- ಸಚಿನ್ ಗೋಧಳಿ ಸ್ಯಾಂಡಿ ರಮೇಶ, ರವಿ, ಸಂದೀಪ್‌ಗೆ ನ್ಯಾಯಾಂಗ ಬಂಧನ । ಎಸ್‌ಪಿ ಶ್ಲಾಘನೆ
ಕನ್ನಡಪ್ರಭ ವಾರ್ತೆ ನ್ಯಾಮತಿ
ಕಳೆದ ತಿಂಗಳಲ್ಲಿ ನ್ಯಾಮತಿ ತಾಲೂಕಿನ ಸವಳಂಗ ಶಿಕಾರಿಪುರ ರಸ್ತೆಯ ಮಾಚಿಗೊಂಡನಹಳ್ಳಿ ಕೆರೆ ಹತ್ತಿರ ಅಸಲಿ ಬಂಗಾರವೆಂದು ನಂಬಿಸಿ, ನಕಲಿ ಬಂಗಾರ ನೀಡಿ ಹಣ ಪಡೆದು ವಂಚಿಸಿದ್ದ ಆರೋಪಿಗಳನ್ನು ನ್ಯಾಮತಿ ಪೊಲೀಸರು ಬಂಧಿಸಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರು ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಚಿನ್ ಗೋಧಳಿ ಅಲಿಯಾಸ್ ಸ್ಯಾಂಡಿ ರಮೇಶ (21), ನ್ಯಾಮತಿ ತಾಲೂಕಿನ ಸಂದೀಪ (38), ರವಿ (40) ಬಂಧಿತ ಆರೋಪಿಗಳಾಗಿದ್ದು, ₹62,25,000 ನಗದು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಳೆದ ತಿಂಗಳಲ್ಲಿ ರಮೇಶ ಎಂಬ ವ್ಯಕ್ತಿ ವಿಜಯಕುಮಾರ್ ಎಂಬವರಿಗೆ ದೂರವಾಣಿ ಕರೆ ಮಾಡಿ, ನಮ್ಮ ಹಳೆಯ ಮನೆ ಕೆಡವಿ ಪಾಯ ತೆಗೆಯುವಾಗ ನಮಗೆ ಬಂಗಾರದ ನಿಧಿ ಸಿಕ್ಕಿದೆ. ಅದನ್ನು ಕಡಿಮೆ ಬೆಲೆಗೆ ನೀಡುತ್ತೇನೆ, ಪರೀಕ್ಷಿಸಿ ತೆಗೆದುಕೊಳ್ಳಿ ಎಂದು ತಿಳಿಸಿದ್ದಾನೆ. ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಶಿವಾನಂದಪ್ಪ ಎಂಬವರು ವಿಜಯಕುಮಾರ ಅವರ ಸ್ನೇಹಿತ. ಈ ಸ್ನೇಹಿತನ ಮೂಲಕ ವಿಷಯ ತಿಳಿದು ಇಬ್ಬರು ಬಂದು ಬಂಗಾರದ ಸ್ಯಾಂಪಲ್ ತೆಗೆದುಕೊಂಡು ಹೋಗಿ ಪರೀಕ್ಷಿಸಿದಾಗ ಅದು ಅಸಲಿ ಬಂಗಾರ ಎಂಬುದು ದೃಢಪಟ್ಟಿದೆ.
ಈ ಸಂಬಂಧ 15 ದಿನಗಳ ಹಿಂದೆ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಶಿವಾನಂದಪ್ಪ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಕೃತ್ಯವನ್ನು ವಿವರಿಸಿ, ತಮಗೆ ಹಣ ವಾಪಸ್ ಕೊಡಿಸಬೇಕೆಂದು ಒತ್ತಾಯಿಸಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದರಂತೆ ತನಿಖೆ ಕೈಗೊಂಡು ತಂಡವು ಬಾತ್ಮಿದಾರರಿಂದ ಮಾಹಿತಿ ಕಲೆ ಹಾಕಿ ಪೂರಕವಾಗಿ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಇವುಗಳ ಆಧಾರದ ಮೇಲೆ ಚನ್ನಗಿರಿ ತಾಲೂಕಿನ ಸಚಿನ್ ಗೋಧಳಿ ಅಲಿಯಾಸ್ ಸ್ಯಾಂಡಿ ರಮೇಶ, ನ್ಯಾಮತಿ ತಾಲೂಕಿನ ಸಂದೀಪ ಹಾಗೂ ರವಿ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತರಿಂದ 62,25,000 ನಗದು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
- - -
ನಕಲಿ ಬಂಗಾರ ನೀಡಿ ವಂಚಿಸಿದ್ದ ಆರೋಪಿಗಳನ್ನು ಬಂಧಿಸಿದ ನ್ಯಾಮತಿ ಪೊಲೀಸ್ ಠಾಣೆ ಪಿಎಸ್‌ಐ ಮತ್ತು ಸಿಬ್ಬಂದಿ ತಂಡ.