ಕನ್ನಡಪ್ರಭ ವಾರ್ತೆ ಮೈಸೂರು
ಆರನೇ ದಿನವಾದ ಮಂಗಳವಾರ ಬಯಲು ರಂಗಮಂದಿರ ಕಿಕ್ಕಿರಿದು ತುಂಬಿದ್ದ ಯುವಜನತೆ ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆಯ ಕಡಲಲ್ಲಿ ತೇಲಿದರು.
ಮಂಡ್ಯದ ಪ್ರೇರಣಾ ವಿಶೇಷ ಚೇತನರ ಟ್ರಸ್ಟ್‌ವಿಶೇಷಚೇತನ ಮಕ್ಕಳು ‘ಈ ಕನ್ನಡ ಮಣ್ಣನ್ನು ಮರಿಬೇಡ’ ಎನ್ನುತ್ತ ಕನ್ನಡ ಕಂಪನ್ನು ಚೆಲ್ಲಿದರು. ಗಂಗೋತ್ರಿಯ ಜ್ಞಾನ ದೀಪ ಪ್ರಥಮ ದರ್ಜೆ ಕಾಲೇಜಿನ ತಂಡವು ಹಿರಣಯ್ಯ ಕಶ್ಯಪನ ಜೀವನ ಚರಿತ್ರೆಯನ್ನು ಭಕ್ತ ಪ್ರಹ್ಲಾದ ಸಿನಿಮಾದ ತುಣುಕು ಮತ್ತು ಸಂಭಾಷಣೆಗಳ ನೃತ್ಯರೂಪಕ ನಾರಾಯಣ ಹರಿ ನಾರಾಯಣ ದೇವರ ಭಕ್ತಿ ತುಂಬಿದರು.ಮಳವಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ನಾಯಕ ನೀನು ಭೀಮ ರಾವ್ ಹಾಡಿನ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ಜೀವನ ಚರಿತ್ರೆ ಮತ್ತು ಸಂವಿಧಾನ ಮಹತ್ವವನ್ನು ಸಾರುವ ಮೂಲಕ ಅಂಬೇಡ್ಕರ್ ಅವರ ಸಾರ್ಥಕ ಬದುಕನ್ನು ಅನಾವರಣಗೊಳಿಸಿತು.
ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜಾನಪದ ನೃತ್ಯ ಸೊಬಗನ್ನು ಉಣಬಡಿಸಿದರು. ಮೈಸೂರಿನ ಸೆಂಟ್ ಜಾನ್ಸ್ ಕಾಂಪೋಸಿಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಯೋಧರ ಕೆಚ್ಚೆದೆಯ ಹೋರಾಟವನ್ನು ನೃತ್ಯದಲ್ಲಿ ತಂದು ಸೈನಿಕರ ತ್ಯಾಗ ಬಲಿದಾನವನ್ನು ಸ್ಮರಿಸಿದರು.ದಟ್ಟಗಳ್ಳಿಯ ಶ್ರೀ ಲಕ್ಷ್ಮೀಯಗ್ರೀವ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪೌರಾಣಿಕತೆಯ ಪ್ರಸಂಗವನ್ನು ನೃತ್ಯದ ಊಣಬಡಿಸಿದರು. ನಂಜನಗೂಡಿನ ಜೆಎಸ್‌ಎಸ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ‘ದೇವ ಶ್ರೀ ಗಣೇಶ’ ಹಾಡಿನಲ್ಲಿ ಗಣಪತಿ ಹಬ್ಬದ ಸಂಭ್ರಮ ಸಾರಿದರು.
ಹೊಳೆ ನರಸೀಪುರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ತಂಡ ಕನ್ನಡ ನಟರು ಪರಿಚಯಿಸಿ ಸಿನಿಮಾಧಾರಿತ ನೃತ್ಯ ಪ್ರದರ್ಶಿಸಿದರು.ಸ್ವಚ್ಛತಾ ಕಾರ್ಮಿಕರಿಗೆ ಸನ್ಮಾನ:
ಇದೇ ವೇಳೆ ಸ್ವಚ್ಛತೆಯಲ್ಲಿ ಮೈಸೂರಿಗೆ ಪ್ರಶಸ್ತಿ ಭಾಜನರಾಗಲು ಕಾರಣೀಭೂತರಾದ ಸ್ವಚ್ಚತಾ ಕಾರ್ಮಿಕರನ್ನು ಸನ್ಮಾನಿಸಿ ಸ್ವಚ್ಛತಾ ಕಾರ್ಮಿಕರ ಶ್ರಮವನ್ನು ಯುವ ಸಮೂಹಕ್ಕೆ ತಿಳಿಸಲಾಯಿತು.