ಕೊಪ್ಪಳ:
ಬಿಎಸ್‌ಪಿಎಲ್ ಕಾರ್ಖಾನೆ ಹಠಾವೋ ಕೊಪ್ಪಳ ಬಚಾವೋ ಹೋರಾಟ ಬುಧವಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಬಿಎಸ್‌ಪಿಎಲ್ ಕಂಪನಿ ಗೇಟ್ ಒಳಗೆ ಸಾವಿರಾರು ಜಾನುವಾರು ನುಗ್ಗಿಸಿ ಪ್ರತಿಭಟನೆ ನಡೆಸಲಾಯಿತು. ಕೆರೆಯೊಳಗೆ ಜಾನುವಾರುಗಳಿಗೆ ನೀರು ಕುಡಿಸುವ ಮೂಲಕ ಕಂಪನಿಗೆ ಬಿಸಿ ಮುಟ್ಟಿಸಿದರು.ಕಾರ್ಖಾನೆ ಒಳಗಿನ ಕೆರೆಯಲ್ಲಿ ಜಾನುವಾರುಗಳು ನೀರು ಕುಡಿಯಲು ಅವಕಾಶ ಕಲ್ಪಿಸುವಂತೆ ಎಷ್ಟೇ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಬುಧವಾರ ಆಕ್ರೋಶಕೊಂಡ ರೈತರು, ಸಾವಿರಾರು ಕುರಿ, ಆಕಳು ಸೇರಿದಂತೆ ಜಾನುವಾರು ನುಗ್ಗಿಸಿದರು.
ಹೈಡ್ರಾಮಾ:ಗೇಟ್ ಒಳಗೆ ಜಾನುವಾರು ನುಗ್ಗಿಸಲು ಯತ್ನಿಸಿದಾಗ ಭದ್ರತಾ ಸಿಬ್ಬಂದಿ ತಡೆಯಲು ಯತ್ನಿಸಿದರು. ಆಗ ನೂಕಾಟ, ತಳ್ಳಾಟವಾಯಿತು. ಅಲ್ಲದೆ ಭದ್ರತಾ ಸಿಬ್ಬಂದಿ ಹಾಗೂ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಭದ್ರತಾ ಸಿಬ್ಬಂದಿ ಭೇದಿಸಿ ಜಾನುವಾರುಗಳು ಒಳ ನುಗ್ಗಿಸಲಾಯಿತು. ಜಾನುವಾರುಗಳು ಕೆರೆಯಲ್ಲಿ ನೀರು ಕುಡಿಯುತ್ತಿದ್ದರೆ ಇತ್ತ ಹೋರಾಟಗಾರರ ತಮ್ಮ ಹೋರಾಟಕ್ಕೆ ಯಶಸ್ಸು ಸಿಕ್ಕಿದ್ದು ಮುಂದಿನ ಹೋರಾಟದಲ್ಲಿ ಕಂಪನಿಯನ್ನೇ ಓಡಿಸುತ್ತೇವೆಂದು ಘೋಷಣೆ ಕೂಗಿದರು.
