ಲೋಕ ಅದಾಲತ್‌ನಲ್ಲಿ ಒಂದಾದ ಮೂರು ಜೋಡಿಗಳು, ತಂದೆ ಮಕ್ಕಳು

KannadaprabhaNewsNetwork |  
Published : Jul 14, 2024, 01:32 AM IST
ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ವಿಚ್ಛೇದನಕ್ಕಾಗಿ ಅಲೆಯುತ್ತಿದ್ದ ಮೂರು ಜೋಡಿಗಳನ್ನು ರಾಜಿ ಸಂಧಾನದ ಮೂಲಕ ಒಂದು ಮಾಡಲಾಯಿತು. | Kannada Prabha

ಸಾರಾಂಶ

ಮನಸ್ತಾಪದಿಂದ ಪರಸ್ಪರ ಜಗಳವಾಡಿಕೊಂಡು ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಹಲವಾರು ವರ್ಷಗಳಿಂದ ಅಲೆಯುತ್ತಿದ್ದ ಮೂರು ಜೋಡಿಗಳ ಮನವೊಲಿಸಿ, ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಒಂದುಗೂಡಿಸಲಾಯಿತು.

ಕೊಪ್ಪಳ: ಮನಸ್ತಾಪದಿಂದ ಪರಸ್ಪರ ಜಗಳವಾಡಿಕೊಂಡು ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಹಲವಾರು ವರ್ಷಗಳಿಂದ ಅಲೆಯುತ್ತಿದ್ದ ಮೂರು ಜೋಡಿಗಳ ಮನವೊಲಿಸಿ, ಲೋಕ ಅದಾಲತ್‌ನಲ್ಲಿ ಒಂದು ಮಾಡಲಾಗಿದೆ. ಅಷ್ಟೇ ಅಲ್ಲ, ತಂದೆ ಮತ್ತು ಮಕ್ಕಳ ನಡುವೆಯ ಜಗಳವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಿ ಒಂದುಮಾಡಲಾಗಿದೆ.

ಹೌದು, ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಬೇರೆಯಾಗುತ್ತಿದ್ದವರ ಬದುಕಿಗೆ ಮತ್ತೆ ಬೆಸುಗೆ ಹಾಕಲಾಗಿದೆ. ಪರಸ್ಪರ ಬದುಕು ಸಾಗಿಸುವುದು ಕಷ್ಟ, ಹೀಗಾಗಿ ನಮಗೆ ವಿಚ್ಛೇದನ ನೀಡಿ ಎಂದು ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದವರಿಗೆ ಜೀವನ ಪಾಠ ಮಾಡಿ, ಒಂದುಗೂಡಿಸಲಾಗಿದೆ. ಪರಸ್ಪರ ಭಿನ್ನಾಭಿಪ್ರಾಯ ಬರುವುದು ಸಹಜ. ಹಾಗಂತ ಶಾಶ್ವತವಾಗಿ ದೂರವಾಗುವುದು ಸರಿಯಲ್ಲ. ಇದು ಪರಿಹಾರವೂ ಅಲ್ಲ. ಹೀಗಾಗಿ, ನೀವು ನಿಮ್ಮ ಮನಸ್ತಾಪಗಳನ್ನು ಮರೆತು, ಪರಸ್ಪರ ಪ್ರೀತಿಯಿಂದ ಬದುಕಬಹುದು ಎನ್ನುವ ಅರಿವು ಮೂಡಿಸಿ, ಒಂದು ಮಾಡಲಾಯಿತು.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ. ಚಂದ್ರಶೇಖರ ಅವರ ನೇತೃತ್ವದಲ್ಲಿ ಒಂದಾದ ಜೋಡಿಗಳಿಗೆ ಪರಸ್ಪರ ಹೂಮಾಲೆ ಹಾಕಿ ಶುಭ ಹಾರೈಸಲಾಯಿತು.

ಹಿಟ್ನಾಳ ಗ್ರಾಮದ ತಂದೆ ಮತ್ತು ಮಕ್ಕಳ ನಡುವೆ ಜಗಳವಾಗಿ, ಮಕ್ಕಳ ವಿರುದ್ಧವೇ ಜೀವನಾಂಶಕ್ಕಾಗಿ ತಂದೆ ನ್ಯಾಯಾಲಯಕ್ಕೆ ಅಲೆಯುತ್ತಿದ್ದರು. ಲೋಕ ಅದಾಲತ್‌ನಲ್ಲಿ ತಂದೆ ಮತ್ತು ಮಕ್ಕಳ ಮನವೊಲಿಸಲಾಯಿತು. ಮಕ್ಕಳು ತಮ್ಮ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿದ್ದರಿಂದ ಪ್ರಕರಣವನ್ನು ಇತ್ಯರ್ಥಗೊಳಿಸಲಾಯಿತು.

ಇದಲ್ಲದೆ ಹಲವು ವರ್ಷಗಳಿಂದ ಬಾಕಿ ಇದ್ದ ನೂರಾರು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಲಾಯಿತು.

ಪ್ರಧಾನ ಜಿಲ್ಲಾ ಕೌಟುಂಬಿಕ ನ್ಯಾಯಾಧೀಶರಾದ ಸರಸ್ವತಿ ದೇವಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ನ್ಯಾಯಾಧೀಶರಾದ ಮಲಕಾರಿ ರಾಮಪ್ಪ ಒಡೆಯರ ಹಾಗೂ ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...