ಉರುಳಿಗೆ ಹುಲಿ ಬಲಿ, ದಂತರಹಿತ ಆನೆ ಕಳೇಬರ

KannadaprabhaNewsNetwork |  
Published : Oct 15, 2026, 01:30 AM IST
ಕನ್ನಡಪ್ರಭ ವಾರ್ತೆ | Kannada Prabha

ಸಾರಾಂಶ

ಮದ್ದೂರು ವಲಯದಲ್ಲಿ ಕಳ್ಳಬೇಟೆ ಶಂಕೆ ದಟ್ಟವಾಗಿದೆ. ಮತ್ತೊಂದೆಡೆ ಕರಡಿಕಲ್ಲು ಗುಡ್ಡದಲ್ಲಿ ಆನೆಯ ಮೂಳೆಗಳು ಮಾತ್ರ ಪತ್ತೆಯಾಗಿವೆ. ಎರಡೂ ದಂತಗಳು ನಾಪತ್ತೆಯಾಗಿವೆ.ಕಳ್ಳಬೇಟೆಗಾರರು ಆನೆಯನ್ನು ಕೊಂದು ದಂತ ಕೊಂಡೊಯ್ದರಾ ಅಥವಾ ಸಹಜ ಸಾವಿನ ನಂತರ ದಂತ ಕಳ್ಳತನವಾಗಿದೆಯಾ ಎಂಬ ಅನುಮಾನ ದಟ್ಟವಾಗಿದೆ.ಆನೆಯ ಮೂಳೆಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸಾವಿನ ನಿಖರ ಕಾರಣ ಗೊತ್ತಾಗಲಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತೆ ಬಯಲಿಗೆ ಬಂದಿದ್ದು, ಮದ್ದೂರು ವಲಯದ ಹೊಂಗಹಳ್ಳಿ ಬೀಟ್‌ನಲ್ಲಿ ಕಳ್ಳ ಬೇಟೆಗಾರರು ಹಾಕಿದ್ದ ಉರುಳಿಗೆ ಸಿಲುಕಿ ಎರಡು ವರ್ಷದ ಹುಲಿ ದಾರುಣವಾಗಿ ಪ್ರಾಣ ಕಳೆದುಕೊಂಡಿದೆ.

ಅಲ್ಲದೆ ಮದ್ದೂರು ವಲಯದ ಕರಡಿ ಕಲ್ಲು ಗುಡ್ಡದಲ್ಲಿ ಆನೆಯ ಕಳೇಬರ ಪತ್ತೆಯಾಗಿದ್ದು, ಎರಡೂ ದಂತಗಳು ನಾಪತ್ತೆಯಾಗಿವೆ. ಈ ಘಟನೆಗಳು ನಡೆದರೂ ಅರಣ್ಯ ಇಲಾಖೆ ಹುಲಿ ಸಾವಿನ ಘಟನೆ ಹಾಗೂ ಕಾಡಾನೆ ಆನೆ ದಂತ ಘಟನೆಯನ್ನು ವಾರ ಕಳೆದರೂ ಮಾಹಿತಿ ಮುಚ್ಚಿಟ್ಟಿರುವುದು ಅನುಮಾನಕ್ಕೆ ಎಡೆಮಾಡಿದೆ.

ಉರುಳಿಗೆ ಹುಲಿ ಸಾವು:

ಮದ್ದೂರು ವನ್ಯಜೀವಿ ವಲಯದ ಹೊಂಗಹಳ್ಳಿ ಬೀಟ್ ಅರಣ್ಯದ ಒಳಭಾಗದಲ್ಲಿ ಕಾಡು ಪ್ರಾಣಿಗಳ ಬೇಟೆಗೆ ಹಾಕಿದ್ದ ಕಬ್ಬಿಣದ ಉರುಳಿಗೆ ಸುಮಾರು ೨ ವರ್ಷದ ಗಂಡು ಹುಲಿ ಸಿಲುಕಿ,ಉರುಳಿನಿಂದ ಬಿಡಿಸಿಕೊಳ್ಳಲಾಗದೆ ಒದ್ದಾಡಿ, ಒದ್ದಾಡಿ ಜೀವ ಕಳೆದುಕೊಂಡಿದೆ.

ನಂತರ ಪಶು ವೈದ್ಯರನ್ನು ಕರೆಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.ಹುಲಿಯ ಉಗುರು ಹಾಗೂ ಹಲ್ಲುಗಳು ಸುರಕ್ಷಿತವಾಗಿವೆ ಎಂದು ಇಲಾಖೆ ಹೇಳಿದೆ.

ಆನೆ ದಂತ ಮಾಯ:

ಮದ್ದೂರು ವಲಯದಲ್ಲಿ ಕಳ್ಳಬೇಟೆ ಶಂಕೆ ದಟ್ಟವಾಗಿದೆ. ಮತ್ತೊಂದೆಡೆ ಕರಡಿಕಲ್ಲು ಗುಡ್ಡದಲ್ಲಿ ಆನೆಯ ಮೂಳೆಗಳು ಮಾತ್ರ ಪತ್ತೆಯಾಗಿವೆ. ಎರಡೂ ದಂತಗಳು ನಾಪತ್ತೆಯಾಗಿವೆ.ಕಳ್ಳಬೇಟೆಗಾರರು ಆನೆಯನ್ನು ಕೊಂದು ದಂತ ಕೊಂಡೊಯ್ದರಾ ಅಥವಾ ಸಹಜ ಸಾವಿನ ನಂತರ ದಂತ ಕಳ್ಳತನವಾಗಿದೆಯಾ ಎಂಬ ಅನುಮಾನ ದಟ್ಟವಾಗಿದೆ.ಆನೆಯ ಮೂಳೆಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸಾವಿನ ನಿಖರ ಕಾರಣ ಗೊತ್ತಾಗಲಿದೆ.

