ಚಾಮುಂಡಿಬೆಟ್ಟದಲ್ಲಿ ತುಂತುರು ಮಳೆಯ ನಡುವೆಯೂ ರಥ ಎಳೆದ ಸಹಸ್ರಾರು ಭಕ್ತರು

KannadaprabhaNewsNetwork |  
Published : Oct 25, 2026, 01:15 AM IST
1 | Kannada Prabha

ಸಾರಾಂಶ

ಮೋಡ ಮುಸುಕಿದ ವಾತಾವರಣದಲ್ಲಿ ಬೀಳುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಮುಂಜಾನೆಯೇ ಸಾವಿರಾರು ಮಂದಿ ಬೆಟ್ಟಕ್ಕೆ ಆಗಮಿಸಿದ್ದರು. ದಸರಾ ಮಹೋತ್ಸವದ ಬಳಿಕ ನಡೆಯುವ ರಥೋತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಳ್ಳುತ್ತಾರೆ. ಈ ವೇಳೆ ಭಕ್ತರು ತೇರನ್ನು ಎಳೆದು, ಜಯಘೋಷ ಕೂಗುತ್ತ ಪುನೀತ ಭಾವ ತಳೆದರು.

ಕನ್ನಡಪ್ರಭ ವಾರ್ತೆ ಮೈಸೂರು

ಚಾಮುಂಡಿಬೆಟ್ಟದ ಚಾಮುಂಡೇಶ್ವರಿದೇವಿಯ ದಿವ್ಯ ರಥೋತ್ಸವವು ಸಹಸ್ರಾರು ಭಕ್ತರ ಜಯಘೋಷ, ತುಂತುರು ಮಳೆಯ ನಡುವೆ ಶನಿವಾರ ವಿಜೃಂಭಣೆಯಿಂದ ನೆರವೇರಿತು.

ಮೋಡ ಮುಸುಕಿದ ವಾತಾವರಣದಲ್ಲಿ ಬೀಳುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಮುಂಜಾನೆಯೇ ಸಾವಿರಾರು ಮಂದಿ ಬೆಟ್ಟಕ್ಕೆ ಆಗಮಿಸಿದ್ದರು. ದಸರಾ ಮಹೋತ್ಸವದ ಬಳಿಕ ನಡೆಯುವ ರಥೋತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಳ್ಳುತ್ತಾರೆ. ಈ ವೇಳೆ ಭಕ್ತರು ತೇರನ್ನು ಎಳೆದು, ಜಯಘೋಷ ಕೂಗುತ್ತ ಪುನೀತ ಭಾವ ತಳೆದರು.

ಶನಿವಾರ ಬೆಳಗ್ಗೆ 7.55 ರಿಂದ 8.15 ರವರೆಗಿನ ಶುಭ ಲಗ್ನದಲ್ಲಿ ಚಾಮುಂಡೇಶ್ವರಿಯ ದಿವ್ಯ ರಥೋತ್ಸವ ನಡೆದರೆ, ಸಂಜೆ ಮಂಟಪೋತ್ಸವ, ಸಿಂಹವಾಹನೋತ್ಸವ ಹಾಗೂ ಹಂಸವಾಹನೋತ್ಸವವೂ ನೆರವೇರಿತು.

ಇದಕ್ಕೂ ಮುನ್ನ ತೇರಡಿ ಉತ್ಸವ ನಡೆದು ಮಂಟಪೋತ್ಸವ ನೆರವೇರಿತು. ಈ ಸಂದರ್ಭದಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ತ್ರಿಷಿಕಾ ಕುಮಾರಿ ಅವರು ಶಕ್ತಿದೇವತೆ ಶ್ರೀಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಯದುವೀರ್ ಪುತ್ರ ಆದ್ಯವೀರ್ ಒಡೆಯರ್ ಕೂಡ ಜತೆಗೆ ಇದ್ದರು.

ರಾಜವಂಶಸ್ಥೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ರಥವನ್ನು ಎಳೆಯುವ ಮೂಲಕ ಚಾಲನೆ ನೀಡಿದರು. ಇವರೊಂದಿಗೆ ಶ್ರೀಕ್ಷೇತ್ರ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರ ಪತ್ನಿ ಲಲಿತಾ ಸೇರಿದಂತೆ ಇನ್ನಿತರರು ಇದ್ದರು.

ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿವುಳ್ಳ ರಥೋತ್ಸವ ಆರಂಭವಾಗುತ್ತಿದ್ದಂತೆ ಪೊಲೀಸರು ಸಂಪ್ರದಾಯದಂತೆ 21 ಸುತ್ತು ಕುಶಾಲತೋಪು ಸಿಡಿಸಿ ಚಾಮುಂಡೇಶ್ವರಿ ದೇವಿಗೆ ಗೌರವ ಸಲ್ಲಿಸಿದರು. 8 ಗಂಟೆ ಸಮಯದಲ್ಲಿ ಆರಂಭವಾದ ಚಾಮುಂಡೇಶ್ವರಿಯ ತೇರು ದೇವಸ್ಥಾನವನ್ನು ಒಂದು ಸುತ್ತು ಬರಲು ಒಂದು ಗಂಟೆಕಾಲ ಹಿಡಿಯಿತು. ಚಾಮುಂಡಿ ಬೆಟ್ಟದ ಪ್ರಧಾನ ಆಗಮಿಕರಾದ ಶಶಿಶೇಖರ್ ದೀಕ್ಷಿತ್ ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.

