ಕನ್ನಡಪ್ರಭ ವಾರ್ತೆ ಕಲಬುರಗಿ
ಸದರಿ ಪತ್ರದಲ್ಲಿ ಎನ್ಕೌಂಟರ್ ಮಾಡೋದಾಗಿ ಪ್ರಿಯಾಂಕ್ ಖರ್ಗೆಯವರಿಗೆ ಧಮಕಿ ಹಾಕಿದ್ದಲ್ಲದೆ ಇಡೀ ಪತ್ರದ (ಇನ್‌ಲ್ಯಾಂಡ್ ಲೇಟರ್) ತುಂಬಾ ಅವರ ಪರಿವಾರದ ಪುರುಷ, ಮಹಿಳಾ ಸದಸ್ಯರ ಹೆಸರು ಪ್ರಸ್ತಾಪಿಸಿ, ಅವರ ಜಾತಿಯನ್ನು ಹೇಳುತ್ತ ಅವಾಚ್ಯವಾಗಿ ನಿಂದಿಸಲಾಗಿದೆ.
ಅಂಚೆ ಇಲಾಖೆ ಅಂತರ್ ದೇಸೀಯ ಪತ್ರ (ಇನ್‌ಲ್ಯಾಂಡ್ ಲೆಟರ್) ಬಳಸಿ ಅನಾಮಧೇಯರು ಇದೇ ಫೆ.15ರಂದು ಸದರಿ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಪ್ರಿಯಾಂಕ್‌ರ ಸಚಿವಾಲಯದ ಕೋಣೆ ವಿಳಾಸವಿದೆ. ಹಿಂದುಗಡೆ ಅಸ್ಪಷ್ಟವಾಗಿರುವಂತಹ ಕೈ ಬರಹದ ಹೆಸರು ಇದ್ದು ಗುಲ್ಬರ್ಗ ಎಂದು ನಮೂದಾಗಿದೆ. ಅಂಚೆ ಇಲಾಖೆ ಸೀಲ್ ಕೂಡಾ ಕಲಬುರಗಿಯದ್ದೇ ಆಗಿರೋದು ಸ್ಪಷ್ಟವಾಗಿದೆ. ಈ ಪತ್ರ ಸಚಿವ ಖರ್ಗೆಯವರ ವಿಧಾನಸೌಧ ಕಚೇರಿಗೆ ಇದೇ ಮಾ.13ರಂದು ತಲುಪಿದೆ.ಈ ಪತ್ರ ತಲುಪುತ್ತಿದ್ದಂತೆಯೇ ಚುರುಕಾಗಿರುವ ಖರ್ಗೆಯವರ ಆರ್‌ಡಿಪಿಆರ್ ಸಚಿವಾಲಯದ ಸಿಬ್ಬಂದಿ ಸುದ್ದಿ ಸಚಿವರಿಗೂ ತಲುಪಿಸಿದ್ದಾರೆ.
ನನ್ನ ಹೆಣ ಬೀಳಿಸಿಯಾದ್ರೂ ಚುನಾವಣೆ ಗೆಲ್ಲಲು ಬಿಜೆಪಿ ಪ್ಲಾನ್: ಖರ್ಗೆ
ಗಲಭೆ ಸೃಷ್ಟಿ ಮಾಡಿ ಚುನಾವಣೆ ಮಾಡಬೇಕು ಅಂತಿದ್ದಾರೆ. ನನ್ನ ಹೆಣ ಬೀಳಿಸಿಯಾದ್ರೂ ಚುನಾವಣೆ ಗೆಲ್ಲುವ ಪ್ಲಾನ್ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದರು.
ನೀವೇ (ಬಿಜೆಪಿ) ಈ ಚುನಾವಣೆಯಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದೀರಿ. ಗೊಂದಲ ಸೃಷ್ಟಿಸಿ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದ್ದೀರಿ. ಗಲಭೆ ಸೃಷ್ಟಿ ಮಾಡಿ ಚುನಾವಣೆ ಮಾಡಬೇಕು ಅಂತಿದ್ದೀರಿ. ನನ್ನ ಸಾವು ಬಯಸುತ್ತಿದ್ದೀರಿ, ನನ್ನ ಹೆಣ ಬೀಳಿಸಿಯಾದರೂ ಚುನಾವಣೆ ಗೆಲ್ಲಬೇಕು ಎಂದು ಕುಳಿತಿದ್ದೀರಿ. ಅದಕ್ಕೇ ಸ್ಥಳೀಯ ಸಂಸದರು ಪದೇ ಪದೇ ಕಾನೂನು ಸುವ್ಯವಸ್ಥೆ ಹಾಳಗಿದೆ ಎಂದು ದೂರುತತಿದ್ದಾರೆ. ಇವೆಲ್ಲ ನೋಡಿದರೆ ಅವರ ಪ್ಲಾನ್ ಸುವ್ಯವಸ್ಥೆ ಹಾಳು ಮಾಡಿ ಚುನಾವಣೆ ಗೆಲ್ಲೋದೇ ಆಗಿರುವಂತಿದೆ ಎಂದು ದೂರಿದರು.
