ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬೆದರಿಕೆ

KannadaprabhaNewsNetwork |  
Published : Jun 27, 2024, 01:08 AM IST
ಹುಬ್ಬಳ್ಳಿ ವಿಮಾನ ನಿಲ್ದಾಣ. | Kannada Prabha

ಸಾರಾಂಶ

ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶಕುಮಾರ ಶ್ರೀಪಾದ ಅವರ ಕಚೇರಿಯ ಮೇಲ್ ಐಡಿಗೆ ಜೂ. 25ರಂದು ಸಂಜೆ 6.30 LongLivepalestine@dnmx.org ಮೇಲ್ ಐಡಿಯಿಂದ ಬೆದರಿಕೆ ಸಂದೇಶ ಬಂದಿದೆ.

ಹುಬ್ಬಳ್ಳಿ:

ಇಲ್ಲಿನ ವಿಮಾನ ನಿಲ್ದಾಣಕ್ಕೆ ಇ-ಮೇಲ್‌ ಮೂಲಕ ಬೆದರಿಕೆ ಸಂದೇಶ ಬಂದಿದ್ದು, ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಜತೆಗೆ ಬಿಗಿ ಭದ್ರತೆ ಒದಗಿಸಲಾಗಿದೆ.

ವಿಮಾನ ನಿಲ್ದಾಣದ ನಿರ್ದೇಶಕರಿಗೆ ವ್ಯಕ್ತಿಯೋರ್ವ ಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಈ ಕುರಿತು ಇಲ್ಲಿನ ಗೋಕುಲ ರಸ್ತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶಕುಮಾರ ಶ್ರೀಪಾದ ಅವರ ಕಚೇರಿಯ ಮೇಲ್ ಐಡಿಗೆ ಜೂ. 25ರಂದು ಸಂಜೆ 6.30 LongLivepalestine@dnmx.org ಮೇಲ್ ಐಡಿಯಿಂದ ಬೆದರಿಕೆ ಸಂದೇಶ ಬಂದಿದೆ. ನಾವು ನಿಮ್ಮನ್ನು ನಾಶ ಮಾಡುತ್ತೇವೆ. ಬೆಂಕಿಯಲ್ಲಿ ಎಸೆಯುತ್ತೇವೆ, ಉಸಿರುಗಟ್ಟಿ ಸಾಯುತ್ತೀರ. ನೀವು ಮಾಡಿದ ಎಲ್ಲ ಕೆಟ್ಟ ಕೆಲಸಗಳಿಗೆ ಉತ್ತರವಿಲ್ಲ ಎಂದು ಭಾವಿಸಿದ್ದೀರ ಎಂದು ಬೆದರಿಕೆ ಹಾಕಿರುವ ಸಂದೇಶ ಕಳುಹಿಸಲಾಗಿದೆ.

ಕೂಡಲೇ ರೂಪೇಶಕುಮಾರ ಅವರು ಟರ್ಮಿನಲ್‌ ಉಸ್ತುವಾರಿ ಪ್ರತಾಪ ಅವರಿಗೆ ಸಂದೇಶ ತೋರಿಸಿದ್ದು ಅವರು, ಸಿಎಎಸ್‌ಒ, ಐಬಿ, ಬಿಡಿಡಿಎಸ್ ಮತ್ತು ಬಾಂಬ್ ನಿಷ್ಕ್ರಿಯ ದಳಕ್ಕೆ ಮಾಹಿತಿ ರವಾನಿಸಿದ್ದಾರೆ. ವಾಯುಯಾನ ಭದ್ರತಾ ನಿಯಮದ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿಮಾನ ನಿಲ್ದಾಣಕ್ಕೆ ಬಿಗಿ ಭದ್ರತೆ:

ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿರುವ ಬೆನ್ನಲ್ಲೆ ಬುಧವಾರ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ವಿಮಾನ ನಿಲ್ದಾಣಕ್ಕೆ ಬಾಂಬ್ ತಪಾಸಣಾ ದಳ ಹಾಗೂ ಶ್ವಾನದಳದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಇನ್ನೊಂದೆಡೆ ಸ್ಥಳೀಯ ಪೊಲೀಸ್ ಅಧಿಕಾರಿಗಳು, ಆಂತರಿಕ ಭದ್ರತಾ ಹಾಗೂ ಗುಪ್ತಚರ ಇಲಾಖೆ ಸಿಬ್ಬಂದಿಯೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇನ್ನು ವಿಮಾನ ನಿಲ್ದಾಣಕ್ಕೆ ಬರುವ ಮತ್ತು ಹೋಗುವ ಜನರ ಮೇಲೆ ವಿಶೇಷ ನಿಗಾ ವಹಿಸಲಾಗಿದ್ದು, ಪ್ರತಿಯೊಬ್ಬರನ್ನು ಪರಿಶೀಲಿಸಿ ಒಳಗೆ ಬಿಡಲಾಗುತ್ತಿದೆ. ಅಲ್ಲದೇ, ಬ್ಯಾಗಗಳನ್ನು ಮೆಟಲ್ ಡಿಟೆಕ್ಟರ್‌ಗಳಿಂದ ಪರಿಶೀಲಿಸುವ ಜತೆಗೆ ವಾಹನ ಪಾರ್ಕಿಂಗ್ ಸ್ಥಳ ಸೇರಿದಂತೆ ವಿಮಾನ ನಿಲ್ದಾಣದ ಸುತ್ತಲಿನ ಪ್ರದೇಶದಲ್ಲಿ ಶ್ವಾನದಳ ಹಾಗೂ ಬಾಂಬ್ ತಪಾಸಣಾ ದಳ ಸಿಬ್ಬಂದಿ ಪರಿಶೀಲನೆ ನಡೆಸಲಾಯಿತು.ದೇಶದಾದ್ಯಂತ ನೂರಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಿಗೆ ಇದೇ ಮಾದರಿಯ ಬೆದರಿಕೆ ಸಂದೇಶ ಬಂದಿದೆ. ವಿಮಾನ ನಿಲ್ದಾಣಕ್ಕೆ ಬೇಕಾದ ಅಗತ್ಯ ಭದ್ರತೆಗೆ ಕ್ರಮಕೈಗೊಳ್ಳಲಾಗಿದೆ. ಮೇಲ್ ಎಲ್ಲಿಂದ, ಯಾರು ಕಳಿಸಿದ್ದಾರೆ ಎಂಬುದರ ಕುರಿತು ಈಗಾಗಲೇ ತನಿಖೆ ನಡೆಸಲಾಗುತ್ತಿದೆ ಎಂದು ಮಹಾನಗರ ಪೊಲೀಸ್‌ ಆಯುಕ್ತೆ ರೇಣುಕಾ ಸುಕುಮಾರ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!