ಪೂರ್ವ ಮುಂಗಾರು ಮಳೆ ಅಬ್ಬರಕ್ಕೆ ಮತ್ತೆರಡು ಬಲಿ

KannadaprabhaNewsNetwork | Updated : May 16 2025, 07:40 AM IST
Follow Us

ಸಾರಾಂಶ

ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ದಾವಣಗೆರೆ, ಕಲಬುರಗಿ, ಚಿಕ್ಕಮಗಳೂರು, ರಾಮನಗರ, ರಾಯಚೂರು, ಬೆಳಗಾವಿ, ಮೈಸೂರು, ಹಾವೇರಿ, ಬೆಂಗಳೂರು ಸೇರಿ 9ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುರುವಾರವೂ ಮಳೆಯಾಗಿದೆ.

  ಬೆಂಗಳೂರು : ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ದಾವಣಗೆರೆ, ಕಲಬುರಗಿ, ಚಿಕ್ಕಮಗಳೂರು, ರಾಮನಗರ, ರಾಯಚೂರು, ಬೆಳಗಾವಿ, ಮೈಸೂರು, ಹಾವೇರಿ, ಬೆಂಗಳೂರು ಸೇರಿ 9ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುರುವಾರವೂ ಮಳೆಯಾಗಿದೆ. ಇದೇ ವೇಳೆ, ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ರೆವನೂರ ಹಾಗೂ ಯಡ್ರಾಮಿ ತಾಲೂಕಿನ ಪಡದಹಳ್ಳಿಯಲ್ಲಿ ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ.

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ರೆವನೂರ ಗ್ರಾಮದಲ್ಲಿ ಸಿಡಿಲು ಬಡಿದು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕೃಷಿ ಕಾರ್ಮಿಕ, ಶ್ರೀನಾಥ (26) ಎಂಬುವರು ಮೃತಪಟ್ಟಿದ್ದಾರೆ. ಯಡ್ರಾಮಿ ತಾಲೂಕಿನ ಪಡದಹಳ್ಳಿಯಲ್ಲಿ ಸಿದ್ದಪ್ಪ ಕರಣಪ್ಪ ಮಲ್ಲಾಬಾದ (31) ಎಂಬುವರು ಸಿಡಿಲಿಗೆ ಬಲಿಯಾಗಿದ್ದಾರೆ.

ಕೃಷಿ ಕೆಲಸಕ್ಕೆಂದು ಹೊಲಕ್ಕೆ ಹೋಗಿ ಬರುವ ಸಂದರ್ಭದಲ್ಲಿ ಅವರಿಗೆ ಸಿಡಿಲು ಬಡಿಯಿತು. ಅಫಜಲ್ಪುರ ತಾಲೂಕಿನಲ್ಲಿ ಮಳೆಯ ಅಬ್ಬರಕ್ಕೆ ಹೊಲ ಗದ್ದೆಗಳಲ್ಲಿ ಮಳೆ ನೀರು ನಿಂತು, ಬೆಳೆ ನಷ್ಟವಾಗಿದೆ. ಬಿರುಗಾಳಿಗೆ ಅನೇಕ ಕಡೆಗಳಲ್ಲಿ ಮರಗಿಡಗಳು ಉರುಳಿ ಬಿದ್ದು, ಅವಘಡಗಳು ಸಂಭವಿಸಿವೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಗುರುವಾರ ಬೆಳಗಿನಿಂದ ಮೋಡ ಕವಿದಿದ್ದು, ಮಧ್ಯಾಹ್ನದ ವೇಳೆಗೆ ಚಿಕ್ಕಮಗಳೂರು ನಗರದ ಕೆಲವೆಡೆ ಸಾಧಾರಣ ಮಳೆಯಾಯಿತು. ಬಲವಾಗಿ ಬೀಸಿದ ಗಾಳಿಗೆ ಇಲ್ಲಿನ ಎಐಟಿ ಕಾಲೇಜು ವೃತ್ತದಲ್ಲಿರುವ ಸಹ್ಯಾದ್ರಿ ನರ್ಸಿಂಗ್‌ ಕಾಲೇಜು ಕಟ್ಟಡದ ಕಬ್ಬಿಣದ ಸೀಟು ಹಾರಿ ವಿದ್ಯುತ್‌ ಕಂಬಕ್ಕೆ ಬಡಿದ ಪರಿಣಾಮ ಕಂಬ ತುಂಡಾಗಿ ಬಿದ್ದಿದೆ. ಈ ಭಾಗದಲ್ಲಿ ವಿದ್ಯುತ್‌ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ರಾಮನಗರ ಜಿಲ್ಲೆ ಮಾಗಡಿ ಪಟ್ಟಣದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಗೆ ಮರಗಳು ಧರೆಗುರುಳಿದ್ದು, ಹಲವು ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ.

ಹೊಸಪೇಟೆ ವೃತ್ತದ ಗಣಪತಿ ದೇವಸ್ಥಾನದ ಪಕ್ಕದಲ್ಲಿದ್ದ ಮರ ದೇವಸ್ಥಾನದ ಮೇಲೆ ಬಿದ್ದು ಪಕ್ಕ ನಿಂತಿದ್ದ ಕಾರಿಗೆ ಹಾನಿ ಉಂಟಾಗಿದೆ. ಜೋಗಿ ಕಟ್ಟೆ ಬಡಾವಣೆಯಲ್ಲಿ ನಾಲ್ಕು ಬೇವಿನ ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದಿವೆ. ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿದ್ದ ಅರಳಿಮರ ಬಿದ್ದಿದೆ. ಹೊಸಪೇಟೆಯ ಶಾದಿ ಮಹಲ್ ಕಾಂಪೌಂಡ್ ಗೋಡೆ ಕುಸಿದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ರಾಯಚೂರು ಜಿಲ್ಲೆಯಾದ್ಯಂತ ಸುರಿದ ಮಳೆಗೆ ಹಲವೆಡೆ ಮರಗಳು ಧರೆಗುರುಳಿವೆ. ಮಸ್ಕಿ ಅಂಚೆ ಕಚೇರಿ ಜಲಾವೃತಗೊಂಡಿದೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಬುಧವಾರ ರಾತ್ರಿ ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದು, ಬಾಣಂತಿ ಹಾಗೂ ಕುಟುಂಬ ರಾತ್ರಿಯಿಡೀ ಪರದಾಡುವಂತಾಯಿತು. ಬೆಂಗಳೂರಿನ ಕೆಲವೆಡೆ ಸಂಜೆಯ ವೇಳೆ ಮಳೆ ಸುರಿಯಿತು. ಇದೇ ವೇಳೆ, ಮೈಸೂರು ಹಾಗೂ ಹಾವೇರಿ ಜಿಲ್ಲೆಯ ಹಲವೆಡೆಯೂ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.