ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಜಾತ್ರೆಗಳು ಜನರಲ್ಲಿ ಭಕ್ತಿ, ವೈರಾಗ್ಯ, ಜ್ಞಾನದ ಜಾಗೃತಿ ಮೂಡಿಸುತ್ತವೆ. ಜನರು ಜಾತ್ರೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಉತ್ಸಾಹ ಹೆಚ್ಚಿಸಿಕೊಳ್ಳುತ್ತಾರೆ. ಕರಿಭಂಟನಾಳ ಗ್ರಾಮದ ಗುರು ಗಂಗಾಧರೇಶ್ವರ ಜಾತ್ರಾಮಹೋತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಕಾರ್ಯಕ್ರಮಗಳನ್ನು ಶ್ರೀಗಳು ಹಮ್ಮಿಕೊಳ್ಳುವ ಮೂಲಕ ಜಾತ್ರೆಯನ್ನು ಆಚರಿಸುತ್ತಿರುವುದು ಶ್ಲಾಘನೀಯ ಎಂದು ಬೆಂಗಳೂರಿನ ಸರ್ಪ ಭೂಷಣಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ತಾಲೂಕಿನ ಕರಿಭಂಟನಾಳ ಗ್ರಾಮದ ಆರಾಧ್ಯದೈವ ಗುರು ಗಂಗಾಧರೇಶ್ವರರ ಜಾತ್ರಾಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜನಜಾಗೃತಿ ಸಮಾವೇಶ ಹಾಗೂ ಆರೋಗ್ಯ ಮೇಳದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ತ್ರಿಕಾಲ ಜ್ಞಾನ ಸ್ವರೂಪಿ ಮಹಾತ್ಮರ ಜಾತ್ರೆಗಳು ಜನರಲ್ಲಿ ಚೇತನ ಶಕ್ತಿ ತರುತ್ತವೆ. ಆರೋಗ್ಯವಾದ ಶರೀರ ಇರಬೇಕಾದರೆ ನಮ್ಮಲ್ಲಿ ಅರಿವಿನ ಶಕ್ತಿ ಇರಬೇಕು. ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಯಾವ ದುರ್ಗುಣಗಳು ಮೈಗೂಡಲು ಸಾಧ್ಯವಿಲ್ಲ. ಇಂದ್ರಿಯ ನಿಗ್ರಹ ಬಹುಮುಖ್ಯವಾಗಿದ್ದು, ನಾಡಿನಲ್ಲಿ ಸುಭೀಕ್ಷೆ, ಶಾಂತಿ ನೆಲೆಸಲು ಜಾತ್ರೆಗಳು ನಡೆಯುತ್ತವೆ ಎಂದರು.ವಿಜಯಪುರದ ಸಂಗಮೇಶ ಆಸ್ಪತ್ರೆಯ ಡಾ.ಎಸ್.ಎಸ್.ಪಾಟೀಲ ಮಾತನಾಡಿ, ಆಧುನಿಕ ಯುಗದಲ್ಲಿ ಅನೇಕ ಹೊಸ ಕಾಯಿಲೆಗಳಿಂದಾಗಿ ಅನೇಕರು ಸಾವಿಗೀಡಾಗುತ್ತಿದ್ದಾರೆ. ಕೋವಿಡ್ ಹೆಮ್ಮಾರಿಯಿಂದಾಗಿ ಅನೇಕರು ತಮ್ಮವರನ್ನು ಕಳೆದುಕೊಂಡರು. ಚಿಕ್ಕ ವಯಸ್ಸಿನಲ್ಲಿಯೇ ಸಕ್ಕರೆ ಕಾಯಿಲೆ, ಹೃದಯಾಘಾತ, ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಯಿಂದ ಸಾವಿಗೀಡಾಗುತ್ತಿದ್ದಾರೆ. ಮಿತ ಆಹಾರ ಸೇವನೆ, ಧ್ಯಾನ-ಯೋಗ ಅಳವಡಿಸಿಕೊಂಡರೆ ಆರೋಗ್ಯಕರ ಜೀವನ ನಮ್ಮದಾಗಿಕೊಳ್ಳಬಹುದು. ಕಳೆದ ಏಳು ವರ್ಷದಿಂದ ಈ ಜಾತ್ರೆಯಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜನೆ ಮಾಡುತ್ತಾ ಬರಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿಯೂ ಈ ಗ್ರಾಮದ ಜಾತ್ರೆಯ ಸಂದರ್ಭದಲ್ಲಿ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದು, ಶಿಬಿರದ ಸದುಪಯೋಗವನ್ನು ಜನರು ಪಡೆದುಕೊಳ್ಳುವಂತೆ ಹೇಳಿದರು.ಬೀರಕಬ್ಬಿಯ ಮಲ್ಲಿಕಾರ್ಜುನ ಶಾಸ್ತ್ರೀಜಿ ಮಾತನಾಡಿ, ಬೆಲೆ ಕಟ್ಟಲಾಗದ ದೇಹವನ್ನು ಭಗವಂತ ನೀಡಿದ್ದಾನೆ. ಪ್ರತಿಯೊಬ್ಬರೂ ಭಗವಂತನ ನಾಮಸ್ಮರಣೆ ಮಾಡುವ ಮೂಲಕ ಉತ್ತಮ ಜೀವನ ತಮ್ಮದಾಗಿಸಿಕೊಳ್ಳಬೇಕು. ಬಸವಾದಿ ಶರಣರ ಸಂದೇಶಗಳನ್ನು ಅರಿತು ಸನ್ಮಾರ್ಗದಲ್ಲಿ ನಡೆಯಬೇಕೆಂದರು.
