ಪೌರ್ಣಿಮೆ ಶ್ರಾವಣ ಪುರಾಣ ಪ್ರವಚನ ಸಮಾರಂಭದ ಸಾನ್ನಿಧ್ಯ, ಆಶೀರ್ವಚನ
ಮೌಲ್ಯಾಧಾರಿತ ಬದುಕಿನ ಚಿಂತನೆಗಳು ಆಶಾಕಿರಣ:ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ವಯಸ್ಸು ಇದ್ದಾಗ ವಿದ್ಯೆ, ಶಕ್ತಿಯಿದ್ದಾಗ ಹಣ, ಸಂಸ್ಕಾರದಿಂದ ಜ್ಞಾನ ಸಂಪಾದಿಸಿಕೊಂಡು ಬಾಳಬೇಕು. ಹೇಳುವ ಜ್ಞಾನ ಮಾಡುವ ಮನಸ್ಸೊಂದಿದ್ದರೆ ಸಾಕು ಸಕಲ ಕಾರ್ಯಗಳು ಸಿದ್ಧಿಸುತ್ತವೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.ರಂಭಾಪುರಿ ಪೀಠದಲ್ಲಿ ಶನಿವಾರ ನಡೆದ ಪೌರ್ಣಿಮೆ ಶ್ರಾವಣ ಪುರಾಣ ಪ್ರವಚನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸುಖದ ಸಂಪತ್ತು ಅನುಭವಿಸಬೇಕಾದರೆ ಕಷ್ಟದ ಅರಿವು ತಿಳಿದಿರಬೇಕಾಗುತ್ತದೆ. ಸಂಸ್ಕಾರ ಹೇಳಲು ಸನ್ಯಾಸ ಬೇಕಾಗಿಲ್ಲ. ಅನುಭಾವ ಹೇಳಲು ಪದವಿ ಬೇಕಾಗಿಲ್ಲ. ಸೇವೆ ಮಾಡಲು ಅಧಿಕಾರ ಅಂತಸ್ತು ಬೇಕಾಗಿಲ್ಲ. ಈ ಸುಂದರ ಜಗತ್ತು ದೇವರು ಸೃಷ್ಠಿಸಿದ ಆಟದ ಮೈದಾನ. ನಿಯತ್ತಿನಿಂದ ಆಟ ಆಡಿದರೆ ಗೆಲುವು ನೀತಿ ಮೀರಿ ನಡೆದರೆ ಸೋಲು ಖಚಿತ ಎಂಬುದನ್ನು ಮರೆಯಬಾರದು. ಜೀವನದಲ್ಲಿ ಆಸೆ ಕಳೆದುಕೊಂಡು ಬದುಕಬಹುದು. ಆದರೆ ಆಸಕ್ತಿ ಕಳೆದುಕೊಂಡು ಬಾಳಲಾಗದೆಂದು ನೀತಿ ಸಂಹಿತೆಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಪ್ರತಿಪಾದಿಸಿದ್ದಾರೆ.ದೇಶದಲ್ಲಿ ರಾಜ, ಸಮಾಜದಲ್ಲಿ ಗುರು, ಪರಿವಾರದಲ್ಲಿ ತಂದೆ ಮನೆಯಲ್ಲಿ ಸ್ತ್ರೀ ಇವರು ಎಂದಿಗೂ ಸಾಧಾರಣ ವ್ಯಕ್ತಿ ಗಳಲ್ಲ. ಏಕೆಂದರೆ ಅಭಿವೃದ್ಧಿ ಮತ್ತು ವಿನಾಶ ಇವೆರಡೂ ಇವರ ಕೈಯಲ್ಲಿಯೇ ಇರುತ್ತವೆ. ಯಾವ ವಿಶ್ವಾಸ ಹೋದರೂ ಯೋಚಿಸಬೇಕಾಗಿಲ್ಲ. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ದೇಹದ ಅಂದ ಚೆಂದ ಮರೆಯಾದರೂ ಚಿಂತೆಯಿಲ್ಲ. ಆದರೆ ಮನಸ್ಸು ಮಲಿನಗೊಳ್ಳದೇ ಪರಿಶುದ್ಧವಾಗಿರಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಮೌಲ್ಯಾಧಾರಿತ ಬದುಕಿನ ಬಂಡಿ ಸುಗಮವಾಗಿ ಗುರಿ ತಲುಪಲು ಕೊಟ್ಟ ಚಿಂತನೆಗಳು ಸಕಲರಿಗೂ ಆಶಾಕಿರಣವಾಗಿವೆ ಎಂದರು.
ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಮಾಡಿದ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ವ್ಯವಸ್ಥೆ ಬಹಳಷ್ಟು ಕಲುಷಿತಗೊಳ್ಳುತ್ತಿದೆ. ಸಂಸ್ಕಾರ ಮತ್ತು ಸಂಸ್ಕೃತಿಯ ಕೊರತೆ ಇದಕ್ಕೆಲ್ಲ ಕಾರಣವೆಂದರೆ ತಪ್ಪಾಗದು. ಕಿತ್ತು ತಂದಿದ್ದು ಹೊತ್ತು ಮುಳುಗುವವರೆಗೆ ಮಾತ್ರ ಇರುತ್ತದೆ. ನಿಯತ್ತಿನಿಂದ ದುಡಿದು ತಿನ್ನುವುದು ಜೀವನದ ಕೊನೆವರೆಗೆ ಇರುತ್ತದೆ ಎಂಬುದನ್ನು ಮರೆಯಬಾರದು.ನೀರು ಎರೆದವರಿಗೂ ಕಡಿಯ ಬಂದವರಿಗೂ ಬೇಧ ಎಣಿಸದೇ ಮರ ಹಣ್ಣು ನೆರಳು ನೀಡುತ್ತದೆ. ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡಲಾಗದಿದ್ದರೂ ಚಿಂತೆಯಿಲ್ಲ. ಆದರೆ ಕೆಡಕು ಬಯಸುವ ಬುದ್ಧಿ ಬರಬಾರದು ಎಂದರು. ಇದೇ ಸಂದರ್ಭದಲ್ಲಿ ಬಾಳಿಗೆ ಬೆಳಕು ಕೃತಿಯನ್ನು ಶ್ರೀ ರಂಭಾಪುರಿ ಜಗದ್ಗುರು ಬಿಡುಗಡೆ ಮಾಡಿದರು.
ಶ್ರಾವಣ ಧರ್ಮ ಸಮಾರಂಭದಲ್ಲಿ ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು, ಶ್ರೀ ಜಗದ್ಗುರು ರೇಣುಕಾ ಚಾರ್ಯ ಗುರುಕುಲದ ಕುಲಪತಿ ಸಿದ್ಧಲಿಂಗಯ್ಯ ಹಿರೇಮಠ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ೦೯ಬಿಹೆಚ್‌ಆರ್ ೫:ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಪೌರ್ಣಿಮೆ ಶ್ರಾವಣ ಪುರಾಣ ಪ್ರವಚನ ಸಮಾರಂಭದಲ್ಲಿ ಬಾಳಿಗೆ ಬೆಳಕು ಕೃತಿಯನ್ನು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಬಿಡುಗಡೆ ಮಾಡಿದರು. ವಿವಿಧ ಮಠಗಳ ಶಿವಾ ಚಾರ್ಯರು, ಗಣ್ಯರು ಉಪಸ್ಥಿತರಿದ್ದರು.