ಜಿಲ್ಲೆಯಲ್ಲಿ ತುಮಕೂರು ಬಿಟ್ಟರೆ ಶಿಕ್ಷಣಕ್ಕೆ ಹೆಚ್ಚು ಪ್ರಸಿದ್ದಿ ಪಡೆದಿರುವ ನನ್ನ ಕ್ಷೇತ್ರ ತಿಪಟೂರಿನಲ್ಲಿ ನನಗೆ ಸಮಾಧಾನ ತರುವ ಫಲಿತಾಂಶ ಬರದಿರುವುದು ಬೇಸರ ತಂದಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು

ಕನ್ನಡಪ್ರಭ ವಾರ್ತೆ ತಿಪಟೂರು

ಜಿಲ್ಲೆಯಲ್ಲಿ ತುಮಕೂರು ಬಿಟ್ಟರೆ ಶಿಕ್ಷಣಕ್ಕೆ ಹೆಚ್ಚು ಪ್ರಸಿದ್ದಿ ಪಡೆದಿರುವ ನನ್ನ ಕ್ಷೇತ್ರ ತಿಪಟೂರಿನಲ್ಲಿ ನನಗೆ ಸಮಾಧಾನ ತರುವ ಫಲಿತಾಂಶ ಬರದಿರುವುದು ಬೇಸರ ತಂದಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು

