ಹುಲಿ ದಾಳಿ: 15 ದಿನದಲ್ಲಿ ಪರಿಹಾರ ವಿತರಣೆ ಭರವಸೆ

KannadaprabhaNewsNetwork |  
Published : Nov 19, 2026, 02:45 AM IST
ಭರವಸೆ | Kannada Prabha

ಸಾರಾಂಶ

ನರಿಯಂದಡ ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, 15 ದಿನಗಳೊಳಗೆ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ನಾಪೋಕ್ಲು : ನರಿಯಂದಡ ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, 15 ದಿನಗಳೊಳಗೆ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.ಚೆಯ್ಯಂಡಾಣೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಿಯಂದಡ ಗ್ರಾಮದ ಮಕ್ಕಿಮನೆ ಜಯಶಂಕರ್ ಅವರಿಗೆ ಸೇರಿದ ಹಾಲು ಕರೆಯುವ ಹಸುವನ್ನು ಹುಲಿ ದಾಳಿಗೆ ಬಲಿಯಾದ ಬಗ್ಗೆ ಬೆಳಗ್ಗೆಯಿಂದಲೇ ಮಾಹಿತಿ ನೀಡಿದ್ದರೂ, ರಾತ್ರಿಯಾದರೂ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಮೃತ ಹಸುವಿನ ಕಳೇಬರವನ್ನು ವಿರಾಜಪೇಟೆಯ ಅರಣ್ಯ ಇಲಾಖೆ ಕಚೇರಿಗೆ ಕೊಂಡೊಯ್ದು ಅಹೋರಾತ್ರಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದರು.ಗ್ರಾಮಸ್ಥರ ಪಟ್ಟು ಹಿಡಿತದ ಮೇರೆಗೆ ಎಸಿಎಫ್ ತಹಸೀನ್ ಭಾನು ಹಾಗೂ ಆರ್‌ಎಫ್‌ಒ ಶಿವರಾಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳದಲ್ಲೇ ಪರಿಹಾರ ನೀಡಬೇಕು, ಡಿಎಫ್‌ಒ ಸ್ಥಳಕ್ಕೆ ಬರಬೇಕು ಹಾಗೂ ಬೇಜವಾಬ್ದಾರಿ ಉತ್ತರ ನೀಡಿದ ಅಧಿಕಾರಿ ಕ್ಷಮೆಯಾಚಿಸಬೇಕು ಎಂದು ಗ್ರಾಮಸ್ಥರಾದ ಪೊಕ್ಕುಳಂಡ ಧನೋಜ್ , ತೋಟಂಬೈಲು ಅನಂತ್ ಕುಮಾರ್ ಹಾಗೂ ಮುಕ್ಕಮನೆ ಸುಧೀರ್ ಸೇರಿದಂತೆ ಗ್ರಾಮಸ್ಥರು ಒತ್ತಾಯಿಸಿದರು. ಬಳಿಕ ಅಧಿಕಾರಿಗಳು ಹಸುವಿನ ಮಾಲೀಕರಿಂದ ಅಗತ್ಯ ದಾಖಲೆಗಳನ್ನು ಸ್ಥಳದಲ್ಲೇ ಪಡೆದುಕೊಂಡು, 15 ದಿನಗಳಲ್ಲಿ ಪರಿಹಾರ ವಿತರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಡಲಾಯಿತು.

ಅರಣ್ಯ ಇಲಾಖೆಯ ಮುಂದಿನ ಕ್ರಮಗಳು:

ಹುಲಿಯ ಚಲನವಲನ ಪತ್ತೆಹಚ್ಚಲು ದಾಳಿ ನಡೆದ ಸ್ಥಳದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ನಿರಂತರ ನಿಗಾ ವಹಿಸಲು ಇಲಾಖೆ ನಿರ್ಧರಿಸಿದೆ. ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಲು ಡಿ. 2ರಂದು ಚೆಯ್ಯಂಡಾಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ವಿಶೇಷ ಕುಂದುಕೊರತೆ ಸಭೆ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಮತ್ತು ಜಾನುವಾರುಗಳಿಗೆ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಡಿಆರ್‌ಎಫ್‌ಒ ಶ್ರೀನಿವಾಸ್, ಇಟಿಎಫ್ ಡಿಆರ್‌ಎಫ್‌ಒ ಪ್ರಶಾಂತ್, ಗಾರ್ಡ್ ನಂದೀಶ್, ಕ್ಯಾಂಪ್ ಸಿಬ್ಬಂದಿ, ಆರ್‌ಆರ್‌ಟಿ, ಇಟಿಎಫ್ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಮುಂಜಾಗ್ರತಾ ಕ್ರಮವಾಗಿ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿ ಬಿಗಿ ಬಂದೋಬಸ್ತು ಏರ್ಪಡಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಪಿಆರ್ ಸಿದ್ಧಪಡಿಸಲು ತ್ವರಿತ ಅನುಮೋದನೆ ನೀಡಿ
ಆರ್‌ಎಸ್‌ಎಸ್‌ ಆಕರ್ಷಕ ಪಥ ಸಂಚಲನ