ಶಿವಮೊಗ್ಗ: ಎಲ್ಲಾ ಕಲಾ ಪ್ರಕಾರಗಳನ್ನು ಮುಂದಿನ ಪೀಳಿಗೆಗೆ ಉಳಸಿಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.ನಗರದ ಶಿವಪ್ಪನಾಯಕ ಅರಮನೆಯಲ್ಲಿ ಬುಧವಾರ ಕಲಾ ದಸರಾ ಅಂಗವಾಗಿ ಹಮ್ಮಿಕೊಂಡಿದ್ದ ಛಾಯಾಚಿತ್ರ ಪ್ರದರ್ಶನ, ಚಿತ್ರಕಲಾ ಪ್ರದರ್ಶನ ಮತ್ತು ಗೊಂಬೆಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಶಿವಮೊಗ್ಗದ ಜನತೆ ಕಲೆ, ಸಂಸ್ಕೃತಿಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಕಲೆ, ಸಂಸ್ಕೃತಿ ಬಗ್ಗೆ ತಿಳಿದುಕೊಂಡು ಅದನ್ನು ಅನುಸರಿಸಿದರೆ ಪೂರ್ಣ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಿ ಸಾಧನೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನನಗೆ ಇಲ್ಲಿ ಬಂದ ಮೇಲೆ ಇಲ್ಲಿನ ಕಲಾ ಪ್ರದರ್ಶನ, ಛಾಯಾ ಚಿತ್ರ ಪ್ರದರ್ಶನ ನೋಡಿ ಅತ್ಯಂತ ಸಂತೋಷವಾಯಿತು. ಶಿವಮೊಗ್ಗದ ಜನತೆ ಈ ಅವಕಾಶವನ್ನು ಸದುಪಯೋಗ ಮಾಡಬೇಕು, ಆಸ್ವಾದಿಸಬೇಕು ಎಂದರು.
ಸುಜಾತಾ ಮುರಳೀಧರ್ ಅವರ ಗೊಂಬೆಗಳ ಪ್ರದರ್ಶನ, ವಸಂತಕುಮಾರ್ ಮತ್ತು ತಂಡದ ಚಿತ್ರಕಲಾ ಪ್ರದರ್ಶನ ಹಾಗೂ ಶಿವಮೊಗ್ಗ ಯೋಗರಾಜ್, ಡಾ. ಪ್ರಶಾಂತ್ ಪೈ ಮಂಡಗದ್ದೆ ನಟರಾಜ್, ಆಯನೂರು ಗಿರಿ, ಪ್ರದೀಪ್ ಕುಮಾರ್, ಡಾ.ಶ್ರೀಕಾಂತ್ ಹೆಗ್ಡೆ, ಪ್ರದೀಪ್ ಕುಣಿಬೈಲ್, ಎನ್. ಶಿವಕುಮಾರ್ ಅವರ ಛಾಯಾಚಿತ್ರಗಳ ಪ್ರದರ್ಶನ ಗಮನಸೆಳೆಯಿತು.
ವೇದಿಕೆಯಲ್ಲಿ ತುಷಾರ್ ಡಿ. ಹೊಸೂರು, ವೆಂಕಟಯ್ಯ, ವಸಂತಕುಮಾರಿ, ಇತರರು ಇದ್ದರು.