ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

KannadaprabhaNewsNetwork |  
Published : Nov 12, 2026, 01:45 AM IST
ಕೊಪ್ಪದ ಮೇರುತಿ ಬಡಾವಣೆ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ | Kannada Prabha

ಸಾರಾಂಶ

ಕೊಪ್ಪವರ್ಷಗಳಿಂದ ನಿರಂತರ ಮನವಿ ಸಲ್ಲಿಸಿದರೂ ರಸ್ತೆ ಅಭಿವೃದ್ಧಿ ಕಾಣದ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶಗೊಂಡ ಗ್ರಾಮಸ್ಥರು, ಚುನಾವಣೆ ಬಹಿಷ್ಕಾರದ ಕಠಿಣ ನಿರ್ಧಾರಕ್ಕೆ ಮುಂದಾಗಿದ್ದಾರೆ.

ಅತ್ತಿಕೊಡಿಗೆ ಗ್ರಾಪಂ ವ್ಯಾಪ್ತಿಯ ಮೇರುತಿ ಗ್ರಾಮಸ್ಥರ ಆಕ್ರೋಶ

ಕನ್ನಡಪ್ರಭ ವಾರ್ತೆ ​ಕೊಪ್ಪ

ವರ್ಷಗಳಿಂದ ನಿರಂತರ ಮನವಿ ಸಲ್ಲಿಸಿದರೂ ರಸ್ತೆ ಅಭಿವೃದ್ಧಿ ಕಾಣದ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶಗೊಂಡ ಗ್ರಾಮಸ್ಥರು, ಚುನಾವಣೆ ಬಹಿಷ್ಕಾರದ ಕಠಿಣ ನಿರ್ಧಾರಕ್ಕೆ ಮುಂದಾಗಿದ್ದಾರೆ.

​ತಾಲೂಕಿನ ಮೇಗುಂದ ಹೋಬಳಿ ಅತ್ತಿಕೊಡಿಗೆ ಗ್ರಾಪಂ ವ್ಯಾಪ್ತಿಗೆ ಒಳಪಡುವ ಬಸರೀಕಟ್ಟೆ ಸಮೀಪದ ಮೇರುತಿ ಬಡಾವಣೆಯಲ್ಲಿ ಗ್ರಾಮಸ್ಥರು ಒಗ್ಗಟ್ಟಾಗಿ ಚುನಾವಣೆ ಬಹಿಷ್ಕಾರದ ಬ್ಯಾನರ್ ಅಳವಡಿಸುವ ಮೂಲಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

​ರಸ್ತೆ ಮಾಡಿದ್ರೆ ಮಾತ್ರ ಮತ, ಇಲ್ಲದಿದ್ದರೆ ನಮ್ಮೂರಿಗೆ ಯಾವ ರಾಜಕೀಯ ಪಕ್ಷಕ್ಕೂ ಪ್ರವೇಶವಿಲ್ಲ. ರಸ್ತೆ ಮಾಡಿದವರಿಗೆ ನಮ್ಮ ಮತ ಎಂಬ ಬ್ಯಾನರ್ ಗ್ರಾಮದ ಪ್ರವೇಶ ದ್ವಾರದಲ್ಲಿ ಅಳವಡಿಸಿ ಪ್ರತಿಭಟನೆ ದಾಖಲಿಸಿದ್ದಾರೆ.

​ದಶಕಗಳಿಂದ ರಸ್ತೆಗಾಗಿ ಪರದಾಟ:

​ಮೇರುತಿ ಪರ್ವತದ ತಪ್ಪಲಿನ ಮೇರುತಿ ಬಡಾವಣೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಆದರೆ ಇಂದಿಗೂ ಇಲ್ಲಿಗೆ ಸೂಕ್ತ ಸಂಪರ್ಕ ಕಲ್ಪಿಸುವ ರಸ್ತೆ ಇಲ್ಲದೆ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಬೆಟ್ಟದ ನೀರು ರಸ್ತೆ ಮೇಲೆಯೇ ಹರಿಯುವುದರಿಂದ ದೊಡ್ಡ ದೊಡ್ಡ ಗುಂಡಿಗಳು ಸೃಷ್ಟಿಯಾಗಿ, ಪಾದ ಚಾರಿಗಳು ಹಾಗೂ ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಾಗಿದೆ. ರಸ್ತೆಯ ಚರಂಡಿ ವ್ಯವಸ್ಥೆ ಹದಗೆಟ್ಟಾಗಲೆಲ್ಲ ಗ್ರಾಮಸ್ಥರೇ ಸ್ವಂತ ಹಣ ಹಾಕಿ ತಾತ್ಕಾಲಿಕವಾಗಿ ದುರಸ್ತಿ ಮಾಡಿಸಿಕೊಳ್ಳುವ ಸ್ಥಿತಿ ಇದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಕೇವಲ ಭರವಸೆ: ​ಹದಗೆಟ್ಟ ರಸ್ತೆ ದುರಸ್ತಿಗೆ ಒತ್ತಾಯಿಸಿ ಸಂಬಂಧಪಟ್ಟ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಲಿಖಿತ ಮನವಿ ಸಲ್ಲಿಸಲಾಗಿದೆ. ಆದರೆ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡುವುದನ್ನು ಬಿಟ್ಟರೆ, ನಂತರ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಅನಿವಾರ್ಯವಾಗಿ ಮತದಾನ ಬಹಿಷ್ಕಾರದ ಅಸ್ತ್ರ ಕೈಗೆತ್ತಿಕೊಂಡಿದ್ದಾರೆ.

ಹಲವೆಡೆ ಇದೇ ಗೋಳು:

​ಕೇವಲ ಮೇರುತಿ ಬಡಾವಣೆ ಮಾತ್ರವಲ್ಲದೆ, ಅತ್ತಿಕೊಡಿಗೆ ಗ್ರಾಪಂ ವ್ಯಾಪ್ತಿಯ ಇತರ ಪ್ರಮುಖ ಹಳ್ಳಿಗಳಲ್ಲೂ ರಸ್ತೆ ಸಂಪರ್ಕ ತೀರಾ ಅಧ್ವಾನವಾಗಿದೆ. ​ಬೆತ್ತದಕೊಳಲು, ​ಬೆಂಡೆಹಕ್ಲು,​ಕವನಳ್ಳ, ​ಹೊನ್ನಗುಂಡಿ, ನೆಫಾ, ​ಅಣಕಲುಮಕ್ಕಿ,​ಕಲ್ಲುಗುಡ್ಡೆ,​ದೊಡ್ಡ ಬಿಳಾಲು ​ಈ ಭಾಗದ ರಸ್ತೆಗಳು ಸಂಚಾರಕ್ಕೆ ಸಂಪೂರ್ಣ ಯೋಗ್ಯವಾಗಿಲ್ಲ. ಸ್ಥಳೀಯರೇ ಮಣ್ಣು-ಕಲ್ಲು ಹಾಕಿ ಗುಂಡಿಗಳನ್ನು ಮುಚ್ಚಿ ಓಡಾಡಬೇಕಾದ ಅನಿವಾರ್ಯತೆ ಇದೆ.

​ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತು ತುರ್ತು ಕಾಮಗಾರಿ ಆರಂಭಿಸುತ್ತಾರಾ ಅಥವಾ ಗ್ರಾಮಸ್ಥರ ಈ ಬಹಿಷ್ಕಾರದ ಎಚ್ಚರಿಕೆ ನಿರ್ಲಕ್ಷಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