ಬೆಂಗಳೂರು : ನ್ಯಾಯಾಲಯದ ಆದೇಶ ಉಲ್ಲಂಘಿಸಿದ ನೂತನ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಯನ್ನು ಸರ್ಕಾರ ಪಡೆಯಬೇಕು ಎಂದು ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ಆದ ಬಳಿಕ ವಿಶೇಷ ಸಂಗತಿ ಹೊರ ಬಂದಿದೆ. ನಾವು ಹಿಂದೆ ನಾಗೇಂದ್ರ ವಿರುದ್ಧ ಹೋರಾಟ ಮಾಡಿದ್ದೆವು. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರು. ಲೂಟಿ ಮಾಡಿ ಜೈಲಿಗೆ ಹೋಗಿಬಂದವರು. ರಾಜ್ಯವನ್ನು ಬಿಟ್ಟು ಹೋಗಬಾರದು ಅಂತ ನಾಗೇಂದ್ರ ಅವರಿಗೆ ನ್ಯಾಯಾಲಯ ನಿಬಂಧನೆ ಹಾಕಿದೆ.
ಪ್ರಕರಣ ಇನ್ನೂ ಬಾಕಿ ಇದೆ
ಆದರೂ ನಾಗೇಂದ್ರ ಅವರು ನ್ಯಾಯಾಲಯದ ಆದೇಶ ಧಿಕ್ಕರಿಸಿ ದೆಹಲಿಗೆ ಹೋಗಿ ಬಂದಿದ್ದಾರೆ. ಪ್ರಕರಣ ಇನ್ನೂ ಬಾಕಿ ಇದೆ. ಇದು ನ್ಯಾಯಾಂಗ ನಿಂದನೆ ಆಗಬಹುದು. ಇಲ್ಲದಿದ್ದರೆ ಅವರ ನ್ಯಾಯಾಂಗದ ನಿಂದನೆಗೆ ರಾಜ್ಯ ಸರ್ಕಾರ ಸಹ ಕಾರಣ ಆಗಲಿದೆ ಎಂದು ಹೇಳಿದರು.
ನಮ್ಮಲ್ಲಿ ಮಾತ್ರ
ಕೋರ್ಟ್ ಷರತ್ತು ಮೀರಿ ನಾಗೇಂದ್ರ ದೆಹಲಿಗೆ ತೆರಳಿರುವ ಬಗ್ಗೆ ಇ.ಡಿ. ಮಾಹಿತಿ ಕಲೆ ಹಾಕುತ್ತಿರುವ ಬಗ್ಗೆ ಕನ್ನಡಪ್ರಭ ಮಾತ್ರ ಆ.8ರ ಭಾನುವಾರ ವರದಿ ಮಾಡಿತ್ತು.
