ರಾಮರೂಢ ಸ್ವಾಮೀಜಿಗೆ ಬೆದರಿಕೆ, ಹಣ ವಂಚಿಸಿರುವ ಆರೋಪಿ ಬಂಧನಕ್ಕೆ ಒತ್ತಾಯ

KannadaprabhaNewsNetwork |  
Published : Oct 01, 2024, 01:17 AM IST
30ಕೆಎಂಎನ್ ಡಿ23 | Kannada Prabha

ಸಾರಾಂಶ

ರಾಜ್ಯಾದ್ಯಂತ 34 ಶಾಲಾ ಮಠಗಳನ್ನು ಹೊಂದಿರುವ ಬಾಗಲಕೋಟೆಯ ರಾಮರೂಢ ಮಠಕ್ಕೆ ತನ್ನದೇ ಆದ ಇತಿಹಾಸ ಹೊಂದಿದೆ. ಲಕ್ಷಾಂತರ ಭಕ್ತರನ್ನು ಹೊಂದಿ ರಾಮರೂಢ ಸ್ವಾಮೀಜಿಗಳನ್ನು ದೇವರೆಂದು ಕಾಣುತ್ತಿರುವ ಭಕ್ತರಿಗೆ ಈ ಘಟನೆಯಿಂದ ತುಂಬಾ ನೋವಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಬಾಗಲಕೋಟೆ ರಾಮರೂಢ ಮಠದ ಮಠಾಧಿಪತಿ ಪರಮ ರಾಮರೂಢ ಸ್ವಾಮೀಜಿ ಅವರನ್ನು ಹೆದರಿಸಿ ಹಣ ವಂಚಿಸಿರುವ ಆರೋಪಿಯನ್ನು ಕೂಡಲೇ ಬಂಧಿಸಿ ಮಠ ಹಾಗೂ ಸ್ವಾಮೀಜಿಗೆ ಸರ್ಕಾರ ರಕ್ಷಣೆ ನೀಡಬೇಕೆಂದು ಗಂಗಮತಸ್ಥ ಬೆಸ್ತರ್ ಸಮುದಾಯದ ಮುಖಂಡರು ಒಕ್ಕೋರಳಿನಿಂದ ಒತ್ತಾಯಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಾದ್ಯಂತ 34 ಶಾಲಾ ಮಠಗಳನ್ನು ಹೊಂದಿರುವ ಬಾಗಲಕೋಟೆಯ ರಾಮರೂಢ ಮಠಕ್ಕೆ ತನ್ನದೇ ಆದ ಇತಿಹಾಸ ಹೊಂದಿದೆ. ಲಕ್ಷಾಂತರ ಭಕ್ತರನ್ನು ಹೊಂದಿ ರಾಮರೂಢ ಸ್ವಾಮೀಜಿಗಳನ್ನು ದೇವರೆಂದು ಕಾಣುತ್ತಿರುವ ಭಕ್ತರಿಗೆ ಈ ಘಟನೆಯಿಂದ ತುಂಬಾ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪರಮ ರಾಮರೂಢ ಸ್ವಾಮೀಜಿಯವರ ಪರಿಶ್ರಮದಿಂದಾಗಿ ಶಾಲೆಯನ್ನು ಆರಂಭಿಸುವುದರ ಜೊತೆಗೆ ಹಲವು ಸಾಮಾಜಿಕ ಕಾರ್ಯದಲ್ಲಿ ಮಠವು ತೊಡಗಿದೆ. ವ್ಯಕ್ತಿಯೊಬ್ಬ ನಕಲಿ ಪೊಲೀಸ್‌ನೊಂದಿಗೆ ಮಠಕ್ಕೆ ಆಗಮಿಸಿ ಬೆದರಿಸಿ ಸುಮಾರು ಒಂದು ಕೋಟಿ ಹಣವನ್ನು ವಸೂಲಿ ಮಾಡುವ ಜೊತೆಗೆ ಇನ್ನಷ್ಟು ಹಣ ಕೊಡಬೇಕೆಂದು ಒತ್ತಾಯಿಸಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ತಪ್ಪು ಮಾಡಿಲ್ಲ ಎಂದ ಮೇಲೆ ಏಕೆ ಭಯ ಪಡಬೇಕೆಂದು ಪೊಲೀಸರಿಗೆ ರಾಮಾರೂಢ ಸ್ವಾಮೀಜಿಗಳು ದೂರು ನೀಡಿದ್ದಾರೆ. ಈ ಘಟನೆಯಿಂದ ಅಘಾತಕ್ಕೆ ಒಳಗಾಗಿರುವ ಸ್ವಾಮೀಜಿ ಅವರಿಗೆ ಹಾಗೂ ಮಠಕ್ಕೆ ಸರ್ಕಾರ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಮುಖಂಡ ಆಟೋ ಮಂಜಣ್ಣ ಮಾತನಾಡಿ, ಬಾಗಲಕೋಟೆ ರಾಮರೂಢ ಮಠದ ಶಾಖಾ ಮಠವಾಗಿ ಮಳವಳ್ಳಿಯ ರಾಮರೂಢ ಮಠವು ಸೇರಿದೆ. ಪ್ರತಿವರ್ಷ ಬಾಗಲಕೋಟೆಯಿಂದ ರಾಮರೂಢ ಸ್ವಾಮೀಜಿ ಅವರನ್ನು ಕರೆಯಿಸಿ ಭಕ್ತಿ ಪೂರ್ವಕವಾಗಿ ಪಾದಪೂಜೆ ನೆರೆವೇರಿಸುತ್ತಾ ಬರಲಾಗುತ್ತಿದೆ ಎಂದರು.

