ದುಬಾರೆ ಶಿಬಿರದಿಂದ ಶ್ರೀರಾಮ, ಗೋಪಿ ಸಾಕಾನೆಗಳ ಆಗಮನ
ಕನ್ನಡಪ್ರಭ ವಾರ್ತೆ ಮಡಿಕೇರಿದಕ್ಷಿಣ ಕೊಡಗಿನ ಅರಣ್ಯದಂಚಿನ ಗ್ರಾಮಗಳಲ್ಲಿ ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಹಾಗೂ ಜನರಿಗೂ ಆತಂಕ ಸೃಷ್ಟಿಸಿರುವ ಹುಲಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಶನಿವಾರದಿಂದ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರಾಲು ಗ್ರಾಮದಲ್ಲಿ ಆರಂಭವಾಗಲಿದೆ.ದಕ್ಷಿಣ ಕೊಡಗಿನ ಅರಣ್ಯ ದಂಚಿನ ಗ್ರಾಮಗಳು ಹಾಗೂ ನೆರೆಯ ಗ್ರಾಮಗಳಲ್ಲಿ ಹುಲಿ ನಿರಂತರವಾಗಿ ಜಾನುವಾರುಗಳನ್ನು ಬೇಟೆಯಾಡುತ್ತಿದ್ದು, ಮಾನವನ ಮೇಲೆಯೂ ದಾಳಿ ಮಾಡುವ ಆತಂಕ ಜನರಲ್ಲಿದೆ.
ಶ್ರೀಮಂಗಲ, ಟಿ. ಶೆಟ್ಟಿಗೇರಿ, ಈಸ್ಟ್ ಮತ್ತು ವೆಸ್ಟ್ ನೆಮ್ಮಲೆ, ಕುರ್ಚಿ, ಬೀರುಗ, ಬಾಡಗರಕೇರಿ, ಪರಕಟಕೇರಿ, ತೆರಾಲು ಗ್ರಾಮಗಲ್ಲಿ ಹುಲಿಯ ಉಪಟಳ ಹೆಚ್ಚಾಗಿದೆ. ಆದ್ದರಿಂದ ದುಬಾರೆ ಸಾಕಾನೆ ಶಿಬಿರದಿಂದ ಎರಡು ಸಾಕಾನೆಗಳನ್ನು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ.ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯ ಗಂಭೀರತೆ ಮನವರಿಕೆ ಮಾಡಿದ ಬೆನ್ನಲ್ಲೇ ಹುಲಿ ಕಾರ್ಯಾಚರಣೆಗೆ ಅನುಮತಿ ನೀಡಲಾಗಿದ್ದು, ಕಾರ್ಯಾಚರಣೆಯಲ್ಲಿ ಶಾರ್ಪ್ ಶೂಟರ್‌ಗಳು, ಅರವಳಿಕೆ ತಜ್ಞರು ಹಾಗೂ ಪಶುವೈದ್ಯಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಈಗಾಗಲೇ ದುಬಾರೆ ಸಾಕಾನೆ ಶಿಬಿರದಿಂದ ಶ್ರೀರಾಮ ಹಾಗೂ ಗೋಪಿ ಎಂಬ ಎರಡು ಸಾಕಾನೆಗಳನ್ನು ಕಾರ್ಯಾಚರಣೆಗೆ ಕರೆತರಲಾಗಿದೆ. ಅಗತ್ಯವಾದರೆ ನಾಳೆ ಕಾರ್ಯಾಚರಣೆಗೆ ಹೆಚ್ಚಿನ ಸಾಕಾನೆಗಳನ್ನು ಬಳಸಿಕೊಳ್ಳಲಾಗುವುದು ಎಂದು ಹೇಳಿದರು.ಶನಿವಾರದಿಂದ ಆರಂಭವಾಗುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಚರಣೆ ತಂಡ (ಆರ್‌ಆರ್‌ಎಫ್), ಕಾಡಾನೆ ಕಾರ್ಯಾಚರಣೆ ತಂಡ (ಇ.ಎಲ್.ಎಫ್) ಹಾಗೂ ಈ ವ್ಯಾಪ್ತಿಯ ವಿವಿಧ ಅರಣ್ಯ ಇಲಾಖೆಯ ವಿಭಾಗದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಹುಲಿ ಹೆಜ್ಜೆ ಗುರುತು ಪತ್ತೆ ಹಚ್ಚಿ ನಡೆಯಲಿರುವ ಕಾರ್ಯಾಚರಣೆಯಲ್ಲಿ ಹುಲಿಯ ಇರುವಿಕೆ ಪತ್ತೆಹಚ್ಚಿ ಕಾರ್ಯಾಚರಣೆ ನಡೆಸಲಾಗುವುದು. ತಾಜಾ ಹೆಜ್ಜೆ ಗುರುತು, ಹುಲಿ ತೆರಲಿರುವ ಜಾಡು ಹಿಡಿದು ಕಾರ್ಯಾಚಾರಣೆ ಆರಂಭವಾಗಲಿದೆ. ಈ ಹಿಂದೆ ಶ್ರೀಮಂಗಲ ವ್ಯಾಪ್ತಿಯ ನೆಮ್ಮಲೆ, ಬಾಳೆಲೆ ವ್ಯಾಪ್ತಿಯ ದೇವನೂರಿನಲ್ಲಿ ಹುಲಿ ಸೆರೆ ಕಾರ್ಯಾಚರಣೆ ವೇಳೆ ತೊಂದರೆಯಾಗಿ ಹುಲಿಯು ಅರಣ್ಯಕ್ಕೆ ವಾಪಸ್ ತೆರಳಿತ್ತು. ಈ ಬಾರಿ ಕಾರ್ಯಾಚರಣೆಯಲ್ಲಿ ಹುಲಿ ಪ್ರತ್ಯೇಕ್ಷವಾದಲ್ಲಿ ಹುಲಿಯನ್ನು ಅರವಳಿಕೆ ನೀಡಿ ಸೆರೆ ಹಿಡಿದು ಅದನ್ನು ಪುನರ್ವಸತಿ ಕೇಂದ್ರಕ್ಕೆ ರವಾನಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂಕೇತ್ ಪೂವಯ್ಯ ತಿಳಿಸಿದರು.ಈ ಸಂದರ್ಭ ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಟಿ. ಶೆಟ್ಟಿಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ತೀತಿರ ಪ್ರಭು, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಮಾವುತರು, ಕಾವಾಡಿಗರು ಹಾಜರಿದ್ದರಿರು.