ಶಿರಹಟ್ಟಿ: ರಾಜ್ಯದ ಪ್ರಮುಖ ಕೋಮು ಸೌಹಾರ್ದ ಕ್ಷೇತ್ರವೆಂದೇ ಖ್ಯಾತವಾಗಿರುವ ಶಿರಹಟ್ಟಿ ತಾಲೂಕಿನ ವರವಿ ಶ್ರೀ ಮೌನೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಅಂದಾಜು 3 ಕೋಟಿ ಅನುದಾನವನ್ನು ಒದಗಿಸಲಾಗುವುದೆಂದು ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಭರವಸೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆಗಿರುವ ಸಚಿವ ಎಚ್.ಕೆ. ಪಾಟೀಲ ಅವರಿಗೆ ವರವಿ ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ವತಿಯಿಂದ ಹಾಗೂ ವಿಶ್ವಕರ್ಮ ಮಹಾ ಒಕ್ಕೂಟ ಬೆಂಗಳೂರು ಇದರ ವತಿಯಿಂದ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ವಿಶ್ವಕರ್ಮ ಸಮಾಜದ ಪ್ರತಿಭೆಗೆ ಸರಿಸಾಟಿಯೇ ಇಲ್ಲ. ರಾಜ್ಯದಲ್ಲಿರುವ 25 ಸಾವಿರಕ್ಕೂ ಅಧಿಕ ಗುಡಿ -ಗೋಪುರ ಶಿಲ್ಪಕಲಾ ತಾಣಗಳ ಪೈಕಿ 20 ಸಾವಿರಕ್ಕೂ ಅಧಿಕ ಸ್ಥಾನಗಳ ಶಿಲ್ಪಕಲಾ ತಾಣಗಳು ವಿಶ್ವಕರ್ಮರಿಂದಲೇ ನಿರ್ಮಿತವಾದವುಗಳಾಗಿವೆ.
ಇಂಥ ಕೌಶಲ್ಯಯುಕ್ತ ಸಮಾಜದ ಪುಣ್ಯ ಕ್ಷೇತ್ರವಾದ ವರವಿ ಕ್ಷೇತ್ರದ ಅಭಿವೃದ್ಧಿ ಅಗತ್ಯವಾಗಿದೆ. ಅರ್ಧಕ್ಕೇ ನಿಂತಿರುವ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಲು ತಕ್ಷಣಕ್ಕೆ ಸರ್ಕಾರದಿಂದ ಒಂದು ಕೋಟಿ ಹಾಗೂ ಕ್ಷೇತ್ರದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯ ನೀಲ ನಕ್ಷೆ ತಯಾರಿಸಿ ಅದಕ್ಕೆ ಅಗತ್ಯವಾದ ಅಂದಾಜು 2 ಕೋಟಿಗಳಷ್ಟು ಅನುದಾನವನ್ನು ಹಂತ ಹಂತವಾಗಿ ಒದಗಿಸಲಾಗುವುದು.ಇದಲ್ಲದೆ, ಗದಗ ಜಿಲ್ಲೆಯ ಹುಲಕೋಟಿ ಬಳಿ 2.5 ಕೋಟಿ ಗಳ ವೆಚ್ಚದಲ್ಲಿ ವಿಶ್ವಕರ್ಮ ಕುಶಲಿಗರಿಗಾಗಿ ಕೌಶಲ್ಯ ಅಭಿವೃದ್ಧಿ ಕೇಂದ್ರವೊಂದನ್ನು ಸ್ಥಾಪಿಸಲಾಗುವುದು ಎಂದರು. ಇದಕ್ಕೆ ಮುಂಚೆ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದ ವಿಶ್ವಕರ್ಮ ಮಹಾ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಪತ್ತಾರ ಅವರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡಬೇಕೆಂದು ವಿನಂತಿಸಿದರಲ್ಲದೆ, ಪ್ರಸಕ್ತ ಬಜೆಟ್‌ನಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ 42 ಕೋಟಿಗಳ ಅನುದಾನವನ್ನು ಜಕಣಾಚಾರ್ಯರ ಐಕ್ಯ ಸ್ಥಳವಾದ ಕೈದಾಳದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಟೀಮ್ ಪಾರ್ಕ್ ಗರಿಷ್ಠ ಅನುದಾನ ನೀಡಬೇಕೆಂದು ವಿನಂತಿಸಿದರು. ಸರ್ಕಾರದ ಸಮ ಸಮಾಜ ನಿರ್ಮಾಣದ ಆಶಯಕ್ಕೆ ಪೂರಕವಾಗುವಂತೆ ಸೂಕ್ತ ಪ್ರಾತಿನಿಧ್ಯವಿಲ್ಲದ ವಿಶ್ವಕರ್ಮ ಸಮಾಜಕ್ಕೆ ನಿಗಮ - ಮಂಡಳಿ ಹಾಗೂ ಪ್ರಾಧಿಕಾರಗಳಲ್ಲಿ ಸೂಕ್ತ ಸ್ಥಾನಮಾನ ನೀಡಬೇಕಲ್ಲದೆ, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಕೂಡಲೇ ನೇಮಕಾತಿ ಮಾಡಬೇಕೆಂದು ಸಚಿವರನ್ನು ಆಗ್ರಹಿಸಿದರು.ಜಗದ್ಗುರು ಶ್ರೀ ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಅಧ್ಯಕ್ಷರಾದ ಮೋಹನ ನರಗುಂದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರದ ಒತ್ತಾಸೆಯ ಅಗತ್ಯವಿದೆ ಎಂದರು. ಸಮಾರಂಭದಲ್ಲಿ ಶಿರಸಂಗಿಯ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಪ್ರೊ.ಪಿ.ಬಿ. ಬಡಿಗೇರ, ಮೌನೇಶ್ವರ ದೇವಸ್ಥಾನ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಕುಂದಣಗಾರ, ಚಂದ್ರಕಾಂತ ಸೋನಾರ, ದಾವಣಗೆರೆ ವಿಶ್ವಕರ್ಮ ಸಮಾಜದ ಅಧ್ಯಕ್ಷ ನಾಗೇಂದ್ರಾಚಾರ್ ಬಸಾಪುರ, ಜಗದ್ಗುರು ಮೌನೇಶ್ವರ ದೇವಸ್ಥಾನ ಹಾಗೂ ಮಠದ ಪದಾಧಿಕಾರಿಗಳು ಹಾಗೂ ಸದಸ್ಯರು, ವಿಶ್ವಕರ್ಮ ಮಹಾ ಒಕ್ಕೂಟದ ಪದಾಧಿಕಾರಿಗಳು. ಸೇರಿದಂತೆ ವಿವಿಧ ಭಾಗಗಳಿಂದ ಬಂದ ಹಲವಾರು ಗಣ್ಯಮಾನ್ಯರು ಉಪಸ್ಥಿತರಿದ್ದರು. ಆರಂಭದಲ್ಲಿ ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಮತ್ತು ನಿವೃತ್ತ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ರಾಜಗೋಪಾಲ ಕಡ್ಲಿ ಕೊಪ್ಪ ಸ್ವಾಗತಿಸಿದರು.