ಹುಬ್ಬಳ್ಳಿ: ಸಾಹಿತ್ಯ ಸಮ್ಮೇಳನ ಎನ್ನುವುದು ಸಂಭ್ರಮದ ಕಾಲ. ಕೇವಲ ಆಹ್ವಾನ ಬಂದಿಲ್ಲ ಎಂಬ ಕಾರಣಕ್ಕೆ ಈ ಸಂಭ್ರಮದ ಭಾಗಿಗಳು ನಾವಾಗದಿದ್ದರೆ ಕನ್ನಡ ಭಾಷೆ ಉಳಿಯುವುದು ಕಷ್ಟ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.
ಕೋಟ್ಯಂತರ ಖರ್ಚು ಮಾಡಿ ಸಮ್ಮೇಳನ ಆಯೋಜಿಸಲಾಗುತ್ತಿದೆ. ಇವು ವ್ಯರ್ಥವಾಗಬಾರದು. ಇಂತಹ ಕಾರ್ಯಕ್ರಮಗಳ ಮೂಲಕ ಕನ್ನಡಕ್ಕೆ ಇರುವ ವಿವೇಕ ಎಚ್ಚರಿಸುವ ಕಾರ್ಯವಾಗಬೇಕಿದೆ. ಕಾರಣಾಂತರಗಳಿಂದ ನಮ್ಮ ದೈನಂದಿನ ಜೀವನದಲ್ಲಿ, ರಾಜಕೀಯದ ಗಲಾಟೆ, ಚುನಾವಣೆ, ಭ್ರಷ್ಟಾಚಾರ, ಜಾತೀಯತೆ ಸೇರಿದಂತೆ ನೂರಾರು ಶಾಪಗಳ ನಡುವೆ ಕನ್ನಡದ ವಿವೇಕ ಕಳೆದು ಹೋಗದ ಎಚ್ಚರ ಉಳಿಸಿಕೊಳ್ಳಲು ಸಾಧ್ಯವಾದಲ್ಲಿ ಕನ್ನಡ ಉಳಿವಿಗಾಗಿ ಶ್ರಮಿಸಿದ ಮಹನೀಯರ ಶ್ರಮ ಸಾರ್ಥಕವಾಗುತ್ತದೆ ಎಂದರು.
ಕನ್ನಡಕ್ಕೆ ಬಡಿದ ಜಾಢ್ಯ:ಕನ್ನಡ ನಿರೀಕ್ಷಿತ ವೇಗದಲ್ಲಿ ಬೆಳೆಯುತ್ತಿಲ್ಲ. ಕನ್ನಡ ಶಾಲೆಗಳು ಮುಚ್ಚುತ್ತಿವೆ. ಸಮ್ಮೇಳನದಲ್ಲಿ ರಾಜಕೀಯೇತರವಾಗಿ ಚರ್ಚಿಸುವ ಕಾರ್ಯವಾಗಬೇಕಿದೆ. ಈ ವಿಷಯದಲ್ಲಿ ಎಂದಿಗೂ ರಾಜಕೀಯ ತರದೇ ಎಲ್ಲ ರಾಜಕೀಯ ಪಕ್ಷಗಳು ಬಂದು ಕನ್ನಡದ ಕೆಲಸ ಮಾಡುವಂತಹ ವಾತಾವರಣ ನಿರ್ಮಾಣವಾದರೆ ಮಾತ್ರ ಕನ್ನಡದ ಉಳಿವು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಕಸಾಪ ಕನ್ನಡದ ಉಳಿವಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ಕಸಾಪ ತಾಲೂಕಾಧ್ಯಕ್ಷೆ ವಿದ್ಯಾ ವಂಟಮುರಿ ಸ್ವಾಗತಿಸಿದರು. ಡಾ. ಬಿ.ಎಸ್. ಮಾಳವಾಡ ನಿರೂಪಿಸಿದರು. ಆರ್.ಎಂ. ಗೋಗೇರಿ ವಂದಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಇಲ್ಲಿನ ದೇಶಪಾಂಡೆ ನಗರದ ಕಾಮಾಕ್ಷಿ ದೇವಾಲಯದಿಂದ ಸವಾಯಿ ಗಂಧರ್ವ ಸಭಾಂಗಣದ ವರೆಗೆ ವಿವಿಧ ಕಲಾ ತಂಡಗಳೊಂದಿಗೆ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ನಡೆಯಿತು. ಕಾರ್ಯಕ್ರಮದ ಬಳಿಕ ವಿವಿಧ ಗೋಷ್ಠಿಗಳು, ಸರ್ವಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮ ನೆರವೇರಿತು.