆ ಉತ್ತಮ ಸಲಹೆ ಸೂಚನೆ ಕೊಡಬೇಕಿದೆ. ಇದರ ಜತೆಗೆ ನಾವು ಆರೋಗ್ಯವಂತರಾಗಿರಲು ಕಾಲಕಾಲಕ್ಕೆ ವೈದ್ಯಕೀಯ ಸಲಹೆ ಪಡೆದುಕೊಳ್ಳುವದರ ಜತೆಗೆ ಪ್ರತಿದಿನವೂ ಧ್ಯಾನ ಮಾಡಬೇಕು ಯಾವುದೆ ಅನ್ಯವಿಷಯಗಳಿಗೆ ತಲೆ ಕೆಡಿಸಿಕೊಂಡು ಒತ್ತಡ ಜೀವನ ನಡೆಸದೆ ಉತ್ತಮ ಜೀವನ ನಡೆಸಲು ಮುಂದಾಗಬೇಕು ಎಂದರು.
ಡಾ. ಅಯ್ಯನಗೌಡ ಹಿರಿಯರ ಆರೋಗ್ಯ ಕುರಿತು, ನ್ಯಾಯವಾಧಿ ಪಂಚಾಕ್ಷರಿ ಹುನಗುಂದ ಅವರು ಹಿರಿಯ ನಾಗರಿಕರ ಕಾನೂನು ಕುರಿತು ವಿಶೇಷ ಉಪನ್ಯಾಸ ನೀಡಿದರು.
75 ವರ್ಷ ಮೇಲ್ಪಟ್ಟ ನಿವೃತ್ತ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಾರಾಯಣಸಾ ಚೌಧರಿ ಸ್ವಾಗತಿಸಿದರು, ಸಿದ್ರಾಮಪ್ಪ ವಂದಾಲಿ ಪ್ರಾರ್ಥಿಸಿದರು. ಶರಣಪ್ಪ ಜಿಗೇರಿ ವರದಿ ವಾಚನ ಮಾಡಿದರು.