ಕನ್ನಡಪ್ರಭ ವಾರ್ತೆ ಮೈಸೂರು
ಆತಿಥ್ಯ ಶಿಸ್ತಿನಿಂದ ಕೂಡಿದ್ದರೆ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.ನಗರದ ಬಿ.ಎನ್. ರಸ್ತೆಯಲ್ಲಿರುವ ಹೊಟೇಲ್ ಪೈ ವಿಸ್ತಾ ಸಭಾಂಗಣದಲ್ಲಿ ಹೊಟೇಲ್ ಮಾಲೀಕರ ಪತ್ತಿನ ಸಹಕಾರ ಸಂಘದ 30ನೇ ವಾರ್ಷಿಕೋತ್ಸವ ಅಂಗವಾಗಿ ಹಿರಿಯ ಹೊಟೇಲ್ ಉದ್ಯಮಿಗಳಿಗೆ ಸಹಕಾರ ಮಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹೊಟೇಲ್ ಮಾಲೀಕರು ದಸರಾ ಮಹೋತ್ಸವಕ್ಕೆ ದೇಶ- ವಿದೇಶಗಳಿಂದ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಅತ್ಯುತ್ತಮ ಆತಿಥ್ಯ ನೀಡುವ ಮೂಲಕ ದಸರಾ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ದಸರಾದ ಯಾವುದೇ ಕಾರ್ಯಕ್ರಮ ನೋಡಿಕೊಂಡು ಬರುವವರಿಗೆ ತಡರಾತ್ರಿವರೆಗೂ ರುಚಿ, ಶುಚಿತ್ವದ ಆಹಾರ ನೀಡುವ ಮೂಲಕ ಮೈಸೂರು ಆತಿಥ್ಯ ಪ್ರಪಂಚದಾದ್ಯಂತ ಹೆಸರು ವಾಸಿಯಾಗಿದೆ ಎಂದರು.ದಸರಾ ಮಾತ್ರವಲ್ಲದೇ ಇಂದು ಹೊಟೇಲ್ ಮಾಲೀಕರು ಗುಣಮಟ್ಟದ ಆಹಾರ ನೀಡುವ ಮೂಲಕ ಭಾರತದ ಆರೋಗ್ಯ ಸ್ಥಿತಿಗೆ ಕೊಡುಗೆ ನೀಡುತ್ತಿದ್ದಾರೆ. ಹೊಟೇಲ್ ಒಂದು ದಿನ ಬಂದ್ ಮಾಡಿದರೆ, ಸರ್ಕಾರ ಊಟ ನೀಡಲು ಸಾಧ್ಯವಿಲ್ಲ. ಸರ್ಕಾರದ ಬದಲು ಹೊಟೇಲ್ ಮಾಲೀಕರು ಆ ಪಾಲುದಾರಿಕೆ ವಹಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಹಿರಿಯ ಹೊಟೇಲ್ ಉದ್ಯಮಿಗಳಾದ ಬಿ. ಬಾಲಕೃಷ್ಣ ಭಟ್, ಬಿ. ವಿಜಯಲಕ್ಷ್ಮೀ ಮತ್ತು ಡಿ. ಚಂದ್ರಶೇಖರ್ ಶೆಟ್ಟಿ ಅವರಿಗೆ ಸಹಕಾರ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಂಘದ ಅಧ್ಯಕ್ಷ ನಾರಾಯಣ ವಿ. ಹೆಗಡೆ, ಉಪಾಧ್ಯಕ್ಷ ಆನಂದ ಎಂ. ಶೆಟ್ಟಿ, ನಿರ್ದೇಶಕರಾದ ಸಿ. ನಾರಾಯಣಗೌಡ, ವಿ.ಎಸ್. ಶಾಸ್ತ್ರಿ, ಸುಬ್ರಹ್ಮಣ್ಯ ಆರ್. ತಂತ್ರಿ, ನಾರಾಯಣ ಕುಂದರ್, ಎಂ.ಎಸ್. ಜಯಪ್ರಕಾಶ್, ಕೆ.ಸಿ. ವಿಶ್ವನಾಂದ ಭಟ್, ಹೇಮಂತ್ ಕುಮಾರ್, ಸುಲೋಚನಾ ಸಿ. ಶೆಟ್ಟಿ, ಸುಮಿತ್ರಾ ಎ. ತಂತ್ರಿ ಮೊದಲಾದವರು ಇದ್ದರು.