ಕನ್ನಡಪ್ರಭ ವಾರ್ತೆ ಮಂಡ್ಯ
ಈ ಚಳವಳಿಗೆ ಯಾರ ಬೆಂಬಲವೂ ಬೇಕಿಲ್ಲ. ಯಾರು ಎಲ್ಲಿ ಬೇಕಾದರೂ ಈಡುಗಾಯಿ ಒಡೆಯಬಹುದು. ನಾನು ಅಧಿಕೃತವಾಗಿ ಬೆಂಗಳೂರಿನಲ್ಲಿ ಈಡುಗಾಯಿ ಒಡೆದು ಆನಂತರ ಮಂಡ್ಯದಲ್ಲಿ ನಡೆಯುವ ಚಳವಳಿಯಿಲ್ಲಿ ಭಾಗವಹಿಸುತ್ತೇನೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ಏಕೀಕರಣಗೊಂಡು ಇಷ್ಟು ವರ್ಷವಾದರೂ ಕನ್ನಡಿಗರಿಗೆ ಉದ್ಯೋಗ ನೀಡಲು ಒಂದು ನೀತಿಯನ್ನು ರೂಪಿಸಲು ಯಾವುದೇ ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆ ನಿಷೇಧಿಸುವ ತಾಕತ್ತಿಲ್ಲ. ಸರೋಜಿನಿ ಮಹಿಷಿ ವರದಿ ಮಾಡುವ ಧೈರ್ಯವಿಲ್ಲ. ಪರಭಾಷಿಗರ ದಬ್ಬಾಳಿಕೆ ಹೆಚ್ಚಾಗಿದೆ. ಪರಭಾಷಾ ಚಿತ್ರಗಳನ್ನು ನಿಷೇಧಿಸಬೇಕಿದೆ. ಇವೆಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬೆಳಗಾವಿಯಲ್ಲಿ ಅಧಿವೇಶನ ನಡೆದರೂ ಪ್ರಯೋಜನ ಆಗಿಲ್ಲ. ಎಂಇಎಸ್ ರಾಜ್ಯದ ಗಡಿನಾಡಿಗೆ ಮಾರಕ. ಎಂಇಎಸ್ ನಿಷೇಧಕ್ಕೆ ಹಲವು ವರ್ಷಗಳಿಂದ ಕನ್ನಡಿಗರು, ಕನ್ನಡ ಪರ ಸಂಘಟನೆಗಳು ಹೋರಾಟ ಮಾಡುತ್ತಿವೆ. ಕನ್ನಡ ಭಾಷೆ, ನಾಡು ಉಳಿವಿನ ಬಗ್ಗೆ ಸಂಘಟನೆಗಳಿಗಿರುವ ಬದ್ಧತೆ ಸರ್ಕಾರಗಳಿಗಿಲ್ಲ ಎಂದು ಗುಡುಗಿದರು.
ನಾನು ಇವತ್ತಿನವರೆಗೂ ಜಾತಿ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಅದನ್ನು ಸರ್ಕಾರ ಏಕೆ ಮಾಡಿದೆಯೋ ಗೊತ್ತಿಲ್ಲ. ರಾಜ್ಯ ಉದಯವಾಗಿದ್ದು ಭಾಷೆ ಮೇಲೆಯೇ ವಿನಃ ಜಾತಿಯಿಂದಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
ಬಸವಣ್ಣ, ಕನಕದಾಸರ ಸಂದೇಶಗಳನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ಪಕ್ಷ ಅಲ್ಲ, ಎಲ್ಲಾ ಪಕ್ಷಗಳು ಜಾತಿಯ ಹಿಂದೆ ಬಿದ್ದಿವೆ. ಮುಂದೆ ರಾಜ್ಯದಲ್ಲಿ ಏನಾಗುತ್ತೋ ಗೊತ್ತಿಲ್ಲ. ಮುಂದೆ ಬರುವವರು ಯಾವ ಯಾವ ಆಧಾರದಲ್ಲಿ ಅಧಿಕಾರಕ್ಕೆ ಬರುತ್ತಾರೋ ಗೊತ್ತಿಲ್ಲ ಎಂದು ಆತಂಕದಿಂದ ನುಡಿದರು.ಸದನಗಳ ಗಾಂಭೀರ್ಯ ಹಾಳು
ಶಾಸನಸಭೆಗಳಿಗೆ ಉತ್ತಮರು, ಅರ್ಹರು ಆರಿಸಿ ಬರುತ್ತಿಲ್ಲ. ಎಲ್ಲರೂ ದುಡ್ಡಿನ ಮೇಲೆ ಅಧಿಕಾರಕ್ಕೆ ಬರುವವರೇ ಆಗಿದ್ದಾರೆ. ವಿಧಾನ ಪರಿಷತ್ತು ವ್ಯಾಪಾರೀಕರಣ ಆಗುತ್ತಿದೆ. ಉದ್ಯಮಿಗಳು, ರಿಯಲ್ ಎಸ್ಟೇಟ್‌ನವರು, ಚಿನ್ನಾಭರಣ ಅಂಗಡಿ ಮಾಲೀಕರು ಸೇರಿದಂತೆ ಹಣವಂತರು ಪ್ರವೇಶಿಸುತ್ತಿದ್ದಾರೆ. ಬುದ್ಧಿವಂತರು, ಸಾಹಿತಿಗಳು, ತಜ್ಞರಿಗೆ ಅವಕಾಶವೇ ಇಲ್ಲ. ಪ್ರಸ್ತುತ ಪರಿಷತಿನ ನಾಲ್ಕು ಸ್ಥಾನಗಳಿಗೆ ನಾಮಕರಣ ಆಗಬೇಕಿದೆ. ಅದನ್ನೂ ಹಂಚಿಕೆ ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಿದರು.