ಶಾಗ್ಯ ಗ್ರಾಮ ಸಮೀಪದ ಕಾವೇರಿ ವನ್ಯಧಾಮಕ್ಕೆ ನಾಡ ಬಂದೂಕಿನೊಂದಿಗೆ ಅಕ್ರಮವಾಗಿ ಪ್ರವೇಶಿಸಿ ವನ್ಯಪ್ರಾಣಿಗಳನ್ನು ಕಳ್ಳಬೇಟೆಯಾಡಿದ್ದ ಆರೋಪದಡಿ ಮೂವರನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ಜರುಗಿದೆ.
ಕನ್ನಡಪ್ರಭ ವಾರ್ತೆ ಹನೂರು
ಶಾಗ್ಯ ಗ್ರಾಮ ಸಮೀಪದ ಕಾವೇರಿ ವನ್ಯಧಾಮಕ್ಕೆ ನಾಡ ಬಂದೂಕಿನೊಂದಿಗೆ ಅಕ್ರಮವಾಗಿ ಪ್ರವೇಶಿಸಿ ವನ್ಯಪ್ರಾಣಿಗಳನ್ನು ಕಳ್ಳಬೇಟೆಯಾಡಿದ್ದ ಆರೋಪದಡಿ ಮೂವರನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ಜರುಗಿದೆ.ಹನೂರು ತಾಲೂಕಿನ ಮರಿಯ ಮಂಗಲ ಗ್ರಾಮದ ಮರಿಯ ಲೂಯಿಸ್ ಬಿನ್ ಬಾಲರಾಜು (40), ವಿನ್ಸೆಂಟ್ ಬಿನ್ ಸೆಲ್ವರಾಜ್ (54), ಸೆಲ್ವನಾಥನ್ ಬಿನ್ ಅರಳಪ್ಪ(41) ಬಂಧಿತ ಆರೋಪಿಗಳಾಗಿದ್ದಾರೆ. ಶಾಗ್ಯ ಸಮೀಪದ ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿ ನಾಡ ಬಂದೂಕಿನೊಡನೆ ಬೇಟೆಗೆ ತೆರಳಿದ್ದ ವೇಳೆ ಸೇಲ್ವನಾಥಗೆ ಕಾಲಿಗೆ ಹಾವು ಕಚ್ಚಿದ್ದರಿಂದ ಕಾಡಿನಿಂದ ಊರಿಗೆ ವಾಪಸ್ಸು ಬರುತ್ತಿರುವಾಗ ಶಾಗ್ಯಂ ಶಾಖೆಯ ಬೇಟೆಗಾರನ ಗುಡ್ಡ ಗಸ್ತಿನ ಪುಷ್ಪಪುರ ಕಾಲುದಾರಿ ಅರಣ್ಯ ಪ್ರದೇಶದಲ್ಲಿ ಆರೋಪಿಗಳು ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಅರಣ್ಯ ಅಕ್ರಮ ಪ್ರವೇಶ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರಿಂದ ಎರಡು ಬಂದೂಕು ಮತ್ತು ಕೃತ್ಯಕ್ಕೆ ಬಳಸಿದ ಇತರೆ ವಸ್ತುಗಳನ್ನು ವಶಕ್ಕೆ ಪಡೆದುಕೂಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆಸ್ಪತ್ರೆಗೆ ದಾಖಲು: ಹಾವು ಕಚ್ಚಿರುವ ಆರೋಪಿ ಸೇಲ್ವನಾಥ್ ನನ್ನು ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಆತನ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸುರೇಂದ್ರ ಎಂ.ಸಿ, ಹಾಗೂ ಕಾವೇರಿ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗೇಂದ್ರ ಪ್ರಸಾದ್. ಎಸ್ ರವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ನಿರಂಜನ ಅವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಶ್ರೀನಿ, ಶಾಗ್ಯಂ ಶಾಖೆ ಯಲಗೂರಪ್ಪ ಗುಬ್ಬಿ, ಗಸ್ತು ವನಪಾಲಕ ಬೇಟೆಗಾರನಗುಡ್ಡ ಗಸ್ತು ವಿವೇಕಾನಂದ ಸತ್ಯಪ್ಪ ಹಡಗಿನಾಳ, ರುದ್ರಾಪುರಂ ಗಸ್ತು ಗೋರಿಸಾಬ ಸನದಿ, ಗಾಣಿಗಮಂಗಲ ಗಸ್ತು ರವಿಚಂದ್ರ ಎನ್ ದಾಸನಟ್ಟಿ ಹಾಗೂ ವಾಹನಚಾಲಕ ಪ್ರಭು ಮತ್ತು ವಲಯದ ಇತರೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.