ನಗರದ ಹಳೇಪಾಳ್ಯದ ಪಿಎಂಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಳೆದ ಬಾರಿ ೪ನೇ ಸ್ಥಾನ ಪಡೆದಿದ್ದು ತಿಪಟೂರು ಮೊದಲನೇ ಸ್ಥಾನದಲ್ಲಿರಬೇಕು ಅಥವಾ ಕನಿಷ್ಠ ಎರಡನೇ ಸ್ಥಾನಕ್ಕಾದರೂ ತಲುಪಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. ಮಕ್ಕಳ ಮನಸ್ಸನ್ನು ಅರಿತು ಬೋಧನೆ ಮಾಡುವ ಪ್ರವೃತ್ತಿಯನ್ನು ಶಿಕ್ಷಕರು ಅಳವಡಿಸಿಕೊಳ್ಳಬೇಕು. ಶೇ.೯೦ ಅಂಕ ಪಡೆಯುವ ಮಕ್ಕಳಿಗೆ ಪಾಠ ಮಾಡುವುದಕ್ಕಿಂತ ೩೫ರಿಂದ ೪೦ಅಂಕ ಪಡೆಯುತ್ತಿರುವ ಮಕ್ಕಳಿಗೆ ಉತ್ತಮವಾಗಿ ಪಾಠ ಮಾಡಿ ಅವರು ಶೇ.೯೦ ಅಂಕ ತೆಗೆಯುವ ಹಾಗೆ ಮಾಡುವುದೇ ಒಬ್ಬ ಉತ್ತಮ ಶಿಕ್ಷಕನ ಸಾಧನೆಯಾಗಿದೆ. ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರುವ ಒಂದು ಉತ್ತಮ ವೇದಿಕೆಯಾಗಿದ್ದು ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸುವ ವೇದಿಕೆಗೆ ಪೋಷಕರೂ ಬಂದು ಅವರನ್ನು ಪ್ರೋತ್ಸಾಹಿಸಬೇಕು ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಿಕ್ಷಣ ಮಾತ್ರವಲ್ಲ ಎಲ್ಲ ಕ್ಷೇತ್ರಗಳಿಗೂ ಪ್ರಾಮುಖ್ಯತೆ ನೀಡುತ್ತ್ತಿದೆ. ಎಲ್ಲ ಕ್ಷೇತ್ರಗಳಿಗೂ ಮೂಲಭೂತ ಸೌಕರ್ಯ ಸವಲತ್ತುಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ. ಶಾಸಕರಿಗೆ ನಿವೃತ್ತಿ ವೇತನ ಸಿಗುತ್ತದೆ. ಅದೇ ರೀತಿ ಕಷ್ಟಪಟ್ಟು ದುಡಿಯುವ ಶಿಕ್ಷಕರಿಗೂ ನಿವೃತ್ತಿ ವೇತನ ಕೊಡಬೇಕೆಂಬುದು ನನ್ನ ಹಾಗೂ ಶಿಕ್ಷಣ ಸಚಿವರ ಇಚ್ಛೆಯಾಗಿದೆ. ಆದರೆ ಇದಕ್ಕೆ ಸರ್ಕಾರದ ವತಿಯಿಂದ ಹಣಕಾಸು ಇಲಾಖೆಯ ಅನುಮತಿಯನ್ನು ಪಡೆಯಬೇಕಿದ್ದು ಅಲ್ಲಿ ಸ್ವಲ್ಪ ಕಷ್ಟದ ಪರಿಸ್ಥಿತಿ ಇರುವುದರಿಂದ ಕಡಿವಾಣ ಹಾಕುತ್ತಿದ್ದಾರೆ. ಆದರೂ ಅಧಿವೇಶನದಲ್ಲಿ ಇದರ ಬಗ್ಗೆ ಪ್ರಸ್ತಾಪಿಸುತ್ತೇನೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಮಣಿ ಮಾತನಾಡಿ ಪ್ರತಿಭಾ ಕಾರಂಜಿಯಲ್ಲಿ ಮೂರು ವಿಭಾಗಗಳನ್ನು ಮಾಡಿದ್ದು ಪ್ರತಿ ವಿಭಾಗದಲ್ಲಿಯೂ ೧೦ರಿಂದ ೧೫ ಸ್ಪರ್ಧೆಗಳನ್ನು ನಡೆಸಲಾಗುತ್ತದೆ ಎಂದರು. ಸಂಘದ ಜಿಲ್ಲಾಧ್ಯಕ್ಷ ಎಚ್.ಈ.ರಮೇಶ್ ಮಾತನಾಡಿ ಸರಕಾರ ಮಹಿಳಾ ಉದ್ಯೋಗಿಗಳಿಗೆ ಮನಸ್ಥಿತಿ ಅರಿತು ಪ್ರತಿ ತಿಂಗಳೂ ಒಂದು ದಿನ ಋತುಚಕ್ರ ರಜೆ ಹಾಗೂ ಶಿಶುಪಾಲನಾ ರಜೆಯನ್ನು ನೀಡಿ ಬೇಡಿಕೆಯನ್ನು ಈಡೇರಿಸಿ ಒಂದು ಲಕ್ಷ ಎಂಬತ್ತು ಸಾವಿರ ಮಹಿಳಾ ನೌಕರರಿಗೆ ಅನುಕೂಲ ಮಾಡಿಕೊಟ್ಟಿದೆ. ಅದೇ ರೀತಿ ಮುಂಬರುವ ಬಜೆಟ್ ಅಧಿವೇಶನದಲ್ಲಿ ಹಳೆಯ ಪೆನ್ಷನ್ ಸ್ಕೀಂಅನ್ನು ಜಾರಿಗೊಳಿಸಿ ಸರಕಾರಿ ನೌಕರರಿಗೆ ಅನುಕೂಲ ಮಾಡಿಕೊಡಲಿ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಕೋದಂಡರಾಮ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಚನ್ನೇಗೌಡ, ಪ್ರಾಥಮಿಕ ಶಿಕ್ಷಕರಸಂಘದ ಅಧ್ಯಕ್ಷ ದಕ್ಷಿಣಮೂರ್ತಿ, ಪ್ರಧಾನಕಾರ್ಯದರ್ಶಿ ಪಟ್ಟಾಭಿರಾಮು, ಬಿಆರ್‌ಸಿ ಉಮೇಶ್‌ಗೌಡ, ಶಮಂತ ಇನ್ನಿತರರು ಉಪಸ್ಥಿತರಿದ್ದರು.