ಹಿಂದುಳಿದ ಸಮುದಾಯದ ಗಂಗಮತಸ್ಥ ಬೆಸ್ತರ್ ಜನಾಂಗಕ್ಕೆ ಸೇರಿದ ಪ್ರಮುಖ ಮಠಗಳಲ್ಲಿ ಒಂದಾದ ಬಾಗಲಕೋಟೆ ರಾಮರೂಢ ಮಠದಲ್ಲಿ ನಡೆದ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಸ್ವಾಮೀಜಿ ಈ ಘಟನೆಯಿಂದ ನೊಂದಿದ್ದಾರೆ. ಜೊತೆಗೆ ಅನಾರೋಗ್ಯಕ್ಕೂ ತುತ್ತಾಗಿದ್ದಾರೆಯ ಮಠಾಧೀಶರನ್ನು ಬ್ಲಾಕ್ ಮೇಲ್ ಮಾಡಿರುವವರನ್ನು ಪತ್ತೆ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಂಥ ಪ್ರಕರಣ ಮರುಕಳಿಸದಂತೆ ಜಾಗೃತಿ ವಹಿಸಬೇಕೆಂದು ಆಗ್ರಹಿಸಿದರು.

ಯಜಮಾನ್ ಬಸವರಾಜು ಮಾತನಾಡಿ, ಸರ್ವಧರ್ಮದವರು ನಿತ್ಯವೂ ಮಠಕ್ಕೆ ಬಂದು ಹೋಗುತ್ತಾರೆ. ರಾಮರೂಢ ಸ್ವಾಮೀಜಿ, ಚಿಕ್ಕರಾಮರೂಢ ಸ್ವಾಮೀಜಿಗಳ ನಂತರ ಮಠವನ್ನು ಮುನ್ನಡೆಸಿ ಅಪಾರ ಭಕ್ತ ವೃಂದವನ್ನು ಹೊಂದಿರುವ ಮಠದ ಭಕ್ತರಿಗೆ ಇಂಥ ಘಟನೆಯಿಂದ ನೋವಾಗಿದೆ ಎಂದರು.

ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಗಂಗಾಧರ್, ರಾಮಸ್ವಾಮಿ, ಜಯರಾಮು, ಅಣ್ಣಯ್ಯ, ಕುಮಾರ್, ವೆಂಕಟೇಶ್, ವೇಣು, ಜಗದೀಶ್, ಹೆಮಂತ್‌ರಾಜ್ ಎಚ್‌ಕೆ ಶಿವಣ್ಣ, ಶಿವಣ್ಣ, ಮಾರ್ಕಾಂಡಯ್ಯ ಕರಿಯಪ್ಪ, ನಂಜುಂಡಪ್ಪ, ನಂಜುಂಡ, ಮಾದೇಶ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