ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಂಗಳವಾರ ಇಬ್ಬರು ರೈತ ಮಹಿಳೆ ಸೇರಿದಂತೆ ಮೂವರು ರೈತರು ವಿಷ ಸೇವಿಸಲು ವಿಫಲ ಯತ್ನ ನಡೆಸಿದ ಘಟನೆ ಜರುಗಿತು.
ತಾಲೂಕಿನ ಬಿಡದಿ ಹೋಬಳಿ ಬೈರಮಂಗಲ ವೃತ್ತದಲ್ಲಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ನೂರಾರು ರೈತರು ಕಳೆದ ಆರು ದಿನಗಳಿಂದ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಪ್ರತಿ ನಿತ್ಯ ವಿವಿಧ ಪಕ್ಷಗಳ ನಾಯಕರು ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಭಾಗವಹಿಸಿದ್ದಾರೆ.
ಅದರಂತೆ ಮಂಗಳವಾರ ಬಿಜೆಪಿ ನಾಯಕರಾದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ , ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹಾಗೂ ಸಂಸದ ಡಾ.ಸಿ.ಎನ್.ಮಂಜುನಾಥ್ ರವರು ಧರಣಿಯಲ್ಲಿ ಪಾಲ್ಗೊಂಡು ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣರವರು ಚಳವಳಿಗಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಮಯದಲ್ಲಿ ವೇದಿಕೆ ಮುಂಭಾಗದಲ್ಲಿಯೇ ನಿಂತಿದ್ದ ರೈತರಾದ ನಾಗೇಶ್ ಕುಮಾರ್ , ಶಾರದಮ್ಮ ಹಾಗೂ ರಮ್ಯಾ ಅವರು ಜೊತೆಯಲ್ಲಿ ತಂದಿದ್ದ ಕೀಟ ನಾಶಕವನ್ನು ಸೇವಿಸಲು ಮುಂದಾಗಿದ್ದಾರೆ.
ಮೂವರು ರೈತರು ವಿಷ ಸೇವಿಸಲು ಮುಂದಾದ ಘಟನೆಯಿಂದಾಗಿ ಪ್ರತಿಭಟನಾ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಆಕ್ರೋಶದ ಕಟ್ಟೆ ಹೊಡೆದು ರೈತರು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದರು.
ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ನಾವುಗಳು ಸ್ವಾರ್ಥಕ್ಕಾಗಿ ಬಂದಿಲ್ಲ. ಜನಪ್ರತಿನಿಧಿಗಳಾದ ನಾವುಗಳು ಜನರ ಪರವಾಗಿ ನಿಲ್ಲಬೇಕೆಂದು ಬಂದಿದ್ದೇವೆ. ಭೂ ಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ ಎಂದು ಒಗ್ಗಟ್ಟಾಗಿರುವ ಶಪಥ ಮಾಡಿ ಹೋರಾಟ ಬಲಿಷ್ಠಗೊಳಿಸಬೇಕು. ಆತ್ಮಹತ್ಯೆ ಅಂತಹ ನಿರ್ಧಾರಕ್ಕೆ ಯಾರೂ ಬರಬಾರದು. ಜೀವ ಕಳೆದುಕೊಳ್ಳಲು ಅಲ್ಲ, ಬದುಕು ಕಟ್ಟಿಕೊಳ್ಳಲು ಚಳವಳಿ ನಡೆಸುತ್ತಿದ್ದೇವೆ ಎಂದು ರೈತರಿಗೆ ಕಿವಿಮಾತು ಹೇಳಿದರು.
ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಮಂಗಳವಾರ ನಡೆದ ಚಳವಳಿಯಲ್ಲಿ ಮೂವರು ರೈತರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.