ಶಾಶ್ವತ ಕುಡಿವ ನೀರಿನ ವ್ಯವಸ್ಥೆ ರೂಪಿಸಲು ಚಿಂತನೆ

KannadaprabhaNewsNetwork |  
Published : Jun 10, 2025, 01:29 AM IST
ಫೋಟೋ ಜೂ.೯ ವೈ.ಎಲ್.ಪಿ. ೦೫ | Kannada Prabha

ಸಾರಾಂಶ

ಈ ಪ್ರದೇಶ ತೀರಾ ಹಿಂದುಳಿದಿದ್ದು, ಅಭಿವೃದ್ಧಿಯನ್ನು ಹಂತ ಹಂತವಾಗಿ ಮಾಡುತ್ತಿದ್ದೇನೆ

ಯಲ್ಲಾಪುರ: ಇಲ್ಲಿ ಬಹುತೇಕ ರೈತರು ಬಡವರಾಗಿದ್ದು. ರೈತರಿದ್ದರೆ ದೇಶ ಎಂಬುದನ್ನು ಅರಿತು ಈ ಪ್ರದೇಶದಲ್ಲಿ ₹ ೨೮೫ ಕೋಟಿ ವೆಚ್ಚದಲ್ಲಿ ೨೭೯ ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಹಣ ಬಿಡುಗಡೆ ಮಾಡಿಸಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಅಲ್ಲದೇ ಮದನೂರು ಮತ್ತು ಕಿರವತ್ತಿಗೆ ಬೊಮ್ಮನಳ್ಳಿಯಿಂದ ನೂರಾರು ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ರೂಪಿಸಲು ಚಿಂತನೆ ನಡೆಸಿದ್ದೇನೆ ಎಂದು ಶಾಸಕ ಶಿವರಾಮ ಹೆಬ್ಬಾರ್‌ ಹೇಳಿದರು.

ಸೋಮವಾರ ಕಿರವತ್ತಿ-ಮದನೂರು ಗ್ರಾಪಂ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಕಿರವತ್ತಿ ಸಭಾ ಭವನದಲ್ಲಿ ನಡೆದ ಜನಸಂಪರ್ಕ ಸಭೆ ಉದ್ಘಾಟಿಸಿ ಸಾಧಕ ವಿದ್ಯಾರ್ಥಿ, ಸಾರ್ವಜನಿಕರು, ಪೊಲೀಸ್ ಸಿಬ್ಬಂದಿಗಳನ್ನು ಸನ್ಮಾನಿಸಿ ಮಾತನಾಡಿದರು.

ಈ ಪ್ರದೇಶ ತೀರಾ ಹಿಂದುಳಿದಿದ್ದು, ಅಭಿವೃದ್ಧಿಯನ್ನು ಹಂತ ಹಂತವಾಗಿ ಮಾಡುತ್ತಿದ್ದೇನೆ. ಇಂತಹ ಅತೀ ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳು ೯೮ ಅಂಕ ಪಡೆದು ಸಾಧನೆ ಮಾಡುತ್ತಾರೆ ಎಂದರೆ ನಮಗೆಲ್ಲ ಹೆಮ್ಮೆಯಾಗುತ್ತದೆ. ಇಂತಹ ವಿದ್ಯಾರ್ಥಿಗಳಿಗೆ ನಾವು ಎಲ್ಲ ರೀತಿಯ ನೆರವು ನೀಡುತ್ತೇವೆ. ಕಿರವತ್ತಿಯಲ್ಲಿ ಎಲ್‌ಕೆಜಿಯಿಂದ ಪಿಯುವರೆಗೂ ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸಿದ್ದು. ₹ ೧೦ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಗೊಂಡಿದೆ, ಪೊಲೀಸ್ ಇಲಾಖೆ ಎಂದರೆ ಭಯಪಡಿಸುವುದಲ್ಲ. ಸಾರ್ವಜನಿಕರು ಮತ್ತು ಇಲಾಖೆಯು ಸಮನ್ವಯತೆಯಿಂದ ಸಮಾಜ ಘಾತುಕರನ್ನು ನಿಯಂತ್ರಿಸುವುದು, ಸಮಾಜದಲ್ಲಿ ಒಳ್ಳೆಯ ಜನರು ಬಾಳುವಂತೆ ಸೌಹಾರ್ದತೆ ಮೂಡಿಸುವುದು.ಈ ಕೆಲಸ ಆಗಬೇಕು. ಅದರಲ್ಲೂ ಬಡವರ, ಮಹಿಳೆಯರ ರಕ್ಷಣೆ ತೀರಾ ಅಗತ್ಯವಾಗಿದೆ. ಆ ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಕ್ಷತೆಯಿಂದ ಕೆಲಸ ನಿರ್ವಹಿಸುತ್ತಿರುವದನ್ನು ಕಾಣುತ್ತಿದ್ದೇವೆ. ಅಂತೆಯೇ ಯಲ್ಲಾಪುರ ಠಾಣೆಯ ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ ಎಂದರು.

