ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯ ಮಲೆಮಹದೇಶ್ವರ ವನ್ಯಜೀವಿ ಧಾಮದ ಹೂಗ್ಯಂ ವಲಯದ ಮೀಣ್ಯಂ ಗಸ್ತಿನ ಗಾಜನೂರು ಬಳಿ ಹುಲಿಗಳ ಮಾರಣಹೋಮ ಅರಣ್ಯ ಕಾಯ್ದೆಯ ಘೋರ ಹಕ್ಕು ಚ್ಯುತಿಯಾಗಿದ್ದು ಈ ಪ್ರಕರಣವನ್ನು ಹಾಲಿ ನ್ಯಾಯಾಧೀಶರನ್ನೊಳಗೊಂಡ ಸಮಿತಿಯಿಂದ ತನಿಖೆ ಮಾಡಿಸಬೇಕು ಎಂದು ನಿವೃತ್ತ ಐಎಫ್‌ಎಸ್ ಅಧಿಕಾರಿ ಡಾ.ಆರ್. ರಾಜು ಆಗ್ರಹಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹುಲಿಗಳ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಂದ ತನಿಖೆಯಾದರೆ ಯಾವುದೇ ಕಾರಣಕ್ಕೂ ಸತ್ಯ ಹೊರಬರದೇ ಪ್ರಕರಣಕ್ಕೆ ಸಂಬಂಧಪಟ್ಟವರು ಖುಲಾಸೆಯಾಗುತ್ತಾರೆ ಎಂದರು.ಈ ಪ್ರಕರಣದಲ್ಲಿ ೧೯೭೨ರ ಅರಣ್ಯ ಕಾಯ್ದೆ ಹಾಗೂ ವನ್ಯಜೀವಿ ಸಂರಕ್ಷಣೆಯ ಕಾಯ್ದೆಯ ಸ್ಪಷ್ಟ ಉಲ್ಲಂಘಣೆಯಾಗಿದೆ, ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕರ್ತವ್ಯ ಲೋಪ ಪ್ರಕರಣದಲ್ಲಿ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.ಹುಲಿಗಳ ಶವಸಂಸ್ಕಾರದಲ್ಲಿ ಭಾಗವಹಿಸಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮೇಲ್ನೋಟಕ್ಕೆ ವಿಷಪ್ರಾಶನ ಮಾಡಿ ಹುಲಿಗಳನ್ನು ಹತ್ಯೆ ಮಾಡಿರುವುದು ಎಂದು ಗೊತ್ತಾಗಿದ್ದರು, ಡಿಸಿಎಫ್, ಎಸಿಎಫ್, ಆರ್‌ಎಫ್‌ಓ ಮೇಲೆ ಕ್ರಮಕೈಗೊಳ್ಳವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದರು.ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಯನ್ನು ಬಿಟ್ಟರೆ ಬೇರೆ ಯಾವ ಕೆಲಸವು ಅರಣ್ಯಾಧಿಕಾರಿಗಳಿಗೆ ಇರುವುದಿಲ್ಲ. ಈ ಪ್ರಕರಣದಲ್ಲಿ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕರ್ತವ್ಯ ಲೋಪವಾಗಿದೆ, ಇದೊಂದು ಘೋರ ದುರಂತ, ಈ ಜಿಲ್ಲೆಯ ಸಂಸ್ಕ್ರತಿ ಮತ್ತು ಸಂಸ್ಕಾರಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಎಂದರು.ಒಬ್ಬ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗೆ ಕಾಡಿನೊಳಗೆ ದಿನಂಪ್ರತಿ ೨ ರಿಂದ ೩ ಕಿ.