ಮುನಿರಾಬಾದ್: ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್‌ನಲ್ಲಿ ಮರಳುತ್ತಿದ್ದ ಮೂವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಕರಮುಡಿ ಗ್ರಾಮದ ಬಸವರಾಜ (22), ಮುತ್ತಪ್ಪ (22) ಹಾಗೂ ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದ ಕೊಂಡಪ್ಪ ತಿಮ್ಮಾಪುರ (60) ಮೃತಪಟ್ಟವರು. ಎಂಟು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಕೊಪ್ಪಳದ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶುಕ್ರವಾರ ಪ್ರಯುಕ್ತ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮಸ್ಥರು ಹುಲಿಗೆಮ್ಮ ದೇವಿ ದರ್ಶನಕ್ಕೆ ಆಗಮಿಸಿದ್ದರು. ದರ್ಶನ ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ಟ್ರ್ಯಾಕ್ಟರ್‌ನಲ್ಲಿ ಮರಳುತ್ತಿರುವಾಗ ಹಿಂದಿನಿಂದ ವೇಗವಾಗಿ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಟ್ರ್ಯಾಕ್ಟರ್ ಪಲ್ಟಿಯಾಗಿ ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ 15 ಜನರ ಪೈಕಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಎಂಟು ಜನರು ಗಾಯಗೊಂಡಿದ್ದು, ಅವರನ್ನು ಕೊಪ್ಪಳ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ರಸ್ತೆ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅಪಘಾತ ಎಸಗಿದ ಖಾಸಗಿ ಬಸ್ ಚಾಲಕನು ಪರಾರಿಯಾಗಿದ್ದು, ಪೊಲೀಸರು ಶೋಧಿಸುತ್ತಿದ್ದಾರೆ.