ಮೆಟ್ರೋ ನಿಲ್ದಾಣದಲ್ಲಿ ಟಿಕೆಟ್‌ ಮಷಿನ್‌ ವ್ಯವಸ್ಥೆ

KannadaprabhaNewsNetwork |  
Published : Apr 29, 2024, 01:36 AM ISTUpdated : Apr 29, 2024, 09:22 AM IST
Q R | Kannada Prabha

ಸಾರಾಂಶ

ಮೆಟ್ರೋ ಪ್ರಯಾಣಿಕರು ತ್ವರಿತವಾಗಿ ಕ್ಯೂಆರ್‌ ಪೇಪರ್‌ ಟಿಕೆಟ್‌ ಖರೀದಿ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ, ಪ್ರಾಯೋಗಿಕವಾಗಿ ಎರಡು ಮೆಟ್ರೋ ನಿಲ್ದಾಣದಲ್ಲಿ ಕ್ಯೂಆರ್‌ ಟಿಕೆಟ್‌ ಮಷಿನ್‌ ಅಳವಡಿಸಿದೆ.

  ಬೆಂಗಳೂರು; ಮೆಟ್ರೋ ಪ್ರಯಾಣಿಕರು ತ್ವರಿತವಾಗಿ ಕ್ಯೂಆರ್‌ ಪೇಪರ್‌ ಟಿಕೆಟ್‌ ಖರೀದಿ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ, ಪ್ರಾಯೋಗಿಕವಾಗಿ ಎರಡು ಮೆಟ್ರೋ ನಿಲ್ದಾಣದಲ್ಲಿ ಕ್ಯೂಆರ್‌ ಟಿಕೆಟ್‌ ಮಷಿನ್‌ ಅಳವಡಿಸಿದೆ.

ನೇರಳೆ ಮಾರ್ಗದ ಎಂ.ಜಿ.ರಸ್ತೆ, ಕಬ್ಬನ್‌ ಪಾರ್ಕ್‌ ಮೆಟ್ರೋ ನಿಲ್ದಾಣದ ಕಾನ್‌ಕೋರ್ಸ್‌ ಹಂತದಲ್ಲಿ ಒಟ್ಟಾರೆ 14 ಟಿಕೆಟ್‌ ಯಂತ್ರ ಇಡಲಾಗಿದೆ. ಪ್ರಯಾಣಿಕರು ತಮಗೆ ಬೇಕಾದ ನಿಲ್ದಾಣ ಆಯ್ಕೆ ಮಾಡಿಕೊಂಡು ಯಾವುದೇ ಪೇಮೆಂಟ್‌ ಆ್ಯಪ್‌ ಮೂಲಕ ದರ ಪಾವತಿಸಿ ಟಿಕೆಟ್‌ ಪಡೆಯಬಹುದು. ಇಲ್ಲಿ ಕೆಲವೇ ಕ್ಷಣದಲ್ಲಿ ಟಿಕೆಟ್‌ ಪಡೆಯಬಹುದು. ಜೊತೆಗೆ ವಾಟ್ಸಾಪ್‌, ಕ್ಯೂಆರ್ ಕೋಡ್ ಟಿಕೆಟ್‌ನಲ್ಲಿ ಪ್ರಯಾಣಿಕರ ಸಂಖ್ಯೆ, ಪೇಮೆಂಟ್‌ ಆ್ಯಪ್‌ಗಳು ಸೇರಿ ಕೆಲ ನಿಬಂಧನೆಗಳು ಇರುವುದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಇಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಗ್ರಾಹಕರು ನೇರವಾಗಿ ಟಿಕೆಟ್‌ ಪಡೆಯಬಹುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

