ಸಲ್ಮಾನ್‌ಗೆ ಬೆದರಿಕೆ: ಸುಹೇಲ್ ಪೋಷಕರಿಗೆ ಬುಲಾವ್

KannadaprabhaNewsNetwork | Published : Nov 14, 2024 12:54 AM

ಸಾರಾಂಶ

Threat to Salman: Bulav for Suhail's parents

-ಮುಂಬೈ ಪೊಲೀಸರಿಂದ ವಿಚಾರಣೆಗೆ ಹಾಜರಾಗುವಂತೆ ಸೂಚನೆ

ಕನ್ನಡಪ್ರಭ ವಾರ್ತೆ ರಾಯಚೂರು

ಗ್ಯಾಂಗ್‌ ಸ್ಟರ್‌ ಲಾರೆನ್ಸ್ ಬಿಷ್ಣೋಯಿ ಹೆಸರಿನಲ್ಲಿ ಬಾಲಿಹುಡ್‌ ನಟ ಸಲ್ಮಾನ್‌ ಖಾನ್‌ರಿಂದ 5 ಕೋಟಿ ರು.ಗೆ ಬೇಡಿಕೆ ಇಟ್ಟು, ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಯುವ ಸುಹೇಲ್‌ ಪಾಷಾನನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿರುವ ಸುದ್ದಿ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದ್ದು, ಈ ನಡುವೆ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲಿಸರು ಪಾಲಕರಿಗೆ ಬುಲಾವ್ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮಾನ್ವಿ ಪಟ್ಟಣದ ವಾರ್ಡ್‌ ನಂ.5ರ ಖಾದ್ರಿ ಫಂಕ್ಷನ್ ಹಾಲ್ ಸಮೀಪದ ಚಿಕ್ಕ ಮನೆಯಲ್ಲಿ ಪಾಲಕರೊಟ್ಟಿಗೆ ವಾಸವಾಗಿರುವ 24 ವರ್ಷದ ಸುಹೇಲ್ ಪಾಷಾ ಹಿಂದೆ ಗ್ಯಾರೇಜ್‌ ಕೆಲಸ ಮಾಡುತ್ತಿದ್ದನು. ಇತ್ತೀಚೆಗಷ್ಟೆ ಆ ಕೆಲಸ ತೊರೆದು ಟೈರ್‌ ಶೋ ರೂಂನಲ್ಲಿ ಕೆಲಸಕ್ಕೆ ಸೇರಿದ್ದನು. ತಾಯಿ ಬಾನು ಬೀ ಅವರು ಗೃಹಿಣಿಯಾಗಿದ್ದು, ತಂದೆ ರಸೂಲ್‌ ಪಾಷಾ ಅವರು ಎಲೆಕ್ಟ್ರೀಷಿಯನ್‌ ಕೆಲಸ ಮಾಡುತ್ತಿದ್ದಾರೆ.

8ನೇ ತರಗತಿ ಓದಿರುವ ಸುಹೇಲ್‌ ಪಾಷಾ ಹಿಂದಿ ಹಾಡುಗಳನ್ನು ಬರೆಯುತ್ತಿದ್ದನು. ಬಹುಬೇಗ ಹೆಸರು ಮಾಡಲು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೆಸರಲ್ಲಿ ಬೆದರಿಕೆ ಹಾಕಿದ್ದನು. ಕಳೆದ ನ.3ರಂದು ಮಾನ್ವಿ ಪಟ್ಟಣದ ಉದ್ಯಾವನದ ಹತ್ತಿರ ಫೋನ್ ಕರೆ ಮಾಡುವುದಾಗಿ ತಾಲೂಕಿನ ಚೀಕಲಪರ್ವಿ ಗ್ರಾಮದ ವೆಂಕಟ ನಾರಾಯಣ ಎಂಬುವವರ ಮೊಬೈಲ್ ಪಡೆದು ಡಾಟಾ ಬಳಸಿ ತನ್ನ ಫೋನ್‌ನಲ್ಲಿ ವಾಟ್ಸ್‌ ಆ್ಯಪ್‌ ಹಾಕಿಕೊಂಡು ಹೆದರಿಕೆ ಹಾಕಿದ್ದಾನೆಂದು ಆರೋಪಿಸಲಾಗಿದೆ.

