ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಶರಣಸಂಸ್ಕೃತಿ ಉತ್ಸವ ಹಾಗೂ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಲಿಂಗಾಯತ, ವೀರಶೈವ, ಇತರ ಸರ್ವ ಸಮಾಜ ಬಾಂಧವರ ವಿಶೇಷ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶ್ವದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಹೆಣ್ಣಿಗೆ ಸರ್ವ ಸಮಾನತೆಯನ್ನು ನೀಡಿದ ಹಿರಿಮೆ ವಚನ ಚಳವಳಿಯದ್ದು ಎಂದರು.
ಭೋಗದ ವಸ್ತುವಾಗಿ, ಗೇಯುವ ಸರಕಾಗಿ ಪರಿಗಣಿಸಿದ್ದ ಕಾಲದಲ್ಲಿ ಪುರುಷನಷ್ಟೆ ಮಹಿಳೆ ಸರ್ವಶಕ್ತಳು, ಸರಿ ಸಮಾನಳು ಎನ್ನುವುದನ್ನು ಮನಗಂಡವರು ಬಸವಣ್ಣ. ಹಾಗಾಗಿ ಅವರನ್ನು ಯುಗದ ಉತ್ಸಾಹ ಎಂದು ಅಲ್ಲಮಪ್ರಭುದೇವರು ಬಣ್ಣಿಸಿದ್ದಾರೆ.ಅವರ ಹೆಸರಿನ ಬಸವ ಸಂಸ್ಕೃತಿ ಅಭಿಯಾನ ಲಿಂಗಭೇದ, ಜಾತಿ, ವರ್ಗ, ವರ್ಣ, ಎಲ್ಲ ಮಿತಿಗಳನ್ನು ಮೀರಿ ನಡೆಯಬೇಕಿದೆ. ಅದರಲ್ಲಿ ಸರ್ವರೂ ಭಾಗವಹಿಸಬೇಕು ಎಂದರು.
ಮುಖಂಡ ಜಿ.ಎಸ್ ಅನಿತ್‌ಕುಮಾರ್ ಮಾತನಾಡಿ, ಚಿತ್ರದುರ್ಗದಲ್ಲಿ ಒಂದು ಅಪರೂಪದ ಬಸವ ಸಂಸ್ಕೃತಿ ಅಭಿಯಾನ ಶರಣಸಂಸ್ಕೃತಿ ಉತ್ಸವ ಸಂದರ್ಭದಲ್ಲಿ ನಡೆಸಲು ತಯಾರಿ ನಡೆದಿದೆ. ಇಂತಹ ಸಂಸ್ಕೃತಿ ಬಿಂಬಿಸುವ ಉತ್ಸವಗಳ ಅಗತ್ಯವಿದೆ. ಅದಕ್ಕಾಗಿ ನನ್ನ ಸಹಕಾರವೂ ಇದೆ ಎಂದರು. ವರ್ತಕರಾದ ಶಂಕರಮೂರ್ತಿ, ಡಿ.ಎಸ್. ಸುರೇಶ್‌ಬಾಬು, ಲೇಖಕ ಆನಂದಕುಮಾರ್ ಮಾತನಾಡಿದರು.
ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಅವರು, ಇದೇ ತಿಂಗಳ 20 ರಿಂದ ಅಕ್ಟೋಬರ್ 5 ರವರೆಗೆ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆರೋಗ್ಯದ ಹಿತದೃಷ್ಟಿಯಿಂದ ಖ್ಯಾತ ಯೋಗಗುರು ಚೆನ್ನಬಸವಣ್ಣ ಅವರಿಂದ ಯೋಗ, ವಿವಿಧ ಮಠಗಳ ಶ್ರೀಗಳಿಂದ ಶಿವಯೋಗ, ಕೃಷಿ, ಮಹಿಳಾ, ಯುಜಜನ ಸಾಹಿತ್ಯ ಮತ್ತು ಜಾನಪದ ಗೋಷ್ಠಿಗಳು ಸೇರಿದಂತೆ ಅಥಣಿ ಮುರುಘೇಂದ್ರ ಶಿವಯೋಗಿಗಳ ಕಾರ್ಯಸಾಧನೆ, ಮುರುಘಾಮಠದ ಕತೃ ಸೇರಿದಂತೆ ಇನ್ನುಳಿದ ಶ್ರೀಗಳವರ ಜೀವನಸಾಧನೆ ಕುರಿತ ವಿಚಾರಸಂಕಿರಣ, ಮಕ್ಕಳಗೋಷ್ಠಿ, ಕುಸ್ತಿ, ಪಾರಂಪರಿಕ ಕಾರ್ಯಕ್ರಮಗಳ ಜತೆ ೨೮ರಂದು ವಿಶೇಷವಾಗಿ ಬಸವಸಂಸ್ಕೃತಿ ಅಭಿಯಾನ ನಡೆಯಲಿದೆ. ಅದಕ್ಕಾಗಿ ಜಿಲ್ಲೆಯ ಪ್ರತಿಷ್ಠೆಯ ಕಾರಣಕ್ಕಾಗಿ ಅರ್ಥಪೂರ್ಣವಾಗಿಸಲು ತಯಾರಿ ನಡೆದಿದೆ. 5 ಸಾವಿರ ಶರಣ-ಶರಣೆಯರು ಏಕಕಾಲಕ್ಕೆ ಹಾಡಿನ ವಚನ ಗಾನಸುಧೆ ವಚನ ಝೇಂಕಾರ ಏರ್ಪಡಿಸಲಾಗಿದೆ ಎಂದು ಹೇಳಿದರು.