ಗಸ್ತು ಇದೆಯಾ?:

ಉರುಳಿಗೆ ಹುಲಿ ಬಲಿ ಹಾಗೂ ಆನೆ ಸಾವು,ದಂತ ಕಳುವಿನ ಎರಡೂ ಪ್ರಕರಣಗಳು ಒಂದೇ ಮದ್ದೂರು ವಲಯದಲ್ಲಿ ನಡೆದಿರುವುದು ಅರಣ್ಯ ಇಲಾಖೆಯ ಗಸ್ತು ವ್ಯವಸ್ಥೆ ಹಾಗೂ ಸಿಬ್ಬಂದಿಯ ಕಾರ್ಯವೈಖರಿ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬಂಡೀಪುರ-ಮಧುಮಲೈ ಗಡಿ ಭಾಗದಲ್ಲಿ ಕಳ್ಳಬೇಟೆ ಗ್ಯಾಂಗ್ ಸಕ್ರಿಯವಾಗಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪರಿಸರವಾದಿ ಜೋಸೆಫ್ ಹೂವರ್, ಪ್ರಕರಣಗಳನ್ನು ಮುಚ್ಚಿಡುವುದರಿಂದ ಯಾವುದೇ ಪ್ರಯೋಜನವಿಲ್ಲ, ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಹುಲಿ, ಆನೆ ಸಾವು; ತನಿಖಾ ತಂಡ-ಡಿಸಿಎಫ್‌

ಹುಲಿ ಹಾಗೂ ಆನೆ ಸಾವಿನ ಪ್ರಕರಣ ಸಂಬಂಧ ತನಿಖಾ ತಂಡ ರಚನೆಯಾಗಿದ್ದು,ನಿರ್ಲಕ್ಷ್ಯ ಕಂಡು ಬಂದರೆ ಶಿಸ್ತು ಕ್ರಮ ಗ್ಯಾರಂಟಿ ಎಂದು ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಎಲ್.ನಂದೀಶ್‌ ಪ್ರತಿಕ್ರಿಯೆ ನೀಡಿದ್ದು, ಕಳೆದ ಅ.೧೦ ರಂದು ಹುಲಿ ಸಾವಿನ ಬಗ್ಗೆ ಗೊತ್ತಾಗುತ್ತಿದ್ದಂತೆ ಮರಣೋತ್ತರ ಪರೀಕ್ಷೆ ನಡೆಸಿದ್ದೇವೆ ಎಂದರು.

ಎಸಿಎಫ್ ನೇತೃತ್ವದಲ್ಲಿ ಮೂವರು ವಲಯ ಅರಣ್ಯಾಧಿಕಾರಿಗಳನ್ನೊಳಗೊಂಡ ತನಿಖಾ ತಂಡ ರಚಿಸಲಾಗಿದ್ದು, ಒಂದು ವಾರದಲ್ಲಿ ವರದಿ ಬರಲಿದೆ. ಎಲ್ಲಾ ಹಂತದಲ್ಲೂ ತನಿಖೆ ನಡೆಯುತ್ತೆ ಎಂದು ಸ್ಪಷ್ಟಪಡಿಸಿದರು.

ಅರಣ್ಯದಲ್ಲಿ ಗಸ್ತಿನ ಬಗ್ಗೆಯೂ ತನಿಖೆ ನಡೆಯುತ್ತೆ. ನಿರ್ಲಕ್ಷ್ಯ ಕಂಡುಬಂದರೆ ಶಿಸ್ತು ಕ್ರಮ ಗ್ಯಾರಂಟಿ.ನಾವು ಪ್ರಕರಣ ಮುಚ್ಚಿಟ್ಟಿಲ್ಲ,ಕಳ್ಳಬೇಟೆಗಾರರು ಅಲರ್ಟ್ ಆಗಬಾರದು ಎಂದು ಮಾಹಿತಿ ನೀಡಿರಲಿಲ್ಲ ಎಂದು ಸಮಜಾಯಿಸಿ ನೀಡಿದರು. ಅಲ್ಲದೆ ಈ ಎರಡು ಘಟನೆಗಳ ಬಗ್ಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೂ (ಎನ್ ಟಿಸಿಎ) ಮಾಹಿತಿ ನೀಡಿದ್ದೇವೆ ಎಂದರು.

ಎರಡು ಪ್ರಕರಣಗಳು ಒಂದೇ ವಲಯದಲ್ಲಿ ನಡೆದಿವೆ. ಹುಲಿಗೆ ಉರುಳು ಹಾಕಿದ್ದು,ಆನೆ ದಂತ ನಾಪತ್ತೆ ಹಾಗೂ ಆನೆ ಸತ್ತ ಬಗ್ಗೆ ಅರಣ್ಯಾಧಿಕಾರಿಗೆ ಮಾಹಿತಿ ಇಲ್ಲದೆ ಇರುವುದು ಗಮನಿಸಿದ್ದೇನೆ. ಈ ವಲಯದಲ್ಲಿ ಗಸ್ತು ನಡೆಸುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಗರ ರೈಲ್ವೆ ನಿಲ್ದಾಣಕ್ಕೆ ಲೋಹಿಯಾ ಹೆಸರಿಡಲು ಒತ್ತಾಯ
ಎಲ್ಲಾ ಕಲಾ ಪ್ರಕಾರಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಿದೆ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