ಮೀ. ಗಸ್ತು ಮಾಡಿ ಅಲ್ಲಿನ ಮಾಹಿತಿಗಳನ್ನು ದಿನಂಪ್ರತಿ ಬರೆಯಬೇಕು, ಅದ್ಯಾವುದೂ ಇಲ್ಲಿ ಆಗಿಲ್ಲ ಗಸ್ತು ಮಾಡಿದ್ದರೆ ಹುಲಿಗಳು ಸಾಯುತ್ತಿರಲಿಲ್ಲ ಎಂದರು.ವೈವಿದ್ಯಮಯ ಕಾಡುಗಳನ್ನುಳ್ಳ ೨ ಹುಲಿ ಸಂರಕ್ಷಿತ ವಲಯ ಹಾಗೂ ಎರಡು ವನ್ಯಜೀವಿ ವಲಯಗಳನ್ನೊಳಗೊಂಡ ರಾಜ್ಯದಲ್ಲೇ ಹೆಚ್ಚು ಹುಲಿಗಳನ್ನು ಹೊಂದಿರುವ ಈ ಜಿಲ್ಲೆಯಲ್ಲಿ ಇಂತಹ ಘೋರ ಕೃತ್ಯ ನಡೆಯಬಾರದಿತ್ತು, ವಾಚರ್‌ನಿಂದ ಹಿಡಿದು ಅಧಿಕಾರಿಯವರೆಗೂ ಕರ್ತವ್ಯ ಲೋಪವಾಗಿದ್ದು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮವಾಗಬೇಕು ಎಂದರು.ತನಿಖೆ ವಿಳಂಬವಾಗಬಾರದು, ತಪ್ಪುಗಳು ಕಣ್ಣಿಗೆ ರಾಚುವಂತೆ ಕಾಣುತ್ತಿವೆ, ವಿಷ ಹಾಕಿದವರು ಸಿಕ್ಕಿದ್ದಾರೆ, ಮೂರು ದಿನದಲ್ಲಿ ವರದಿ ಕೊಡಬಹುದು, ವಿಳಂಬವಾದಷ್ಟು ಅಪರಾಧಿಗಳು ತಪ್ಪಿಸಿಕೊಳ್ಳುತ್ತಾರೆ ಎಂದರು.ಸಾಮಾಜಿಕ ಆಡಿಟ್ ಆಗಬೇಕು. ಅರಣ್ಯ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಕಾಡಿನೊಳಗೆ ಜಾನುವಾರು ಬಿಡುವುದು, ಕಾಡಿನೊಳಗೆ ವಿಷಕಾರಿ ವಸ್ತು ತೆಗೆದುಕೊಂಡು ಹೋಗುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದರು.ಅರಣ್ಯ ಸಂರಕ್ಷಣೆಯಲ್ಲಿ ಸ್ಥಳೀಯರನ್ನೊಳಗೊಂಡ ಕಾವಲು ಪಡೆ ರಚಿಸಬೇಕು, ಕಾಡಂಚಿನ ಗ್ರಾಮಗಳ ಜನರಿಗೆ ಅರಣ್ಯ ಕಾಯ್ದೆ ಮತ್ತು ವನ್ಯಜೀವಿ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಬೇಕು, ಕಾಡು ಪ್ರಾಣಿಗಳಿಂದ ಅನಾಹುತವಾದರೆ ಬೇಗ ಪರಿಹಾರ ಒದಗಿಸಬೇಕು ಎಂದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಸಾಕಷ್ಟು ಹಣ ವ್ಯಯ ಮಾಡುತ್ತಿದೆ, ಗುತ್ತಿಗೆ ಆಧಾರದ ಮೇಲೆ ನೇಮಕವಾಗಿರುವ ನೌಕರರಿಗೆ ಸಕಾಲದಲ್ಲಿ ವೇತನ ಪಾವತಿ ಮಾಡಿ ಎಲ್ಲರಿಗೂ ಮೂಲಭೂತ ಸೌಕರ್ಯ ಒದಗಿಸಬೇಕು, ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದುಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದರು.ಪತ್ರಿಕಾಗೋಷ್ಠಿಯಲ್ಲಿ ರಾಮಸಮುದ್ರ ಬಸವರಾಜು, ಸಿ.ಎಂ.ನರಸಿಂಹಮೂರ್ತಿ, ಚಾ.ರಂ.ಶ್ರೀನಿವಾಸಗೌಡ, ಚನ್ನಕೇಶವಮೂರ್ತಿ, ತೊರವಳ್ಳಿ ಕುಮಾರ್, ಮಂಜು ಇದ್ದರು.