ಕನ್ನಡಪ್ರಭ ವಾರ್ತೆ ಮಂಗಳೂರು
ತಾಳಿಪಾಡಿ ಗ್ರಾಮದ ಪದ್ಮನೂರು ಶೆಟ್ಟಿಕಾಡು ನಿವಾಸಿ ಹಿತೇಶ್ ಶೆಟ್ಟಿಗಾರ್ ಯಾನೇ ಹಿತೇಶ್ ಕುಮಾರ್(43) ಎಂಬಾತನೇ ಮರಣದಂಡನೆ ಶಿಕ್ಷೆಗೆ ಒಳಗಾದ ಅಪರಾಧಿ. ಮೂಲ್ಕಿ ಠಾಣಾ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಪದ್ಮನೂರು ಎಂಬಲ್ಲಿ 2022ರ ಜೂನ್ 23ರಂದು ಈ ಘಟನೆ ನಡೆದಿತ್ತು. ಆರೋಪಿ ಹಿತೇಶ್ ಶೆಟ್ಟಿಗಾರ್ ಪಾನಮತ್ತನಾಗಿ ಬಂದು ಪತ್ನಿ ಜೊತೆಗೆ ಜಗಳವಾಡುತ್ತಿದ್ದ. ಅದೇ ದ್ವೇಷದಲ್ಲಿ ಆಗಷ್ಟೆ ಶಾಲೆಯಿಂದ ಮನೆಗೆ ಬಂದಿದ್ದ ಮಕ್ಕಳಾದ ರಶ್ಮಿತಾ (13), ಉದಯ ಕುಮಾರ್ (11), ದಕ್ಷಿತ್ (5) ಅವರನ್ನು ಬಾವಿಗೆ ದೂಡಿ ಹಾಕಿದ್ದಾನೆ. ಈ ವೇಳೆ ದೊಡ್ಡ ಮಗಳು ರಶ್ಮಿತಾ ಬಾವಿಗೆ ಅಳವಡಿಸಿದ್ದ ಪಂಪಿನ ಪೈಪ್‌ನಲ್ಲಿ ನೇತಾಡಿ ಜೀವ ರಕ್ಷಿಸಲು ಪ್ರಯತ್ನ ಪಟ್ಟಿದ್ದಾಳೆ. ಆದರೆ ಪೈಪನ್ನು ಕತ್ತಿಯಿಂದ ಕಡಿದು ಆಕೆಯನ್ನು ನೀರಿಗೆ ಬೀಳುವಂತೆ ಮಾಡಿ ಅಮಾನುಷ ಕೃತ್ಯ ಎಸಗಿದ್ದ.
ಆ ಬಳಿಕ ಹೊಟೇಲ್ ಕೆಲಸ ಮುಗಿಸಿ ಸಂಜೆ ಮನೆಗೆ ಬಂದ ಪತ್ನಿ ಲಕ್ಷ್ಮೀಯನ್ನೂ ಆರೋಪಿ ಹಿತೇಶ್ ಬಾವಿಗೆ ದೂಡಲು ಯತ್ನಿಸಿದ್ದಾನೆ. ಈ ವೇಳೆ ಆಕೆ ಬೊಬ್ಬೆ ಹಾಕಿದ್ದು ಸ್ಥಳಕ್ಕೆ ಓಡಿ ಬಂದ ಹೂವಿನ ವ್ಯಾಪಾರಿ ರಕ್ಷಣೆ ಮಾಡಿದ್ದಾರೆ. ಅಲ್ಲದೆ, ತನ್ನ ಪತಿ ಮಾಡಿದ ಕೃತ್ಯದ ಬಗ್ಗೆ ಪತ್ನಿ ಲಕ್ಷ್ಮೀ ಮೂಲ್ಕಿ ಪೊಲೀಸರಿಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಿದ್ದರು. ಕೃತ್ಯದ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಕುಸುಮಾಧರ್ ಅವರು ಕೋರ್ಟಿಗೆ ದೋಷಾರೋಪ ಸಲ್ಲಿಸಿದ್ದರು.ಈ ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 32 ಸಾಕ್ಷಿದಾರರನ್ನು ವಿಚಾರಿಸಲಾಗಿದೆ. ಪ್ರಕರಣದ ಸಾಕ್ಷ್ಯ, ದಾಖಲೆಗಳು ಹಾಗೂ ಪೂರಕ ಸಾಕ್ಷ್ಯ ಹಾಗೂ ವಾದ ಪ್ರತಿವಾದವನ್ನು ಆಲಿಸಿ ಆರೋಪಿಯ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಡಿ.30ರಂದು ನ್ಯಾಯಾಧೀಶರಾದ ಸಂಧ್ಯಾ ಎಸ್. ಅವರು ಐಪಿಸಿ ಕಲಂ: 302ರಡಿ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಮತ್ತು ಕಲಂ: 307ರಡಿ ಹೆಂಡತಿಯನ್ನು ಕೊಲೆಗೆ ಯತ್ನಿಸಿದ್ದಕ್ಕೆ 10 ವರ್ಷಗಳ ಕಾರಾಗೃಹವಾಸದ ಶಿಕ್ಷೆಯನ್ನು ವಿಧಿಸಿದ್ದಾರೆ. ಮಕ್ಕಳ ತಾಯಿ ಲಕ್ಷ್ಮೀ ಅವರಿಗೆ ಸೂಕ್ತ ಪರಿಹಾರವನ್ನು ಕಾನೂನು ಸೇವೆಗಳ ಪ್ರಾಧಿಕಾರವು ನೀಡಬೇಕೆಂದು ನ್ಯಾಯಾಲಯದಲ್ಲಿ ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಮೋಹನ್ ಕುಮಾರ್ ವಾದ ಮಂಡಿಸಿದ್ದರು
ಆತನ ಮಾನಸಿಕ ಅಸ್ವಸ್ಥನಾಗಿರಲಿಲ್ಲ. ಕೋವಿಡ್ ಬಳಿಕ ರಸ್ತೆ ಬದಿಯಲ್ಲಿ ಸ್ವಲ್ಪ ಕಾಲ ಎಳನೀರು ವ್ಯಾಪಾರ ಮಾಡುತ್ತಿದ್ದ. ಬಳಿಕ ಅದನ್ನೂ ಬಿಟ್ಟಿದ್ದ. ಮದುವೆ ಆಗಿ ಸುಮಾರು 16-17 ವರ್ಷ ಆಗಿತ್ತು.