ಈ ಧಾರ್ಮಿಕ ಕಾರ್ಯಕ್ರಮಕ್ಕೆ ಮೈಸೂರು ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು. ಮಂಗಳವಾದ್ಯ, ಪೊಲೀಸ್ ಬ್ಯಾಂಡ್, ಜಾನಪದ ತಂಡಗಳಾದ ಕಂಸಾಳೆ, ಡೊಳ್ಳು ಕುಣಿತ, ವೀರಭದ್ರನ ಕುಣಿತ, ತಮಟೆ, ನಗಾರಿ ಮುಂತಾದ ವಾದ್ಯಗಳೊಂದಿಗೆ ತೇರು ಸಾಗಿತು.

ದೇವಸ್ಥಾನದ ಬಳಿಯಿದ್ದ ಜನರು ರಥ ಆಗಮಿಸುತ್ತಿದ್ದಂತೆ ಹಣ್ಣು ಜವನ ಎಸೆದು ತಮ್ಮ ಅರಕೆ ಸಲ್ಲಿಸಿದರು. ರಥೋತ್ಸವದ ಹಿನ್ನೆಲೆಯಲ್ಲಿ ಮುಂಜಾನೆ ನಾಲ್ಕು ಗಂಟೆಯಿಂದಲೇ ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮ ಆರಂಭವಾಗಿದ್ದವು. ಮುಂಜಾನೆಯಿಂದಲೇ ಭಕ್ತರು ನಗರ, ಗ್ರಾಮಾಂತರ ಪ್ರದೇಶದಿಂದ ಆಗಮಿಸಿ ಸುತ್ತಲೂ ಜವಾವಣೆಗೊಂಡಿದ್ದರು. ರಥೋತ್ಸವವು ತಮ್ಮ ಮುಂದೆ ಹಾದು ಹೋಗುತ್ತಿದ್ದಂತೆ ಚಾಮುಂಡಮ್ಮನಿಗೆ ಜಯವಾಗಲಿ, ತಾಯಿ ಚಾಮುಂಡೇಶ್ವರಿಗೆ ಜಯವಾಗಲಿ ಎಂದು ಘೋಷಣೆ ಕೂಗುತ್ತ ಹಣ್ಣು- ಜವನ ಎಸೆಯುತ್ತಿದ್ದದ್ದು ಕಂಡುಬಂತು.

ರಥೋತ್ಸವ ಪ್ರಯುಕ್ತ ಚಾಮುಂಡಿಬೆಟ್ಟದಲ್ಲಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು. ರಥೋತ್ಸವ ತೆರಳುವ ವೇಳೆ ಭಕ್ತರ ನೂಕುನುಗ್ಗಲು ತಪ್ಪಿಸಲು ಪೊಲೀಸರು ಅಗತ್ಯ ಸುರಕ್ಷತಾ ಕ್ರಮ ಕೈಗೊಂಡಿದ್ದರು. ನೂಕು ನುಗ್ಗಲಿನಲ್ಲಿ ಸರಗಳ್ಳರು ಹಾಗೂ ಜೇಬುಗಳ್ಳರನ್ನು ನಿಯಂತ್ರಿಸುವ ಸಲುವಾಗಿ ಮಫ್ತಿಯಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.

ಅ. 26 ರಂದು ಸಂಜೆ 7ಕ್ಕೆ ದೇವಿಕೆರೆಯಲ್ಲಿ ಚಾಮುಂಡೇಶ್ವರಿ ತೆಪ್ಪೋತ್ಸವ ನಡೆಯಲಿದೆ.

ಸಾಂಪ್ರದಾಯಿಕ ಉಡುಗೆಯಲ್ಲಿ ಯದುವೀರ್:

ಅರಮನೆಯಿಂದ ಮೈಸೂರು ಪೇಟ ಹಾಗೂ ಬಿಳಿ ಬಣ್ಣದ ಉದ್ದನೆಯ ಖುರ್ತಾ ಧರಿಸಿದ್ದ ಯದುವೀರ್ ಸೇರಿದಂತೆ ಚಾಮುಂಡಿಬೆಟ್ಟಕ್ಕೆ ಬಂದ ರಾಜವಂಶಸ್ಥರು ದೇವಸ್ಥಾನದ ಒಳಗೆ ಆಗಮಿಸಿ ಮೂಲ ಚಾಮುಂಡಿ ತಾಯಿಗೆ ನಮಸ್ಕರಿಸಿದರು.

ನಂತರ, ಹೊರಬಂದು ಉತ್ಸವ ಮೂರ್ತಿಯ ಬಲ ಭಾಗದಲ್ಲಿನ ಮಹಾಬಲೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಮಂಟಪದಲ್ಲಿ ಅರ್ಧ ತಾಸಿಗೂ ಹೆಚ್ಚು ಕಾಲ ನವಗ್ರಹ ಹೋಮದಲ್ಲಿ ಪಾಲ್ಗೊಂಡು ಚಾಮುಂಡಿತಾಯಿ ದೇವಸ್ಥಾನ ಪ್ರದಕ್ಷಿಣೆ ಹಾಕಿ ನಂತರ ರಥ ಎಳೆಯುವ ಮೂಲಕ ಮಹಾಮಂಗಳಾರತಿ ಸ್ವೀಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿಯಲ್ಲಿ ಗೆದ್ದ ಸಿರಿಗೆರೆಯ ಎಂಟೆಕ್ ಪದವೀಧರ!
ಎನ್‌ಸಿಡಿ ತಪಾಸಣೆಯಲ್ಲಿ ಚಿಕ್ಕಮಗಳೂರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ: ಯು.ಟಿ. ಖಾದರ್ ಅಭಿನಂದನೆ