ಈ ಸಂಖ್ಯೆ ಬಳಸಿ ಮುಂಬೈ ಟ್ರಾಫಿಕ್ ಪೊಲೀಸ್ ಸಹಾಯವಾಣಿ ವಾಟ್ಸ್ ಆ್ಯಪ್ ನಂಬರ್‌ಗೂ ಸಹ ಮೆಸೇಜ್ ಮಾಡಿದ್ದನು. ಕಳೆದ ನ.7 ರಂದು ಕೊಲೆ ಬೆದರಿಕೆ ಮೆಸೆಜ್ ಮಾಡಿ 5 ಕೋಟಿ ಬೇಡಿಕೆ ಇಟ್ಟಿದ್ದ ಸುಹೇಲ್ ನಟ ಸಲ್ಮಾನ್ ಖಾನ್ ಅಭಿಮಾನಿಯೂ ಸಹ ಆಗಿದ್ದು, ಆತನ ಚಿತ್ರಕ್ಕೆ ಹಾಡು ಬರೆಯಬೇಕು. ಆ ಮುಖಾಂತರ ಹೆಸರು ಪಡೆಯಬೇಕು ಎನ್ನುವ ವಿಚಿತ್ರ ಆಸೆ ಹೊಂದಿದ್ದ ಎನ್ನಲಾಗಿದೆ. ವಾಟ್ಸ್‌ಆ್ಯಪ್‌ ಸಂದೇಶದ ಜಾಡು ಹಿಡಿದು ಹೊರಟ ಮುಂಬೈ ವರ್ಲಿ ಠಾಣೆ ಪೊಲೀಸರು ಶೋಧಕಾರ್ಯ ನಡೆಸಿದ್ದು, ಜಿಲ್ಲಾ ಪೊಲೀಸ್‌ ಇಲಾಖೆ ಹಾಗೂ ಮಾನ್ವಿ ಪೊಲೀಸ್ ಸಹಯೋಗದಲ್ಲಿ ಎರಡ್ಮೂರು ದಿನಗಳ ಕಾಲ ಇಲ್ಲಿಯೇ ತಂಗಿ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಕೊನೆಗೂ ನ.11ರಂದು ಆರೋಪಿಯನ್ನು ವಶಕ್ಕೆ ಪಡೆದು ಮುಂಬೈಗೆ ಕರೆದುಕೊಂಡು ಹೋಗಿ ಅಲ್ಲಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬುಧವಾರ ಸುಹೇಲ್‌ ಪಾಷಾ ಪಾಲಕರಿಗೆ ಕರೆ ಮಾಡಿದ ಪೊಲಿಸರು ವಿಚಾರಣೆಗಾಗಿ ಮುಂಬೈಗೆ ಬರುವಂತೆ ಸೂಚನೆ ನಿಡಿದ್ದಾರೆ. ಮಗ ಸುಹೇಲ್‌ ಪಾಷಾನನ್ನು ಮುಂಬೈ ಪೋಲಿಸಲು ಕರೆದೊಯ್ದ ಘಟನೆಯಿಂದ ತಂದೆ-ತಾಯಿ ಅಘಾತಕ್ಕೀಡಾಗಿ ಕಣ್ಣೀರಿಡುತ್ತಿದ್ದಾರೆ.

---------------------

13ಕೆಪಿಆರ್‌ಸಿಆರ್ 01: ಸೋಹೆಲ್ ಪಾಷಾ

13ಕೆಪಿಆರ್‌ಸಿಆರ್ 02:ಮಾನ್ವಿ ಪಟ್ಟಣದ ಯುವಕ ಸೋಹೆಲ್ ಪಾಷಾ ಅವರ ಪಾಲಕರು.

Share this article