ತಾಂತ್ರಿಕ ದೋಷದಿಂದಾಗಿ ವಿವಿಧ ಸಂಯೋಜಿತ ಕಾಲೇಜುಗಳ ಅಂತಿಮ ಸೆಮಿಸ್ಟರ್‌ ಎಂ.ಕಾಂ. ವಿದ್ಯಾರ್ಥಿಗಳ ಡೆಸರ್ಟೇಷನ್‌ ಮತ್ತು ವೈವಾ ಅಂಕಗಳು ಯುಯುಸಿಎಂಎಸ್‌ ತಂತ್ರಾಂಶದಲ್ಲಿ ತಪ್ಪಾಗಿ ನಮೂದಾಗಿದ್ದು ನಿಜ. ಈ ಲೋಪ ಗಮನಕ್ಕೆ ಬಂದ ಕೂಡಲೇ ಸರಿಪಡಿಸಿ ಸರಿಯಾದ ಫಲಿತಾಂಶವನ್ನು ಪ್ರಕಟಿಸಲಾಗಿದೆ

ಬೆಳಗಾವಿ : ತಾಂತ್ರಿಕ ದೋಷದಿಂದಾಗಿ ವಿವಿಧ ಸಂಯೋಜಿತ ಕಾಲೇಜುಗಳ ಅಂತಿಮ ಸೆಮಿಸ್ಟರ್‌ ಎಂ.ಕಾಂ. ವಿದ್ಯಾರ್ಥಿಗಳ ಡೆಸರ್ಟೇಷನ್‌ ಮತ್ತು ವೈವಾ ಅಂಕಗಳು ಯುಯುಸಿಎಂಎಸ್‌ ತಂತ್ರಾಂಶದಲ್ಲಿ ತಪ್ಪಾಗಿ ನಮೂದಾಗಿದ್ದು ನಿಜ. ಈ ಲೋಪ ಗಮನಕ್ಕೆ ಬಂದ ಕೂಡಲೇ ಸರಿಪಡಿಸಿ ಸರಿಯಾದ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ.

ತಾಂತ್ರಿಕ ದೋಷದಿಂದ ತಪ್ಪಾಗಿ ಫಲಿತಾಂಶ

ತಾಂತ್ರಿಕ ದೋಷದಿಂದ ತಪ್ಪಾಗಿ ಫಲಿತಾಂಶ ಪ್ರಕಟಿಸಿ 400 ಎಂ.ಕಾಂ. ವಿದ್ಯಾರ್ಥಿಗಳು ಫೇಲ್‌ ಆಗಿರುವ ಕುರಿತು ‘ಕನ್ನಡಪ್ರಭ’ ಡಿ.13ರಂದು ವಿಶೇಷ ವರದಿ ಪ್ರಕಟಿಸಿತ್ತು. ಈ ಸಂಬಂಧ ಬಿಜೆಪಿ ಸದಸ್ಯರು ವಿಧಾನ ಪರಿಷತ್‌ನಲ್ಲೂ ಸರ್ಕಾರದ ಗಮನ ಸೆಳೆದು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಆಗ್ರಹಿಸಿದ್ದರು. ಬಳಿಕ ಸರ್ಕಾರ ವಿವಿಯಿಂದ ವರದ ಮಾಹಿತಿ ಕೇಳಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ವಿಶ್ವವಿದ್ಯಾಲಯ ಲೋಪ ಸರಿಪಡಿಸಿದೆ. ತನ್ಮೂಲಕ ತಮ್ಮದಲ್ಲದ ತಪ್ಪಿಗೆ ಅನುತ್ತೀರ್ಣಗೊಂಡಿದ್ದ ಸುಮಾರು 400 ಎಂ.ಕಾಂ. ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿದಂತಾಗಿದೆ.

ಲಾಗಿನ್‌ನಲ್ಲಿ ಅಂಕಗಳನ್ನು ನಮೂದಿಸುವಾಗ ತಾಂತ್ರಿಕ ದೋಷ

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ವಿವಿಯ ಮೌಲ್ಯಮಾಪನ ಕುಲಸಚಿವ ಡಾ. ಚಂದ್ರಕಾಂತ್‌ ಎಸ್‌.ಕರಿಗಾರ್‌ ಅವರು, ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರ ಲಾಗಿನ್‌ನಲ್ಲಿ ಅಂಕಗಳನ್ನು ನಮೂದಿಸುವಾಗ ತಾಂತ್ರಿಕ ದೋಷದಿಂದ ಡೆಸರ್ಟೇಷನ್‌ ಮತ್ತು ವೈವಾ ವಿಷಯದ ಅಂಕಗಳಲ್ಲಿ ಲೋಪವಾಗಿತ್ತು. ತದನಂತರ ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರ ಮನವಿಯ ಮೇರೆಗೆ ಉನ್ನತ ಶಿಕ್ಷಣ ಇಲಾಖೆಯ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ(ಯುಯುಸಿಎಂಎಸ್‌) ಪೋರ್ಟಲ್‌ನ ನಿರ್ದೇಶಕರಿಗೆ ಈ ವಿಚಾರವಾಗಿ ಮನವಿ ಪತ್ರ ಸಲ್ಲಿಸಲಾಗಿತ್ತು. ಬಳಿಕ ನಿರ್ದೇಶಕರು ತಾಂತ್ರಿಕ ದೋಷ ಸರಿಪಡಿಸಿದ್ದರು. ಬಳಿಕ ಅಂಕ ನಮೂದಿಸುವಿಕೆಯಲ್ಲಿ ಆಗಿದ್ದ ಲೋಪವನ್ನು ಸರಿಪಡಿಸಿ ವಿದ್ಯಾರ್ಥಿಗಳಿಗೆ ಸರಿಯಾದ ಫಲಿತಾಂಶ ಪ್ರಕಟಿಸಲಾಗಿದೆ. ಯಾವುದೇ ವಿದ್ಯಾರ್ಥಿಗಳು ಡೆಸರ್ಟೇಷನ್‌ ಮತ್ತು ವೈವಾ ವಿಷಯದಲ್ಲಿ ಅನುತ್ತೀರ್ಣರಾಗಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.