ವಿಪ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಈ ಪ್ರದೇಶದಲ್ಲಿ ಅನಧಿಕೃತವಾಗಿ ಕಿರಾಣಿ ಅಂಗಡಿಗಳಲ್ಲಿಯೂ ಸರಾಯಿ ವ್ಯಾಪಾರ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಅಲ್ಲದೇ ಇಲ್ಲಿನ ಬಡವರಿಗೆ ಕಂದಾಯ ಮತ್ತು ಅರಣ್ಯಾಧಿಕಾರಿಗಳು ಯಾವುದೇ ರೀತಿಯ ತೊಂದರೆಗಳಾಗದಂತೆ ಕಾರ್ಯ ನಿರ್ವಹಿಸಬೇಕು ಮತ್ತು ಕೋಮು ಸೌಹಾರ್ದತೆಯಿಂದ ಎಲ್ಲರೂ ಜೀವನ ನಿರ್ವಹಿಸಬೇಕಾಗಿದೆ ಎಂದರು.

ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ.ಮಾತನಾಡಿ, ಕಿರವತ್ತಿಯ ಕಿರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಸಕರು ೧೬ ಸಿಸಿ ಕ್ಯಾಮೆರಾಕ್ಕೆ ಚಾಲನೆ ನೀಡಿದ್ದಾರೆ. ಅಲ್ಲದೇ ಶಾಸಕರ ನಿಧಿಯಿಂದ ನೀಡಲ್ಪಟ್ಟ ಜೀಪನ್ನು ಹಸ್ತಾಂತರಿಸಿದ್ದಾರೆ ಮತ್ತು ಬ್ಯಾರಿಕೇಡ್‌ ಲೊಕಾರ್ಪಣೆಗೊಳಿಸಿ ನಮ್ಮ ಇಲಾಖೆಗೆ ಅಗತ್ಯ ಸಹಾಯವನ್ನು ಶಾಸಕರು ಮಾಡಿದ್ದಾರೆ. ಅನಧಿಕೃತವಾಗಿ ಯಾವುದೇ ಚಟುವಟಿಕೆ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ಕಿರವತ್ತಿಯಲ್ಲಿ ಉತ್ತಮ ಆಸ್ಪತ್ರೆ ಆಗುತ್ತಿರುವುದು ಸಂತಸ ತಂದಿದೆ. ಯಲ್ಲಾಪುರದಲ್ಲಿ ರಾಜ್ಯದಲ್ಲೇ ಮಾದರಿ ಆಸ್ಪತ್ರೆ ನಿರ್ಮಿಸಲಾಗಿದೆ. ಸಾರ್ವಜನಿಕರು ಪೊಲೀಸರ ಜತೆ ಪ್ರೀತಿ, ಗೌರವದಿಂದ ನಡೆದುಕೊಳ್ಳುವಂತೆ ವಿನಂತಿಸಿದ ಅವರು, ಸಮಾಜಘಾತುಕ ವ್ಯಕ್ತಿಗಳನ್ನು ಮತ್ತು ಸೋಶಿಯಲ್ ಮೀಡಿಯಾದ ಮೂಲಕ ಕೋಮು ಘರ್ಷಣೆ, ತೇಜೋವಧೆ ಮಾಡುವಂತಹ ಬರಹ ಗಮನಿಸುತ್ತಿದ್ದೇವೆ. ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಹಿಂಜರಿಯುವುದಿಲ್ಲ ಎಂದರು.

ತಹಸೀಲ್ದಾರ ಯಲ್ಲಪ್ಪ ಗೋನೆಣ್ಣನವರ, ಕಿರವತ್ತಿ ಗ್ರಾಪಂ ಅಧ್ಯಕ್ಷೆ ಗೀತಾ ಕೊಕ್ರೆ, ಮದನೂರು ಗ್ರಾಪಂ ಅಧ್ಯಕ್ಷ ವಿಠ್ಠು ಶೆಳ್ಕೆ ಸೇರಿದಂತೆ ಪಿಎಸ್ಐ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪಿ.ಸಿ. ಮಹಾಂತೇಶ ಕಡಪಟ್ಟಿ ಪ್ರಾರ್ಥಿಸಿದರು. ಆರಕ್ಷಕ ನಿರೀಕ್ಷಕ ರಮೇಶ ಹಾನಾಪುರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಿವೈಎಸ್ಪಿ ಗೀತಾ ಪಾಟೀಲ ವಂದಿಸಿದರು. ಪತ್ರಕರ್ತ ಕೇಬಲ್ ನಾಗೇಶ, ಪಿ.ಸಿ.ರೇಖಾ ಎಂ.ಎಸ್. ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''