ಗುರು ಗಂಗಾಧರೇಶ್ವರ ಹಿರಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಗುರು ಗಂಗಾಧರೇಶ್ವರರು ದೇಶದ ಸ್ವಾತಂತ್ರ್ಯಹೋರಾಟದಲ್ಲಿ ಈ ಭಾಗದಲ್ಲಿ ಜನರನ್ನು ಸಿದ್ದಗೊಳಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಿದ್ದು ಇತಿಹಾಸ ಹೇಳುತ್ತದೆ. ಶ್ರೀಮಠವು ಆಧ್ಯಾತ್ಮದೊಂದಿಗೆ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ನಾವು ಜಾತ್ರೆಯಂಗವಾಗಿ ಪ್ರತಿ ವರ್ಷ ವಿವಿಧ ಜನಪರ ಕಾರ್ಯಗಳನ್ನು ನಡೆಸುತ್ತಿದ್ದು, ಜನರಿಗೆ ಉಪಯೋಗವಾಗುವಂತೆ ಜಾತ್ರೆಯ ಆಚರಣೆ ಮಾಡಲಾಗುತ್ತಿದೆ. ಬಸವನಬಾಗೇವಾಡಿ ಹಳೆ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಗುರು ಗಂಗಾಧರೇಶ್ವರರಿಂದ ಪ್ರತಿಷ್ಠಾಪಿಸಲಾಗಿದ್ದ ಶಕ್ತಿ ಶಿಲೆಯ ಸಂರಕ್ಷಣೆಯನ್ನು ಮಾಡಬೇಕಾದ ಅಗತ್ಯವಿದೆ ಎಂದ ಅವರು, ಶ್ರೀಮಠದ ಸದ್ಭಕ್ತರು ನಮಗೆ ಸಹಾಯ-ಸಹಕಾರ ನೀಡುತ್ತಿದ್ದಾರೆ ಎಂದರು.ಶಂಕರಯ್ಯ ಶಾಸೀಜಿ, ವಿಶ್ವನಾಥ ಮಠ, ಪ್ರವಚನಕಾರ ಶಂಕರಯ್ಯ ಶಾಸೀಜಿ, ಡಾ.ಶೈಲೇಶ ಕನ್ನೂರ, ದೇವೇಂದ್ರ ಗೋನಾಳ, ಮಹಾಂತೇಶ ಸಂಗಮ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ, ಡಾ.ಮಹಾಂತೇಶ ಹಿರೇಮಠ, ಡಾ.ರಮಾಕಾಂತ ಬಳಲೂಕರ, ಡಾ.ರಾಹುಲ ಬಿರಾದಾರ, ಡಾ.ಬಾಬುಗೌಡ ಬಿರಾದಾರ, ಡಾ.ಪ್ರಿಯಾಂಕ ಬಿರಾದಾರ, ಡಾ.ಮಲ್ಲಿಕಾರ್ಜುನ ಇತರರು ಇದ್ದರು. ಈರಯ್ಯ ಹಿರೇಮಠ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬಾಲ ಗಾಯಕಿ ಮಹನ್ಯ ಪಾಟೀಲ ಸಂಗೀತ ಕಾರ್ಯಕ್ರಮ ಜನರನ್ನು ಆಕರ್ಷಿಸಿತು.ಕೋಟ್...ತ್ರಿಕಾಲ ಜ್ಞಾನ ಸ್ವರೂಪಿ ಮಹಾತ್ಮರ ಜಾತ್ರೆಗಳು ಜನರಲ್ಲಿ ಚೇತನ ಶಕ್ತಿ ತರುತ್ತವೆ. ಆರೋಗ್ಯವಾದ ಶರೀರ ಇರಬೇಕಾದರೆ ನಮ್ಮಲ್ಲಿ ಅರಿವಿನ ಶಕ್ತಿ ಇರಬೇಕು. ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಯಾವ ದುರ್ಗುಣಗಳು ಮೈಗೂಡಲು ಸಾಧ್ಯವಿಲ್ಲ. ಇಂದ್ರಿಯ ನಿಗ್ರಹ ಬಹುಮುಖ್ಯವಾಗಿದ್ದು, ನಾಡಿನಲ್ಲಿ ಸುಭೀಕ್ಷೆ, ಶಾಂತಿ ನೆಲೆಸಲು ಜಾತ್ರೆಗಳು ನಡೆಯುತ್ತವೆ.ಮಲ್ಲಿಕಾರ್ಜುನ ಶ್ರೀ, ಸರ್ಪ ಭೂಷಣಮಠ ಬೆಂಗಳೂರು----