ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪ್ರಾಥಮಿಕ ಹಾಗೂ ಪ್ರೌಢಶಾಲೆ ಪ್ರವೇಶಾತಿ ಸಂಬಂಧಿಸಿದಂತೆ ಆಯಾ ಶಾಲೆಗಳ ನೋಟೀಸ್ ಬೋರ್ಡ್ ಗಳಲ್ಲಿ ಶುಲ್ಕದ ವಿವರ ಪ್ರಕಟಿಸಲು ಮೂರು ದಿನಗಳ ಗಡವು ನೀಡಲಾಗಿದೆ. ಇಲ್ಲಿನ ರೋಟರಿ ಬಾಲ ಭವನದಲ್ಲಿ ಬುಧವಾರ ನಡೆದ ಖಾಸಗಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಹಾಗೂ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಖಡಕ್ ಸಂದೇಶ ರವಾನೆ ಮಾಡಲಾಯಿತು.ಡಿಡಿಪಿಐ ಮಂಜುನಾಥ್ ಸಭೆ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್, ಶುಲ್ಕ ಹಾಗೂ ವಂತಿಗೆ ವಸೂಲು ವಿಚಾರದಲ್ಲಿ ಸಾರ್ವಜನಿಕರು, ಪೋಷಕರಿಂದ ಹಲವಾರು ದೂರುಗಳು ಬಂದಿವೆ. ಸರ್ಕಾರದ ನಿಯಮಾವಳಿ ಉಲ್ಲಂಘಿಸಿ ಶುಲ್ಕ ವಸೂಲು ಮಾಡಿದರೆ ಕ್ರಮ ಕೈಗೊಳ್ಳುವುದು ಅನಿವಾರ್ಯ. ಶುಲ್ಕ ನಿಗದಿ ಮಾಡುವಾಗ ರೂಪಿಸಲಾದ ನಿಯಮಾವಳಿಗಳ ಚಾಚು ತಪ್ಪದೆ ಪಾಲಿಸಬೇಕು. ಮೂರು ದಿನಗಳ ಒಳಗಾಗಿ ಪ್ರವೇಶಾತಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳ ನೋಟೀಸ್ ಬೋರ್ಡ್‌ನಲ್ಲಿ ಪ್ರಕಟಿಸಿ ಅದರ ಒಂದು ಪ್ರತಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಸಲ್ಲಿಸುವಂತೆ ಸೂಚಿಸಿದರು.
ಶಾಲಾ ಪ್ರವೇಶಾತಿ ಸಂಬಂಧಿಸಿ ಶಿಕ್ಷಣ ಇಲಾಖೆ ಏ.4,2025 ರಂದು ಸುತ್ತೋಲೆ ಹೊರಡಿಸಿದ್ದು ಎಲ್ಲ ಶಾಲೆಗಳಿಗೆ ಕಳಿಸಲಾಗಿದೆ. ಯಾವುದೇ ಕಾರಣದಿಂದ ಏಪ್ರಿಲ್ ಗೆ ಮುಂಚೆ ಅಡ್ಮಿಷನ್ ಮಾಡಿಕೊಳ್ಳುವಂತಿಲ್ಲವೆಂದು ಸೂಚಿಸಿದೆ. ಶುಲ್ಕ ನಿಗಧಿ ಅಂತಿಮವಾಗಿಲ್ಲ. ಹಾಗಾಗಿ ಯಾವ ಶಿಕ್ಷಣ ಸಂಸ್ಥೆಗಳು ಅಡ್ಮಿಷನ್ ಕ್ಲೋಸ್ ಆಗಿದೆ ಎಂದು ಹೇಳುವಂತಿಲ್ಲ. ಜೂನ್ ಅಂತ್ಯದವರೆಗೂ ಅವಕಾಶಗಳಿರುತ್ತವೆ. ಪ್ರವೇಶದಲ್ಲಿ ಮೀಸಲಾತಿ ಕಡ್ಡಾಯವಾಗಿ ಪಾಲನೆ ಮಾಡಬೇಕು. ಎಸ್, ಎಸ್‌ಟಿ ಓಬಿಸಿಗಳಿಗೆ ಶೇ.50 ಸೀಟು ಕಾಯ್ದಿರಿಸುವುದು ಕಡ್ಡಾಯ. ಅದೇ ರೀತಿ ವಿದ್ಯಾರ್ಥಿನಿಯರಿಗೆ ಶೇ.50ರಷ್ಟು ಸೀಟು (ಕೋ ಎಜುಕೇಷನ್ ಇರುವಲ್ಲಿ) ನೀಡಬೇಕು. ಯಾವುದೇ ಸಬೂಬು ಹೇಳುವಂತಿಲ್ಲ. ಎಸ್ಸಿ, ಎಸ್ಟಿ ಅಭ್ಯರ್ಥಿಗಳು ಬರಲಿಲ್ಲವೆಂದು ಬೇರೆಯವರಿಗೆ ಕೊಡುವಂತಿಲ್ಲ. ಕಡೇ ದಿನದವರೆಗೂ ಕಾಯಬೇಕೆಂದು ಹೇಳಿದರು.ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಾಗ ಯಾವುದೇ ಕಾರಣಕ್ಕೂ ಪ್ರವೇಶ ಪರೀಕ್ಷೆ ನಡೆಸುವಂತಿಲ್ಲ. ಪ್ರಾಥಮಿಕ ಶಾಲೆಗೆ ಡಿಎಡ್ ಆದವರು ಹಾಗೂ ಪ್ರೌಢಶಾಲೆಗಳಿಗೆ ಬಿಎಡ್, ಸ್ಲೆಟ್ ಆದ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಹೆಸರನ್ನು ಎಸ್‌ಎಟಿಎಸ್ ನಲ್ಲಿ ಅಪ್‌ಡೇಟ್ ಮಾಡಬೇಕು. ಶಾಲಾ ಕಟ್ಟಡ ಹಾಗೂ ವಾಹನ ಸುರಕ್ಷತೆ ಬಗ್ಗೆ ಗ್ಯಾರಂಟಿ ಕೊಡಬೇಕು. ವಾಹನ ಚಾಲಕರು ಕಡ್ಟಾಯವಾಗಿ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಅನುಮತಿ ಪಡೆಯಬೇಕು. ಆಟೋ ಹಾಗೂ ಇತರೆ ವಾಹನಗಳಲ್ಲಿ ಶಾಲೆಗೆ ಬಂದು ಹೋಗುವ ವಿದ್ಯಾರ್ಥಿಗಳ ರಕ್ಷಣೆ ಜವಾಬ್ದಾರಿ ಕೂಡಾ ಶಿಕ್ಷಣ ಸಂಸ್ಥೆಯವರದ್ದಾಗಿರುತ್ತದೆ ಎಂದು ಎಚ್ಚರಿಸಿದರು.
ವಿದ್ಯಾರ್ಥಿನಿಯರು ಸಂಚರಿಸುವ ಶಾಲಾ ಬಸ್‌ಗಳಲ್ಲಿ ಮಹಿಳಾ ಕೇರ್ ಟೇಕರ್ ನಿಯೋಜಿಸುವುದು ಅಗತ್ಯ. ಅದೇ ರೀತಿ ಪ್ರತಿ ಶಾಲೆಯಲ್ಲಿಯೂ She Box ಓಪನ್ ಮಾಡಬೇಕು. ಪ್ರತಿ ಶಾಲೆಯು ಸಾರ್ವಜನಿಕ ಹಾಗೂ ಜನಸ್ನೇಹಿಯಾಗಿರುವಂತೆ ನೋಡಿಕೊಳ್ಳಬೇಕು. ಶಿಕ್ಷಣ ಇಲಾಖೆ ನೀಡಿದ ನಿರ್ದೇಶನಗಳ ಪಾಲನೆ ಮಾಡದಿದ್ದರೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರಕ್ಕೆ ದೂರು ನೀಡುವುದಾಗಿ ನಾಗಭೂಷಣ್ ಎಚ್ಚರಿಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಮಾತನಾಡಿ, ಪ್ರವೇಶಾತಿ ಸಂಬಂದಿಸಿದಂತೆ ಸರ್ಕಾರದ ನಿಯಮಾವಳಿ ಪಾಲನೆ ಮಾಡುವುದು ಕಡ್ಡಾಯ. ಉಲ್ಲಂಘಿಸಿದರೆ ಕಠಿಣ ಕ್ರಮ ಎದುರಿಸುವುದು ಅನಿವಾರ್ಯವೆಂದರು. ಬಿಆರ್ ಸಿ ಸಂಪತ್ ಕುಮಾರ್ ಇದ್ದರು.