ಬೆಳ್ತಂಗಡಿ: ಬುಧವಾರ ಸಂಜೆ ೫ ಗಂಟೆ ಸುಮಾರಿಗೆ ಮತ್ತೆ ಗುಡುಗು, ಸಿಡಿಲು ಸಹಿತ ಸುಮಾರು ಅರ್ಧ ತಾಸಿಗೂ ಅಧಿಕ ಬಾರಿ ಮಳೆಯಾಗಿದೆ. ಇದರಿಂದ ಉಜಿರೆ ಗ್ರಾಮದ ಮಾಚಾರು ಗುಂಡಿಕಂಡ ಮಣಿಕ್ಕೆ ಎಂಬಲ್ಲಿ ಬಾಬು ಮುಗೇರ ಎಂಬವರ ಮನೆಗೆ ಸಿಡಿಲು ಬಡಿದು ಮೀಟರ್ ಬೋರ್ಡ್, ಗೋಡೆ ಸಹಿತ, ಶೀಟ್ ಪುಡುಪುಡಿಯಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್, ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ಗ್ರಾ.ಪಂ. ಸದಸ್ಯ ಗುರುಪ್ರಸಾದ್ ಭೇಟಿ ನೀಡಿದರು.
ಕೊಯ್ಯೂರು ಗ್ರಾಮದ ಮೈಂದಕೊಡಿ ಲೋಕಯ್ಯ ಗೌಡರ ಮನೆಯ ಮುಂಭಾಗದಲ್ಲಿನ ತೆಂಗಿನ ಮರಕ್ಕೆ ಸಿಡಿಲು ಬಿದ್ದು ಬೆಂಕಿ ಹತ್ತಿಕೊಂಡ ಘಟನೆ ನಡೆಯಿತು.ಬೆಳ್ತಂಗಡಿ, ನಡ, ಮಂಜೊಟ್ಟಿ, ಗುರುವಾಯನಕೆರೆ ಸಹಿತ ಗೇರುಕಟ್ಟೆ, ಕಳಿಯ ಇತರೆಡೆ ಮಳೆಯಾಗಿದ್ದು, ಗುರುವಾಯನಕೆರೆ ಕೆಲವೆಡೆ ಆಲಿಕಲ್ಲು ಮಳೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಚರಂಡಿ ಕಾರ್ಯ ಅಪೂರ್ಣಗೊಂಡ ಪರಿಣಾಮ ಚರ್ಚ್ ರಸ್ತೆಯಲ್ಲಿ ಮಳೆ ನೀರು ರಸ್ತೆಯಲ್ಲಿ ನಿಂತು ಪಕ್ಕದ ಅಂಗಡಿ ಮುಂಗಟ್ಟುಗಳ ಸುತ್ತ ನೀರು ನಿಂತಿತ್ತು. ಗುರುವಾಯನಕೆರೆಯ ಶಕ್ತಿನಗರದಲ್ಲಿ ಹಾಕಿದ್ದ ಖಾಸಗಿ ಕಾಲೇಜೊಂದರ ಬೃಹತ್ ಹೋರ್ಡಿಂಗ್ ರಸ್ತೆಗೆ ಅಡ್ಡಲಾಗಿ ಉರುಳಿದೆ. ಅದೃಷ್ಟವಶಾತ್ ಇದರಿಂದ ವಾಹನಗಳಿಗೆ ತೊಂದರೆಯುಂಟಾಗಲಿಲ್ಲ. ಬೆಳ್ತಂಗಡಿ ಸುತ್ತ ಮುತ್ತ ಗುಡುಗು ಸಹಿತ ಭಾರಿ ಮಳೆಯಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ದ.ಕ.ದ ವಿವಿಧೆಡೆ ಮುಂದುವರಿದ ಮಳೆಕನ್ನಡಪ್ರಭ ವಾರ್ತೆ ಮಂಗಳೂರುದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕೊಕ್ಕಡ, ಬೆಳ್ತಂಗಡಿ, ಕಡಬ ಸೇರಿದಂತೆ ಹಲವಡೆ ಬುಧವಾರವೂ ಮಳೆ ಸುರಿದಿದೆ. ಹಗಲು ಹೊತ್ತಿನಲ್ಲಿ ಬಿಸಿಲಿನ ವಾತಾವರಣ ಇದ್ದರೂ ಸಂಜೆ ವೇಳೆ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.
ಜಿಲ್ಲೆಯಲ್ಲಿ ಬುಧವಾರ ಸರಾಸರಿ 33.4 ಡಿಗ್ರಿ ಸೆ. ಗರಿಷ್ಠ, 25.1 ಡಿಗ್ರಿ ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿದೆ.ಗುರುವಾರವೂ ದ.ಕ. ಜಿಲ್ಲೆಯ ವಿವಿಧೆಡೆ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮುಂಗಾರು ಅಂಡಮಾನ್ ಹಾಗೂ ಕೇರಳಕ್ಕೆ ಅವಧಿಗೆ ಮುನ್ನವೇ ಆಗಮಿಸುವ ನಿರೀಕ್ಷೆ ಇದ್ದರೂ, ಆರಂಭಿಕ ದುರ್ಬಲತೆ ಇದ್ದರೆ ರಾಜ್ಯಕ್ಕೆ ಮುಂಗಾರು ಪ್ರವೇಶ ತಡವಾಗುವ ಸಾಧ್ಯತೆ ಅಂದಾಜಿಸಲಾಗಿದೆ.ತುಂಬೆ ನೀರಿನ ಮಟ್ಟ ಮತ್ತಷ್ಟು ಇಳಿಕೆ:ಮಂಗಳೂರಿಗೆ ನೀರು ಪೂರೈಕೆಯಾಗುವ ತುಂಬೆ ಅಣೆಕಟ್ಟಿನಲ್ಲಿ ಬುಧವಾರ 3.60 ಮೀ.ಗೆ ನೀರಿನ ಮಟ್ಟ ಇಳಿದಿದೆ. ಡ್ಯಾಂನಲ್ಲಿ ಸಂಗ್ರಹವಾಗಿರುವ ನೀರು ಮುಂದಿನ 20 ದಿನಕ್ಕೆ ಮಾತ್ರ ಬರಲಿದೆ. ನಗರದಲ್ಲಿ ಈಗ ನೀರಿನ ರೇಶನಿಂಗ್ ಇರುವುದರಿಂದ ನೀರು ಪೂರೈಕೆಯಾಗದ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ವಿತರಣೆ ಮಾಡಲಾಗುತ್ತಿದೆ.