ಚನ್ನಪಟ್ಟಣ: ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಜ.೨೩ರಿಂದ ೨೫ರವರೆಗೆ ಮೂರು ದಿನಗಳ ಕಾಲ ಬೊಂಬೆನಾಡ ಗಂಗೋತ್ಸವ ನಡೆಯಲಿದೆ ಎಂದು ಬೊಂಬೆನಾಡ ಗಂಗೋತ್ಸವ ಆಚರಣಾ ಸಮಿತಿ ಸಂಚಾಲಕ ದುಂತೂರು ವಿಶ್ವನಾಥ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೊಂಬೆನಾಡ ಗಂಗೋತ್ಸವದ ಪ್ರಯುಕ್ತ ಈಗಾಗಲೇ ಹಲವು ಕ್ರೀಡೆಗಳನ್ನು ಹಮ್ಮಿಕೊಂಡಿದ್ದು, ಎರಡು ದಿನ ಆ ಕ್ರೀಡೆಗಳ ಸಮಿಫೈನಲ್ ಮತ್ತು ಫೈನಲ್ ನಡೆಯಲಿದೆ. ಇಲ್ಲಿ ಗೆದ್ದ ತಂಡಗಳು ಕನಕಪುರದಲ್ಲಿ ನಡೆಯಲಿರುವ ಕನಕೋತ್ಸವದಲ್ಲಿ ಭಾಗಿಯಾಗಲಿವೆ. ಶುಕ್ರವಾರ ಬೆಳಗ್ಗೆ ೫.೩೦ರಿಂದ ಯೋಗಾಸನ ಶಿಬಿರ ನಡೆಯಲಿದೆ. ಶುಕ್ರವಾರ ಮತ್ತು ಶನಿವಾರ ಎರಡು ವಿಜ್ಞಾನ ಮೇಳ ನಡೆಯಲಿದೆ. ವಿಜ್ಞಾನ ಮೇಳಕ್ಕೆ ನೂರು ವಿಷಯಗಳನ್ನು ನೀಡಲಾಗಿದ್ದು, ಇದರಲ್ಲಿ ತಾಲೂಕಿನ ಸಾಕಷ್ಟು ಶಾಲೆಗಳ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ ಎಂದರು.
ಶನಿವಾರ ಬೆಳಗ್ಗೆ ಆರು ಗಂಟೆಗೆ ಮ್ಯಾರಥಾನ್ ಓಟ, ೯ಗಂಟೆಯಿಂದ ಕಬಡ್ಡಿ, ವಾಲಿಬಾಲ್, ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸಮಿಫೈನಲ್ ಮತ್ತು ಫೈನಲ್ ಪಂದ್ಯಗಳು, ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, ಮಹಿಳೆಯರಿಗೆ ಕೇಶ ವಿನ್ಯಾಸ ಸ್ಪರ್ಧೆ, ಜಾನಪದ-ದೇಶಭಕ್ತಿ ಗೀತೆಗಳ ಸಮೂಹ ನೃತ್ಯ ನಡೆಲಿದೆ. ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ೧ರಿಂದ ೪ನೇ ತರಗತಿ, ೫ರಿಂದ ೭ನೇ ತರಗತಿ ಮತ್ತು ೮ರಿಂದ ೧೦ತರಗತಿ ವಿಭಾಗದಲ್ಲಿ ನಡೆಯಲಿದೆ. ಶನಿವಾರ ಮಧ್ಯಾಹ್ನ ಎಸ್ಸೆಸ್ಸೆಲ್ಸಿಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.೭೦ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.
ಶನಿವಾರ ಬೆಳಗ್ಗೆ ೧೦ಗಂಟೆಯಿಂದ ಗ್ರಾಮದೇವತೆಗಳ ಉತ್ಸವ ನಡೆಯಲಿದ್ದು, ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಆನೆಗಳ ಮೇಲೆ ಉತ್ಸವ ಮೂರ್ತಿಗಳನ್ನು ಕೂರಿಸಿ ಮೆರವಣಿಗೆ ನಡೆಸಲಾಗುವುದು ಎಂದರು.ಭಾನುವಾರ ಬೆಳಗ್ಗೆ ಸಾಧಕರ ಸಮಾವೇಶ, ನೌಕರರ ಸಮಾವೇಶ, ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ನಡೆಲಿದೆ. ಸಂಶೋಧಕ ಡಾ.ತಲಕಾಡು ಚಿಕ್ಕರಂಗೇಗೌಡ ಗಂಗರ ರಾಜಮನೆತನದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕರಾದ ಸಿ.ಪಿ.ಯೋಗೇಶ್ವರ್, ಎಚ್.ಸಿ.ಬಾಲಕೃಷ್ಣ, ಇಕ್ಬಾಲ್ ಹುಸೇನ್, ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ, ಎಸ್.ರವಿ, ರಾಮೋಜಿಗೌಡ, ಸುಧಾಮದಾಸ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪೊಟೋ೨೧ಸಿಪಿಟಿ೧: ಚನ್ನಪಟ್ಟಣದಲ್ಲಿ ಬೊಂಬೆನಾಡ ಗಂಗೋತ್ಸವ ಆಚರಣಾ ಸಮಿತಿ ಸಂಚಾಲಕ ದುಂತೂರು ವಿಶ್ವನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಗರಸಭೆ ಅಧ್ಯಕ್ಷ ವಾಸೀಲ್ ಅಲಿಖಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್. ಪ್ರಮೋದ್ ಇತರರಿದ್ದರು.