ಗೋಪಾಲ್ ಯಡಗೆರೆ
ಹಾವೇರಿ-ಗದಗ ಲೋಕಸಭಾ ಚುನಾವಣಾ ಟಿಕೆಟ್ ಅನ್ನು ತಮ್ಮ ಪುತ್ರ ಕೆ.ಇ. ಕಾಂತೇಶ್ ಅವರಿಗೆ ಪಡೆಯಲು ತೀವ್ರ ಯತ್ನ ನಡೆಸುತ್ತಿರುವ ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ಕಟ್ಟಾಳು, ಪ್ರಖರ ಹಿಂದುತ್ವವಾದಿ ಕೆ.ಎಸ್. ಈಶ್ವರಪ್ಪ ಅವರು ಒಂದು ಪಕ್ಷ ಟಿಕೆಟ್ ನೀಡದೇ ಇದ್ದರೆ ಮುಂದೇನು ಎಂಬ ಪ್ರಶ್ನೆ ಎದುರಿಗಿಟ್ಟುಕೊಂಡು ತಮ್ಮ ಬೆಂಬಲಿಗರ ಜೊತೆ ಗಂಭೀರ ಮಾತುಕತೆ ನಡೆಸುತ್ತಿದ್ದಾರೆ. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಅನಿವಾರ್ಯದ ಹೆಜ್ಜೆಗೆ ಮುಂದಾಗುತ್ತಿದ್ದಾರೆಯೇ? ಎಂತಹ ಸಂದರ್ಭದಲ್ಲಿಯೂ ಪಕ್ಷ ಹೇಳಿದ ಮಾತು ತಪ್ಪದ ಕಟ್ಟಾಳು ಎಂಬ ಹಣೆಪಟ್ಟಿ ಹಚ್ಚಿಕೊಂಡ ಈಶ್ವರಪ್ಪ ತಮ್ಮ ರಾಜಕೀಯ ಜೀವನದ ಕೊನೆಯ ಹಂತದಲ್ಲಿ ಪಕ್ಷದ ವಿರುದ್ಧ ತೊಡೆ ತಟ್ಟಲಿದ್ದಾರೆಯೇ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ತೀವ್ರವಾಗಿ ನಡೆಯುತ್ತಿದೆ.
ಪಕ್ಷ ಮತ್ತು ಸಂಘಟನೆ ಮಾತುಗಳನ್ನು ಸದಾ ಶಿರಸಾವಹಿಸಿ ನೆರವೇರಿಸುತ್ತಿದ್ದವರು ಈಶ್ವರಪ್ಪ. ಇದೀಗ ಆ ಸ್ಥಿತಿಯಲ್ಲಿ ಇಲ್ಲ. ತಮ್ಮ ಮತ್ತು ಪುತ್ರನ ರಾಜಕೀಯ ಜೀವನಕ್ಕೆ ಉದ್ದೇಶಪೂರ್ವಕವಾಗಿ ಕೆಲವರು ಅಡ್ಡಿಪಡಿಸುತ್ತಿದ್ದಾರೆ ಎಂಬ ಮನಃಸ್ಥಿತಿಗೆ ಬಂದಂತೆ ಕಾಣುತ್ತಿದ್ದಾರೆ. ತಮ್ಮ ಕೊನೆಯ ನಿರ್ಧಾರ ಕೈಗೊಳ್ಳುವ ಅಂತಿಮ ಕ್ಷಣದತ್ತ ಮುಖ ಮಾಡಿದಂತೆ ಕಾಣುತ್ತಿದ್ದಾರೆ. ತಮ್ಮ ಪುತ್ರನ ಟಿಕೆಟ್ ಕುರಿತು ಖಚಿತ ಭರವಸೆ ದೊರಕದೇ ಇದ್ದಲ್ಲಿ ತಮ್ಮ ದಾರಿ ತಮಗೆ ಎಂಬ ನಿಲುವಿಗೆ ಬರಲು ಸಿದ್ಧತೆ ನಡೆಸಿದಂತೆ ಕಾಣುತ್ತಿದೆ. ಈ ಸಂಬಂಧ ತಮ್ಮ ಆಪ್ತರು, ಕಾರ್ಯಕರ್ತರು, ಎರಡನೇ ಹಂತದ ನಾಯಕರು ಎಲ್ಲರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.ಮಾಡು ಇಲ್ಲವೇ ಮಡಿ:
ಈಗ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ಟಿಕೆಟ್ ಪಡೆಯುವುದು ಕಷ್ಟ ಎಂಬುದು ಅವರಿಗೂ ಅರಿವಾಗುತ್ತಿದೆ. ಒಂದೆಡೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇನ್ನೊಂದೆಡೆ ಮಾಜಿ ಸಚಿವ ಬಿ.ಸಿ. ಪಾಟೀಲ್ ತಮಗೆ ಟಿಕೆಟ್ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ಇವರ ನಡುವೆ ಜಗದೀಶ್ ಶೆಟ್ಟರ್ ಹೆಸರು ಕೂಡ ಹಾವೇರಿ ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಂತೇಶ್ ಅವರ ಹೆಸರು ಪರಿಗಣನೆಗೆ ಬರುವುದೇ ಎಂಬುದೇ ಈಶ್ವರಪ್ಪ ಆತಂಕಕ್ಕೆ ಕಾರಣ.
ಊಹಾಪೋಹದ ಮಾತುಗಳಿಗೆ ನಾನು ಉತ್ತರಿಸುವುದಿಲ್ಲ. ಈಗಲೂ ಪಕ್ಷ ಟಿಕೆಟ್ ನೀಡುತ್ತದೆ ಎಂಬುದು ನನ್ನ ನಂಬಿಕೆ. ಟಿಕೆಟ್ ಸಿಗದಿದ್ದರೆ ಮುಂದೇನು ಎಂಬುದು ಆ ಸಂದರ್ಭದ ಪ್ರಶ್ನೆ ಮಾತ್ರ.
- - - --ಫೋಟೋ: ಕೆ.ಎಸ್. ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