‘ಕನ್ನಡಪ್ರಭ’ ಜೊತೆ ಮಾತನಾಡಿದ ಬಿಎಂಆರ್‌ಸಿಲ್‌ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್‌, ಸದ್ಯಕ್ಕೆ ಐಪಿಎಲ್‌, ಬೇಸಿಗೆ ರಜೆ ಸೇರಿ ಹಲವು ಕಾರ್ಯಕ್ರಮಗಳು ನಡೆಯುತ್ತಿರುವ ಕಾರಣ ಎಂ.ಜಿ.ರಸ್ತೆ, ಕಬ್ಬನ್‌ ಪಾರ್ಕ್‌ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ಹೀಗಾಗಿ ಪ್ರಾಯೋಗಿಕ ಹಂತದಲ್ಲಿ ಯಂತ್ರಗಳನ್ನು ಇಲ್ಲಿ ಅಳವಡಿಸಿದ್ದೇವೆ. ಗ್ರಾಹಕರ ಪ್ರತಿಕ್ರಿಯೆ, ಯಂತ್ರದ ಕಾರ್ಯಕ್ಷಮತೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಎಲ್ಲ ನಿಲ್ದಾಣಗಳಲ್ಲಿ ಅಳವಡಿಕೆ ಮಾಡಲಾಗುವುದು ಎಂದು ತಿಳಿಸಿದರು.

ಸದ್ಯ ಪ್ರತಿದಿನ ಒಂದು ಯಂತ್ರದಿಂದ 80-100 ಜನ ಟಿಕೆಟ್‌ ಖರೀದಿಸುತ್ತಾರೆ. ಮೊಬೈಲ್‌ ಕ್ಯೂಆರ್‌ ಕೋಡ್‌ ಟಿಕೆಟ್‌ ಹೆಚ್ಚು ಜನಪ್ರಿಯಗೊಂಡಿದ್ದು, ಸದ್ಯ ವಾರಾಂತ್ಯಕ್ಕೆ 1 ಲಕ್ಷಕ್ಕೂ ಹೆಚ್ಚಿನ ಜನರು ಖರೀದಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪೇಪರ್‌ ಕ್ಯೂಆರ್‌ ಟಿಕೆಟ್‌ ಕೂಡ ಪ್ರಯಾಣಿಕರಿಗೆ ಹೆಚ್ಚು ಇಷ್ಟವಾಗಲಿದೆ ಎಂದು ಹೇಳಿದರು.

ಹೀಗೆ ಖರೀದಿ ಮಾಡಿ:  ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಟಿಕೆಟ್‌ ಖರೀದಿ ಮಾಡಲು ಆಯ್ಕೆ ನೀಡಲಾಗಿದೆ. ನಿಲ್ದಾಣ ಅಥವಾ ನಿಲ್ದಾಣದ ಕೋಡನ್ನು ಕೇಳುತ್ತದೆ. ಆಯ್ಕೆ ಮಾಡಿದ ಬಳಿಕ ಪ್ರಯಾಣಿಕರ ಸಂಖ್ಯೆಯ ಆಯ್ಕೆ ತೋರಿಸುತ್ತದೆ. ಬಳಿಕ ಪಾವತಿಸಬೇಕಾದ ಮೊತ್ತ ಹಾಗೂ ಸ್ಕ್ಯಾನ್‌ ಮಾಡಬೇಕಾದ ಕ್ಯೂ ಆರ್ ಕೋಡ್‌ ಬಿತ್ತರವಾಗಲಿದೆ. ಸ್ಕ್ಯಾನ್‌ ಮಾಡಿ ಪೇಮೆಂಟ್‌ ಮಾಡಿದ ಬಳಿಕ ಕ್ಯೂಆರ್‌ ಪೇಪರ್ ಟಿಕೆಟ್‌ ಸಿಗುತ್ತದೆ. ಯಂತ್ರದಿಂದ ಟಿಕೆಟ್‌ ಪಡೆದವರಿಗೆ ಶೇ.5ರಷ್ಟು ರಿಯಾಯಿತಿ ಕೂಡ ಸಿಗುತ್ತದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.

PREV

Recommended Stories

ದಸರಾಕ್ಕೆ ದೀಪ್ತಾ ಭಾಸ್ತಿಗೆ ಆಹ್ವಾನವಿಲ್ಲಕೆ? : ಬಿವೈವಿ
ಕನಕಪುರದಲ್ಲಿ ವೈದ್ಯ ಕಾಲೇಜಿಗೆ ಭೂಮಿ ಖರೀದಿಗೆ ಹಣ ಮಂಜೂರು