ಬಿಜೆಪಿಯವರಿಗೆ ಖರ್ಗೆ ಪರಿವಾರವನ್ನ, ಅದರಲ್ಲೂ ನನ್ನನ್ನು ರಾಜಕೀಯವಾಗಿ ಎದುರಿಸಲು ಆಗುತ್ತಿಲ್ಲ. ನನ್ನ ಹೆಸರು ಹೇಳದೆ ಅವರಿಗೆ ತಿಂದ ಅನ್ನ ಪಚನವಾಗುತ್ತಿಲ್ಲ. ವಿನಾಕಾರಣ ನನ್ನನ್ನು ಟೀಕಿಸಿ ಮಾತನಾಡುತ್ತಾರೆ. ನಾನು ಇದ್ದದ್ದು ಇದ್ದಹಾಗೆ ಹೇಳಿದರೆ ಅವರಿಗೆ ಕಿರಿಕಿರಿ ಆಗೋದಾದರೆ ವಿಷಯ ಸಂಬಂಧಿಸಿ ಮಾತನಾಡಲಿ, ಅದನ್ನು ಬಿಟ್ಟು ನನಗೆ ವೈಯಕ್ತಿಕವಾಗಿ ಟೀಕಿಸುತ್ತ ಚಾರಿತ್ರ್ಯ ವಧೆಗೆ ಬಿಜೆಪಿಗರು ಕಳೆದ 3 ವರ್ಷದಿಂದ ಅದೇ ಕೆಲಸ ಮಾಡುತ್ತಿದ್ದಾರೆಂದು ಉದಾಹರಣೆ ಸಮೇತ ವಿವರಿಸಿದರು.
ಚಿಂಚೋಳಿ ಸಂಸದರು ಎಂದು ಕಲಬುರಗಿ ಸಂಸದ ಡಾ. ಉಮೇಶ ಜಾಧವ್‌ರಿಗೆ ಗೇಲಿ ಮಾಡಿದ ಖರ್ಗೆ, ನಾನು ಬಳೆ ತೊಟ್ಟುಕೊಂಡಿಲ್ಲ, ಆಖಾಡದಲ್ಲಿ ರೆಡಿಯಿದ್ದೇನೆ ಎಂದು ಸಂಸದ ಉಮೇಶ್ ಜಾದವ್ ಅವರೇ ಹೇಳುತ್ತಾರೆ. ನನಗೆ ಬಂದಿರುವ ಈ ಜೀವ ಬೆದರಿಕೆ ಪತ್ರಕ್ಕೆ ನಮ್ಮ ಸಂಸದರೇ ಉತ್ತರ ನೀಡಬೇಕು. ನೇರವಗಿ ಮನುವಾದಿಗಳೇ ಬೇದರಿಕೆ ಹಾಕುತ್ತಿದ್ದಾರೆ ಎಂದು ಪ್ರಿಯಾಂಕ್ ದೂರಿದರು.
ಸುದ್ದಿಗೋಷ್ಠಿಯಲ್ಲಿ ಕೆಕೆಆರಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಶಾಸಕರಾದ ಅಲ್ಲಂಪ್ರಭು ಪಾಟೀಲ್, ತಿಪ್ಪಣಪ್ಪ ಕಮಕನೂರ , ಪ್ರಮುಖರಾದ ಪ್ರವೀಣ ಪಾಟೀಲ್ ಹರವಾಳ, ಅರವಿಂದ ಚವ್ಹಾಣ, ಡಾ.ಕಿರಣ ದೇಶಮುಖ, ಶಿವಾನಂದ ಹೊನಗುಂಟ, ಈರಣ್ಣ ಝಳಕಿ ಇದ್ದರು.
ನಾವು ಯಾರೂ ಕೂಡಾ ಬಾಯಿಯಿಂದ ಓದಲು ಆಗದ ಮತ್ತು ಸುಶಿಕ್ಷಿತರು ಓದಲು ಆಗದ ಅತ್ಯಂತ ಕೀಳು ಮಟ್ಟದ ಶಬ್ಧ ಬಳಸಿ ಬೆದರಿಕೆ ಪತ್ರ ಬರೆದಿದ್ದಾರೆ. ನನ್ನ ಕೊಲೆ ಮಾಡಿಯಾದರೂ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಂತೆ ಕಾಣುತ್ತಿರುವ ಕಾಣದ ಕೈಗಳು ಈ ರೀತಿ ಬೆದರಿಕೆ ಹಾಕಿದರೆ ಇಲ್ಲಿ ಅಂಜುವವರು ಯಾರು ಇಲ್ಲ. ನಾವು ಸಂವಿಧಾನ ಅಡಿಯಲ್ಲಿ ಚುನಾವಣೆ ನಡೆಸುತ್ತೆವೆ. ಡಾ.ಉಮೇಶ ಜಾಧವ್, ಮುಕ್ತ ಚುನಾವಣೆ ಬಗ್ಗೆ ಅನುಮಾನಿಸಿ ಹೇಳಿಕೆ ನೀಡುತ್ತಿರುವುದು ಗಮನಿಸಿದರೆ ಗದ್ದಲ ಎಬ್ಬಿಸಿ ಗೆಲ್ಲುವ ಯೋಚನೆಯಲ್ಲಿ ಇದ್ದಾರೆ. ಇದು ಎಂದಿಗೂ ಸಾಧ್ಯವಿಲ್ಲ.ಪ್ರಿಯಾಂಕ್ ಖರ್ಗೆ, ಆರ್‌ಡಿಪಿಆರ್ ಸಚಿವರು, ಕರ್ನಾಟಕ ಸರ್ಕಾರ