ಅವಿಶ್ವಾಸದ ಬೆದರಿಕೆ; ಗ್ರಾಪಂ ಅಧ್ಯಕ್ಷ ಆತ್ಮಹತ್ಯೆಗೆ ಶರಣು!

KannadaprabhaNewsNetwork |  
Published : Oct 30, 2024, 12:32 AM ISTUpdated : Oct 30, 2024, 12:33 AM IST
29ಕೆಪಿಎಲ್ಎನ್ಜಿ02 : ದ್ಯಾವಪ್ಪ ಜಗಲೇರ. | Kannada Prabha

ಸಾರಾಂಶ

ನೀನು ರಾಜೀನಾಮೆ ಕೊಟ್ಟಿದ್ದಿ, ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ಸು ತೆಗೆದುಕೊಳ್ಳಬೇಡ, ವಾಪಸ್ಸು ಪಡೆದರೆ ಅಧ್ಯಕ್ಷ ಸ್ಥಾನಕ್ಕೆ ಅವಿಶ್ವಾಸ ಮಾಡುತ್ತೇವೆ ಎಂದು ಸೋಮಪ್ಪ ಹುಬ್ಬಳ್ಳಿ ಎಂಬಾತ ಐದಬಾವಿ ಗ್ರಾಮದ ದ್ಯಾವಪ್ಪ ಜಗಲೇರಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಅಧ್ಯಕ್ಷ ಸ್ಥಾನಕ್ಕೆ ಅವಿಶ್ವಾಸ ಮಾಡುವ ಬೆದರಿಕೆ ಹಾಕಿದ್ದಾರೆಂದು ತಾಲೂಕಿನ ದೇವರಬೂಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 5 ಜನ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಓರ್ವ ಗ್ರಾಮ ಪಂಚಾಯ್ತಿಯ ಸದಸ್ಯೆ ಪತಿಯ ಮೇಲೆ ಪ್ರಕರಣ ದಾಖಲಾಗಿದೆ.

ದೇವರಬೂಪುರ ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು 23 ಜನ ಸದಸ್ಯರು ಇದ್ದಾರೆ. ಮೊದಲ ಅವಧಿಗೆ ಅಧ್ಯಕ್ಷರಾಗಿದ್ದ ಐದಬಾವಿ ಗ್ರಾಮದ ದ್ಯಾವಪ್ಪ ಜಗಲೇರ (74), ಐದಬಾವಿ ಗ್ರಾಮದ ಹೊಲದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ದ್ಯಾವಪ್ಪ ಜಗಲೇರ ದೇವರಬೂಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಇದೇ 24ರಂದು ರಾಜೀನಾಮೆ ಕೊಟ್ಟದ್ದರು.

2ನೇ ಆರೋಪಿಯಾದ ಅಮರೇಶನ ತಂದೆ ಸೋಮಪ್ಪ ಹುಬ್ಬಳ್ಳಿ ಆತ್ಮಹತ್ಯೆ ಮಾಡಿಕೊಂಡ ಅಧ್ಯಕ್ಷನಿಗೆ ‘ನೀನು ರಾಜೀನಾಮೆ ಕೊಟ್ಟಿದ್ದಿ, ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ಸು ತೆಗೆದುಕೊಳ್ಳಬೇಡ, ವಾಪಸ್ಸು ಪಡೆದರೆ ಅಧ್ಯಕ್ಷ ಸ್ಥಾನಕ್ಕೆ ಅವಿಶ್ವಾಸ ಮಾಡುತ್ತೇವೆ. ಆದ್ದರಿಂದ ನೀನು ನಮ್ಮ ಜೊತೆ ಇರಬೇಕು’ ಎಂದು ಬೆದರಿಕೆ ಹಾಕಿದ್ದಾನೆ. ಆಗ ದ್ಯಾವಪ್ಪ ನಾನು ಎಲ್ಲಿಗೂ ಬರುವುದಿಲ್ಲ. ರಾಜೀನಾಮೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಪ್ರಕರಣದ ಆರೋಪಿಗಳಾದ ಐದಬಾವಿ ಗ್ರಾಮದ ನಿಂಗಪ್ಪ ತಂದೆ ಈರಪ್ಪ ಕೆಂಗೇರಿ, ಅಮರೇಶ ತಂದೆ ಸೋಮಪ್ಪ ಹುಬ್ಬಳ್ಳಿ, ಅಯ್ಯಾಳಪ್ಪ ತಂದೆ ಬಸ್ಸಪ್ಪ ಕರ್ನಾಳ, ನಾಗಪ್ಪ ಅಡವಿಬಾವಿಯರ ದೊಡ್ಡಿ, ಹನುಮಂತ ಎಣ್ಣೇರ, ಸೋಮಲಿಂಗಪ್ಪ ‘ಜಗಲೇರ, ನೀನು ಸುಮ್ಮನೆ ನಮ್ಮ ಜೊತೆಗೆ ಬಂದರೆ ಸರಿ, ಇಲ್ಲದಿದ್ದರೆ ನಿನ್ನ ಎತ್ತಾಕಿಕೊಂಡು ಹೋಗುತ್ತೇವೆ’ ಎಂದು ಎಳೆದಾಡಿ ಅವಮಾನ ಮಾಡಿದ್ದಾರೆ. ಇದರಿಂದ ಅಧ್ಯಕ್ಷ ದ್ಯಾವಪ್ಪ ಮನಸ್ಸಿಗೆ ನೋವು ಮಾಡಿಕೊಂಡು ಸೋಮವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದ ಮೃತರ ಮಗ ಸೋಮಲಿಂಗ ಜಗಲೇರ ದೂರು ನೀಡಿದ್ದಾರೆ. ಮೃತ ಅಧ್ಯಕ್ಷನ ಮಗನ ದೂರು ಆಧರಿಸಿ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