ಹಾವೇರಿ ಜಿಲ್ಲೆಯಲ್ಲಿ ಗುಡುಗು ಸಹಿತ ಸುರಿದ ಮಳೆ

KannadaprabhaNewsNetwork | Published : Mar 21, 2025 12:36 AM

ಸಾರಾಂಶ

ಹಾವೇರಿ, ಹಾನಗಲ್ಲ ತಾಲೂಕಿನ ಆಡೂರು ಭಾಗದಲ್ಲಿ ಸಂಜೆ 5 ಗಂಟೆ ಸುಮಾರಿಗೆ ಜೋರಾದ ಗಾಳಿ, ಗುಡುಗು ಸರಿತವಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಜಿಟಿ ಜಿಟಿ ಮಳೆ ಸುರಿಯಿತು.

ಹಾವೇರಿ: ಜಿಲ್ಲೆಯ ವಿವಿಧೆಡೆ ಗುರುವಾರ ಗುಡುಗು, ಮಿಂಚು, ಗಾಳಿ ಸಹಿತವಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ಸೆಕೆಯಿಂದ ಕಂಗೆಟ್ಟಿದ್ದ ಜನತೆಗೆ ಸ್ವಲ್ಪ ತಂಪೆರೆದಿದೆ.

ಹಾವೇರಿ, ಹಾನಗಲ್ಲ ಹಾಗೂ ಸವಣೂರು ತಾಲೂಕಿನ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಉಳಿದ ತಾಲೂಕುಗಳಲ್ಲಿ ಗಾಳಿ, ಗುಡುಗಿನ ಆರ್ಭಟದಲ್ಲೇ ಮುಗಿದಿದೆ.

ಹಾವೇರಿ, ಹಾನಗಲ್ಲ ತಾಲೂಕಿನ ಆಡೂರು ಭಾಗದಲ್ಲಿ ಸಂಜೆ 5 ಗಂಟೆ ಸುಮಾರಿಗೆ ಜೋರಾದ ಗಾಳಿ, ಗುಡುಗು ಸರಿತವಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಜಿಟಿ ಜಿಟಿ ಮಳೆ ಸುರಿಯಿತು. ಗಾಳಿ ರಭಸಕ್ಕೆ ಹಾನಗಲ್ಲ ತಾಲೂಕು ಹೇರೂರು ಗ್ರಾಮದ ಚಂದ್ರಪ್ಪ ನಿಂಬನಗೌಡ್ರ ಎಂಬವರಿಗೆ ಸೇರಿದ ಮನೆ ಮೇಲೆ ತೆಂಗಿನ ಮರ ಉರುಳಿ ಬಿದ್ದು ಚಾವಣಿ ಕುಸಿದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಆಗಿಲ್ಲ.

ಕಳೆದ ಕೆಲವು ದಿನಗಳಿಂದ ಬಿಸಿಲು, ಸೆಕೆಯ ತೀವ್ರತೆಯಿಂದ ಕಂಗೆಟ್ಟಿದ್ದ ಜನತೆಗೆ ಮಳೆಯಿಂದ ಸ್ವಲ್ಪ ತಂಪಾಗಿದೆ. ಬುಧವಾರ ಕೂಡ ನಗರದಲ್ಲಿ ನಾಲ್ಕು ಹನಿ ಬಿದ್ದಿತ್ತಾದರೂ ಗುರುವಾರ ಸ್ವಲ್ಪ ಜೋರಾಗಿ ಮಳೆಯಾಗಿರುವುದರಿಂದ ಸಮಾಧಾನ ತಂದಿದೆ.ಬ್ಯಾಡಗಿ ಮಾರುಕಟ್ಟೆಗೆ 2.45 ಲಕ್ಷ ಚೀಲ ಮೆಣಸಿಕಾಯಿ

ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರ 2.45 ಲಕ್ಷ ಮೆಣಸಿಕಾಯಿ ಚೀಲಗಳು ಆವಕಾಗಿದ್ದು, ದರದಲ್ಲಿ ಮಾತ್ರ ಯಾವುದೇ ಗಮನಾರ್ಹ ವ್ಯತ್ಯಾಸ ಕಂಡುಬಂದಿಲ್ಲ.ಸತತವಾಗಿ ಕಳೆದ 5 ವಾರ ಕೂಡ ಒಟ್ಟು ಆವಕಿನಲ್ಲಿ 2.5 ಲಕ್ಷ ದಾಟಿದ್ದು, ಒಂದು ವಾರ 3 ಲಕ್ಷವನ್ನು ಸಮೀಪಿಸಿತ್ತು. ಹೀಗಾಗಿ ಇಲ್ಲಿಯವರೆಗೂ ಸುಮಾರು 22 ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲ ಅವಕವಾಗಿರುವುದಾಗಿ ಮಾರುಕಟ್ಟೆ ಮೂಲಗಳು ದೃಢಪಡಿಸಿವೆ.ಗುರುವಾರದ ಮಾರುಕಟ್ಟೆ ದರ:

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ಕಡ್ಡಿತಳಿ ಮೆಣಸಿನಕಾಯಿ ಕನಿಷ್ಠ ₹2109, ಗರಿಷ್ಠ ₹26809, ಡಬ್ಬಿತಳಿ ಕನಿಷ್ಠ ₹2600, ಗರಿಷ್ಠ ₹27299, ಗುಂಟೂರು ಕನಿಷ್ಠ ₹809, ಗರಿಷ್ಠ ₹14009ಕ್ಕೆ ಮಾರಾಟವಾಗಿವೆ.ವಿದ್ಯುತ್ ಸ್ಪರ್ಶದಿಂದ ಯುವಕ ಸಾವು

ಹಿರೇಕೆರೂರು: ಪಟ್ಟಣದಲ್ಲಿ ವಿದ್ಯುತ್ ಸ್ಪರ್ಶದಿಂದ ಯುವಕನೊಬ್ಬ ಸಾವಿಗೀಡಾದ ಘಟನೆ ಬುಧವಾರ ನಡೆದಿದೆ.ಪಟ್ಟಣದ ಬಿ.ಜಿ. ಬಣಕಾರ ಬಡಾವಣೆಯ ನಿವಾಸಿ ಸಂತೋಷ ಶೇಖಪ್ಪ ದಾಸನಕೊಪ್ಪ(29) ಮೃತಪಟ್ಟ ವ್ಯಕ್ತಿ.ಇವರು ಪಂಪ್ ಆಪರೇಟರ್ ಕೆಲಸ ನಿರ್ವಹಿಸುತ್ತಿದ್ದು, ಬಿ.ಜಿ. ಬಣಕಾರ ಬಡಾವಣೆಯಲ್ಲಿರುವ ಪಟ್ಟಣ ಪಂಚಾಯಿತಿಯ ಜಲ ಶುದ್ಧೀಕರಣ ಘಟಕದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ನೀರಿನ ಟ್ಯಾಂಕ್‌ನಲ್ಲಿ ನಿಂತಿದ್ದ ನೀರನ್ನು ವಿದ್ಯುತ್‌ ಮೋಟಾರ್‌ನಲ್ಲಿ ಹೊರಹಾಕುತ್ತಿದ್ದರು. ಆಗ ಅವರಿಗೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article