- ಕೋಡಿ ಬಿದ್ದ ನೀರಿನಿಂದ ತರಕಾರಿ ಬೆಳೆಗಳಿಗೆ ಹಾನಿ । ಮಲೆನಾಡಿನಲ್ಲಿ ಅಡಕೆ ಕೊಯ್ಲಿಗೆ ಅಡ್ಡಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಗುಡುಗು ಸಹಿತ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಸೋಮವಾರವೂ ಮುಂದುವರಿದು, ಬಯಲುಸೀಮೆ ಸೇರಿದಂತೆ ಮಲೆನಾಡಿನಲ್ಲಿ ಅಪಾರ ಹಾನಿ ಉಂಟು ಮಾಡುವ ನಿಟ್ಟಿನಲ್ಲಿ ಸಾಗುತ್ತಿದೆ.
ಪ್ರತಿ ದಿನ ಮಧ್ಯಾಹ್ನದ ನಂತರ ಆರಂಭವಾಗುವ ಮಳೆ ಮರು ದಿನ ಬೆಳಗಿನ ಜಾವದವರೆಗೆ ಧಾರಾಕಾರವಾಗಿ ಒಂದೇ ಸಮನೆ ಸುರಿಯುತ್ತಿದೆ. ಇಡೀ ಜಿಲ್ಲೆಯಾದ್ಯಂತ ಇದೇ ಚಿತ್ರಣ ಇದ್ದು, ತರೀಕೆರೆ, ಕಡೂರು ಹಾಗೂ ಅಜ್ಜಂಪುರ ತಾಲೂಕು ಗಳಲ್ಲಿನ ಹಲವು ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ.ಕಡೂರು ತಾಲೂಕಿನ ಸಿಂಗಟಗೆರೆ ಹೋಬಳಿಯ ಎಸ್. ಮಾದಾಪುರ ಕೆರೆ ಭಾನುವಾರ ಬಿದ್ದ ಭಾರೀ ಮಳೆಗೆ ಕೋಡಿ ಬಿದ್ದು ನೀರು ಹರಿದಿದೆ. ಸದಾ ಬರಗಾಲಕ್ಕೆ ತುತ್ತಾಗುವ ಈ ಪ್ರದೇಶದ ರೈತರಲ್ಲಿ ಹರ್ಷ ಮೂಡಿದೆ. ಅಜ್ಜಂಪುರ ತಾಲೂಕಿನಲ್ಲಿ ಮಳೆ ಯಿಂದಾಗಿ ಈರುಳ್ಳಿ ಬೆಳೆಗೆ ಅಪಾರ ಹಾನಿಯಾಗಿ ಕೆಲವು ರೈತರು ಹೊಲದಲ್ಲೇ ಫಸಲು ಬಿಟ್ಟು, ಬೇಸಾಯ ಮಾಡಿ ರಾಗಿ ಬಿತ್ತನೆ ಮಾಡುತ್ತಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಬಂಡಿಹಳ್ಳಿ ಗ್ರಾಮದ ಕಳೆದ ಮೂರ್‍ನಾಲ್ಕು ದಿನಗಳಿಂದ ಸುರಿದ ಅತಿಯಾದ ಮಳೆಯಿಂದ ಅಕ್ಕಪಕ್ಕದ ಕೆರೆಗಳು ಕೋಡಿಬಿದ್ದು ರಾತ್ರೋರಾತ್ರಿ ಬಂಡಿಹಳ್ಳಿ ಗ್ರಾಮದ ಸುಮಾರು ಹತ್ತಾರು ಎಕರೆ ಕೃಷಿ ಭೂಮಿ ನೀರಲ್ಲಿ ಮುಳುಗಡೆಗೊಂಡಿದೆ.ಸೋಮವಾರ ಬೆಳಿಗ್ಗೆ ಜೋಳ ಬೆಳೆಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ರೈತರೋರ್ವರು ಅಳಿದುಳಿದಿರುವ ಬೆಳೆಗಳನ್ನು ರಕ್ಷಿಸಿಕೊಳ್ಳುತ್ತಿದ್ದರು. ಅಲ್ಲದೇ ಹೂ ಕೋಸು, ಅಡಕೆ, ಬಾಳೆ, ಜೋಳ ಬೆಳೆಗಳ ಮಧ್ಯೆ ನೀರು ನಿಂತು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಸ್ಥಳೀಯ ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಅಡಕೆ ಕೊಯ್ಲು ಆರಂಭವಾಗಬೇಕಾಗಿತ್ತು. ಆದರೆ, ನಿರಂತರ ಮಳೆಯಿಂದ ಬೆಳೆಗಾರರು ಮರದಿಂದ ಅಡಕೆ ಕೆಡವುದನ್ನು ಸ್ವಲ್ಪ ದಿನದ ಮಟ್ಟಿಗೆ ಮುಂದೂಡುತ್ತಿದ್ದಾರೆ. ಇದೇ ರೀತಿಯಲ್ಲಿ ಹೆಚ್ಚಿನ ದಿನವನ್ನು ಮುಂದೂಡಿದರೆ ಅಡಕೆ ಗುಣಮಟ್ಟದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಮಳೆ ಅಡಕೆ ಬೆಳೆಯ ಮೇಲೆ ದುಷ್ಪರಿಣಾಮ ಬೀರಿದೆ.20 ಕೆಸಿಕೆಎಂ 3 ಕಡೂರು ತಾಲೂಕಿನ ಎಸ್. ಮಾದಾಪುರ ಕೆರೆ ಭಾನುವಾರ ಬಿದ್ದ ಭಾರೀ ಮಳೆಗೆ ಕೋಡಿ ಬಿದ್ದು ನೀರು ಹರಿಯುತ್ತಿರುವುದು.
-- 20 ಕೆಸಿಕೆಎಂ 4ಚಿಕ್ಕಮಗಳೂರು ತಾಲೂಕಿನ ಬಂಡಿಹಳ್ಳಿ ಬಳಿ ಹೂವಿನ ಕೋಸ್ ಬೆಳೆಯಲ್ಲಿ ಮಳೆಯ ನೀರು ನಿಂತಿರುವುದು.