ಜಾನುವಾರುಗಳೊಂದಿಗೆ ಪ್ರತಿಭಟನೆ:ಬೆಳಗ್ಗೆ ಜಿಲ್ಲಾಡಳಿತ ಭವನದ ಎದುರು ಸಾವಿರಾರು ಜಾನುವಾರುಗಳೊಂದಿಗೆ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಮತ್ತು ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾಸಮಿತಿ ಪ್ರತಿಭಟನೆ ನಡೆಸಿ ಘೋಷಣೆ ಕೂಗಲಾಯಿತು. ಇದರಿಂದ ತಬ್ಬಿಬಾದ ಪೊಲೀಸರು ಜಾನುವಾರು ಹಿಮ್ಮೆಟ್ಟಿಸಲು ಹೆಣಗಾಡಿದರು. ಈ ವೇಳೆ ಜಾನುವಾರು ಮಾಲೀಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಇಲಾಖೆಗೆ ಯಾವುದೇ ಮಾಹಿತಿ ನೀಡಿದೆ ಜಾನುವಾರು ತಂದು ಪ್ರತಿಭಟನೆ ನಡೆಸುವುದು ಸರಿಯಲ್ಲ. ಅನಾಹುತವಾದರೆ ಯಾರು ಹೊಣೆ ಎಂದು ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದರು. ಆಗ ರೈತರು, ನಾವು ಜಾನುವಾರುಗಳನ್ನು ಕೆರೆಗೆ ನೀರು ಕುಡಿಯಲು ಕರೆದುಕೊಂಡು ಹೋದರೆ ಬಿಡುತ್ತಿಲ್ಲ. ಅದನ್ನೇಕೆ ಪ್ರಶ್ನಿಸಿ ರೈತರಿಗೆ ಅನುಕೂಲ ಮಾಡಿಕೊಡುತ್ತಿಲ್ಲ ಎಂದು ಮರು ಪ್ರಶ್ನಿಸಿದರು.ಉಪವಿಭಾಗಾಧಿಕಾರಿ ವಿರುದ್ಧ ಆಕ್ರೋಶ:
ಈ ವೇಳೆ ಮಾತನಾಡಿದ ಕೆ.ಬಿ. ಗೋನಾಳ, ಸುಪ್ರೀಂ ಕೋರ್ಟ್ ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತವಾಗಿಡಬೇಕು. ಜನ, ಜಾನುವಾರಗಳಿಗೆ ಕುಡಿಯುವ ನೀರು ಬಳಕೆಗೆ ಅವಕಾಶ ನೀಡಬೇಕು. ಇದಕ್ಕೆ ದಾರಿ ನೀಡಬೇಕು ಎಂದು ಆದೇಶಿಸಿದ್ದರೂ ಅಧಿಕಾರಿಗಳು ಇದನ್ನು ಜಾರಿಗೆ ತಂದಿಲ್ಲ. ಹೀಗಾಗಿ ಬಿಎಸ್‌ಪಿಎಲ್ ಕಂಪನಿಯವರು ಕೆರೆಯನ್ನು ಸಂಪೂರ್ಣ ಅತಿಕ್ರಮಿಸಿ ಕಾಂಪೌಂಡ್ ಕಟ್ಟಿಕೊಳ್ಳುವ ಮೂಲಕ ಕೋರ್ಟ್ ಆದೇಶಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರೂ ಪರಾಮರ್ಶೆ ಮಾಡದೆ ಕಂಪನಿ ಪರವಾಗಿ ವರದಿ ನೀಡಿದ್ದಾರೆ ಎಂದು ಹರಿಹಾಯ್ದರು. ಬಳಿಕ ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮವಹಿಸುವುದಾಗಿ ಹೇಳಿದರು.ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಅಲ್ಲಪ್ರಭು ಬೆಟ್ಟದೂರು, ಕೆ.ಬಿ. ಗೋನಾಳ, ಬಸವರಾಜ ಶೀಲವಂತರ, ಮಂಜುನಾಥ ಗೊಂಡಬಾಳ, ಶರಣು ಗಡ್ಡಿ, ಮುದಕಪ್ಪ ಹೊಸಮನಿ, ಮೂಕಪ್ಪ ಮೇಸ್ತ್ರಿ, ಯಮನೂರಪ್ಪ ಹಾಲಳ್ಳಿ, ಹನುಮಂತ ಜಂತ್ಲಿ, ಹನುಮಂತಪ್ಪ ಅರಸಿನಕೇರಿ, ಎಸ್.ಎ. ಗಫಾರ್, ಗಾಳೆಪ್ಪ ಮುಂಗೋಲಿ, ಶಿವಪ್ಪ ಹಡಪದ, ಮುಕುಬುಲ್ ರಾಯಚೂರು, ಯಮನೂರಪ್ಪ ಗೋರ್ಲೆಕೊಪ್ಪ ಮೊದಲಾದವರು ಇದ್ದರು.