ಸತತ ಮಳೆಯಿಂದ ತೊಗರಿ ಬೆಳೆಗೆ ನೆಟೆ ರೋಗ ಭೀತಿ

KannadaprabhaNewsNetwork |  
Published : Aug 31, 2024, 01:33 AM ISTUpdated : Aug 31, 2024, 01:34 AM IST
ಫೋಟೋ - ಭೀಮಾ ಕ್ರಾಪ್‌ಅಫಜಲ್ಪುರ ಪಟ್ಟಣ ಸೇರಿದಂತೆ ತಾಲೂಕಿನ ಭೀಮಾ ನದಿ ತೀರದ ಗ್ರಾಮಗಳಲ್ಲಿ ಸತತ ಸುರಿಯುತ್ತಿರುವ ಮಳೆಗೆ ತೊಗರಿ ಬಿತ್ತನೆ ಮಾಡಿದ ಜಮೀನುಗಳಲ್ಲಿ ನೀರು ಸಂಗ್ರಹವಾಗಿರುವುದು | Kannada Prabha

ಸಾರಾಂಶ

ಅಫಜಲ್ಪುರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಳೆ ಬೀಳುತ್ತಿರುವ ಹಿನ್ನೆಲೆ ಭೀಮಾ ನದಿ ತೀರದ ಜಮೀನುಗಳಲ್ಲಿ ನೀರು ನಿಂತಿದ್ದು, ತೊಗರ ಸೇರಿದಂತೆ ವಿವಿಧ ಬೆಳೆಗಳು ರೋಗಗಳಿಗೆ ತುತ್ತಾಗುವ ಆತಂಕದಲ್ಲಿ ರೈತರು ಇದ್ದಾರೆ.

ಕನ್ನಡಪ್ರಭ ವಾರ್ತೆ ಅಫಜಲ್ಪುರ

ಸತತ ಸುರಿಯುತ್ತಿರುವ ಮಳೆಯಿಂದ ಭೀಮಾ ನದಿ ತೀರದ ಜಮೀನುಗಳಲ್ಲಿ ನೀರು ಸಂಗ್ರಹಗೊಂಡಿದ್ದು, ಬಿತ್ತನೆ ಮಾಡಿದ ತೊಗರಿ ಬೆಳೆ ನೆಟೆ ರೋಗಕ್ಕೆ ತುತ್ತಾಗುವ ಭೀತಿಯಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಎರೆ ಜಮೀನುಗಳು ಸೇರಿದಂತೆ ಭೀಮಾ ನದಿ ತೀರದ ಗ್ರಾಮಗಳಾದ ಶೇಷಗಿರಿ, ಮಣ್ಣೂರ, ಕುಡಗನೂರ, ಶಿವೂರ, ಉಡಚಣ, ಹಿರಿಯಾಳ, ಭೋಸಗಾ, ದುದ್ದುಣಗಿ, ಮಂಗಳೂರ, ಅಳ್ಳಗಿ, ಶಿವಪುರ, ಬನ್ನಟ್ಟಿ, ಘತ್ತರಗಾ, ಬಟಗೇರಾ, ದೇವಲ ಗಾಣಗಾಪುರ, ಸೇರಿದಂತೆ ಹಲವು ಗ್ರಾಮಗಳ ಜಮೀನುಗಳಲ್ಲಿ ಕಳೆದ ಒಂದು ವಾರದಿಂದ ದಿನ ಬಿಟ್ಟು ದಿನ ಸುರಿಯುತ್ತಿರುವ ಮಳೆಯಿಂದ ಜಮೀನುಗಳ ಅರ್ಧ ಭಾಗ ನೀರಿನಿಂದ ಆವೃತ್ತವಾಗಿ ಬಿತ್ತನೆ ಮಾಡಿದ ಬಹುತೇಕ ತೊಗರಿ ಬೆಳೆ ನೀರಲ್ಲಿ ನಿಂತಿದೆ.

ಮಣ್ಣೂರ ಗ್ರಾಮದ ರೈತ ಮಲಕಪ್ಪ ಕರಜಗಿ, ಮಹ್ಮದ ಕರೀಮ, ಮಂಗಲಗಿರಿ ಚನ್ನಪ್ಪ ನಾಯಕೋಡಿ ಮಾತನಾಡಿ, ಬಿತ್ತನೆ ಮಾಡಿದ ತೊಗರಿ ಬೆಳೆಗೆ 15 ದಿನಗಳಿಗೊಮ್ಮೆ ಮಳೆ ಬಂದರೆ ಸಾಕಾಗಿತ್ತು. ಆದರೆ, ಈಗ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜಮೀನುಗಳ ಅರ್ಧ ಭಾಗ ನೀರಿನಿಂದ ತುಂಬಿ ತೊಗರಿ ಬೆಳೆ ನೆಟೆ ರೋಗಕ್ಕೆ ತುತ್ತಾಗಿದೆ. ಈಗ ಬರುತ್ತಿರುವ ಮಳೆ ಇನ್ನೂ ಮುಂದುವರಿದರೆ ಉಳಿದ ಬೆಳೆಯೂ ಹಾಳಾಗುವುದರಲ್ಲಿ ಸಂದೇಹವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಕೆಲವು ಮರಡಿ ಜಮೀನುಗಳಿಗೆ ಮಳೆ ಉತ್ತಮವಾಗಿರಬಹುದು. ಆದರೆ, ಹಿತ ಮಿತ ತೇವಾಂಶ ಬಯಸುವ ಎರೆ ಜಮೀನುಗಳಿಗೆ ಅತಿ ತೇವಾಂಶವಾದರೆ ಬೆಳೆ ಬರುವುದೇ ಕಷ್ಟ. ಈಗಾಗಲೇ ಭೀಮಾ ನದಿ ತೀರದ ಜಮೀನುಗಳಲ್ಲಿ ಶೇ.10ರಷ್ಟು ನೀರು ನಿಂತಿದೆ. ಈಗ ಮಳೆ ನಿಲ್ಲಬೇಕು. ಆಗ ಮಾತ್ರ ಉಳಿದ ಬೆಳೆಯಾದರೂ ಬರುತ್ತದೆ ಎಂದರು.

ಈಗ ಬಂದ ಮಳೆಯಿಂದಾಗಿ ಜಮೀನುಗಳ ಕೆಲವು ಒಡ್ಡುಗಳು ಸಹ ಹಾಳಾಗಿವೆ. ಬಿತ್ತನೆ ಮಾಡಿದ ತೊಗರಿಯಲ್ಲಿ ಅರ್ಧ ಬೆಳೆ ನೆಟೆ ರೋಗಕ್ಕೆ ಒಳಗಾಗಿದೆ. ಹೀಗಾದರೆ ರೈತರ ಪರಿಸ್ಥಿತಿಯೇನು ಎಂದು ಮಲಕಪ್ಪ ಕರಜಗಿ ಮಹ್ಮದ ಕರೀಮ ಮಂಗಲಗಿರಿ ತಮ್ಮ ಅಳಲು ತೋಡಿಕೊಂಡರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?