ರಾಜ್ಯದಲ್ಲಿ ಮುಂದುವರಿದ ಮೈಕ್ರೋ ಫೈನಾನ್ಸ್ ಕಿರುಕುಳದ ಹಾವಳಿ : ಸಾಲದಿಂದ ಮತ್ತೆ ಮೂವರು ಬಲಿ

KannadaprabhaNewsNetwork |  
Published : Jan 28, 2025, 01:46 AM ISTUpdated : Jan 28, 2025, 05:28 AM IST
58 | Kannada Prabha

ಸಾರಾಂಶ

ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೆ ಮೂವರು ಬಲಿಯಾಗಿದ್ದಾರೆ. ಸಾಲಕ್ಕೆ ಹೆದರಿ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದ ಜಯಶೀಲ (53) ಹಾಗೂ ಮಲ್ಕುಂಡಿ ಗ್ರಾಮದ ಕೃಷ್ಣಮೂರ್ತಿ (32) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ಮಲ್ಕುಂಡಿ/ಹೊನ್ನಾಳಿ : ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೆ ಮೂವರು ಬಲಿಯಾಗಿದ್ದಾರೆ. ಸಾಲಕ್ಕೆ ಹೆದರಿ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದ ಜಯಶೀಲ (53) ಹಾಗೂ ಮಲ್ಕುಂಡಿ ಗ್ರಾಮದ ಕೃಷ್ಣಮೂರ್ತಿ (32) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ವೇಳೆ, ರಾಣೆಬೆನ್ನೂರು ತಾಲೂಕು ತುಮ್ಮಿನಕಟ್ಟೆಯ ಸರ್ಕಾರಿ ಶಾಲಾ ಶಿಕ್ಷಕಿ ಪುಷ್ಪಲತಾ (46) ಎಂಬುವರು ಹೊನ್ನಾಳಿ ಸಮೀಪ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಜಯಶೀಲ ಅವರು ಐಐಎಫ್ಎಲ್, ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್‌ಗಳಲ್ಲಿ ಮನೆ ಕಟ್ಟಲು, ವ್ಯವಸಾಯ ಹಾಗೂ ಹಸು ಸಾಕಾಣಿಕೆಗಾಗಿ 5 ಲಕ್ಷ ರು. ಸಾಲ ಪಡೆದಿದ್ದರು. ಪ್ರತಿ ತಿಂಗಳು 20 ಸಾವಿರಕ್ಕೂ ಹೆಚ್ಚು ಇಎಂಐ ಕಟ್ಟಬೇಕಾಗಿತ್ತು. ಸಾಲ ಮಾಡಿ ತೆಗೆದುಕೊಂಡಿದ್ದ ಹಸು ಕೂಡ ಇತ್ತೀಚೆಗೆ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದ್ದರು. ಭಾನುವಾರ ಸಮೀಪದ ಹುಲ್ಲಹಳ್ಳಿಗೆ ತೆರಳಿ ತಮ್ಮ ಜಮೀನಿನಲ್ಲಿ ವಿಷದ ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಲ್ಕುಂಡಿಯ ಕೃಷ್ಣಮೂರ್ತಿ ಅವರು 4 ಖಾಸಗಿ ಫೈನಾನ್ಸ್ ಗಳಲ್ಲಿ 4 ಲಕ್ಷ ರು.ಸಾಲ ಮಾಡಿದ್ದು, ವಾರಕ್ಕೊಮ್ಮೆ ಹಣ ಕಟ್ಟುತ್ತಿದ್ದರು. ಸೋಮವಾರ ಬೆಳಗ್ಗೆ ಕಂತು ಕಟ್ಟಬೇಕಾಗಿತ್ತು. ಹಣವಿಲ್ಲದೆ ಮನನೊಂದು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಸಕ ದರ್ಶನ್‌ ಧ್ರುವನಾರಾಯಣ್‌ ಅವರು ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರು.ಗಳ ಪರಿಹಾರ ಘೋಷಿಸಿದ್ದಾರೆ.

ಪುಷ್ಪಲತಾ ಅವರು ಶಿವಮೊಗ್ಗ ಮೂಲದ ಖಾಸಗಿ ಫೈನಾನ್ಸ್ ಸೇರಿದಂತೆ ಹಲವಾರು ಕಡೆ ಲಕ್ಷಾಂತರ ರು.ಸಾಲ ಪಡೆದುಕೊಂಡಿದ್ದರು. ಸಾಲ ಪಾವತಿಸಲಾರದೆ ಮನನೊಂದು ಭಾನುವಾರ ಮಧ್ಯಾಹ್ನ ಹೊನ್ನಾಳಿ ಸಮೀಪದ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಪತಿ ಹಾಲೇಶ್ ಶಿಕ್ಷಕರಾಗಿದ್ದು, ರಟ್ಟೆಹಳ್ಳಿ ತಾಲೂಕು ಕಿರಿಗೆರೆ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ಧಾರೆ. ಈ ದಂಪತಿಗೆ ಪುತ್ರ ಮತ್ತು ಪುತ್ರಿ ಇದ್ದಾರೆ.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