55 ವರ್ಷದ ಬಳಿಕ ತುಂಬಿದ ಹುಲಿಕೆರೆ ಕೆರೆ, ಸಂಕಷ್ಟ ಸೃಷ್ಟಿ!

KannadaprabhaNewsNetwork |  
Published : Oct 30, 2024, 12:43 AM IST
ಕೂಡ್ಲಿಗಿ ತಾಲೂಕು ಹುಲಿಕೆರೆ ಕೆರೆ 55 ವರ್ಷಗಳ ನಂತರ ಕೋಡಿ ಬಿದ್ದಿದ್ದು ಇಲ್ಲಿಯ 55ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು 10ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಂದಿವೆ.    | Kannada Prabha

ಸಾರಾಂಶ

, ಇಲ್ಲಿಯ ರೈತರಿಗೆ ಒಂದು ಕಡೆ ಕೆರೆ ತುಂಬಿದ ಸಂತಸವಾದರೆ ಮತ್ತೊಂದು ಕಡೆ 55ಕ್ಕೂ ಹೆಚ್ಚು ಮನೆಗಳ ಸುತ್ತ ನೀರು ಆವರಿಸಿ ಸಂಕಷ್ಟ ಎದುರಾಗಿದೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ತಾಲೂಕಿನ ಹುಲಿಕೆರೆ ಕೆರೆ 55 ವರ್ಷಗಳ ಆನಂತರ ಈಗ ಕೋಡಿ ಬಿದ್ದಿದೆ. ಆದರೆ, ಇಲ್ಲಿಯ ರೈತರಿಗೆ ಒಂದು ಕಡೆ ಕೆರೆ ತುಂಬಿದ ಸಂತಸವಾದರೆ ಮತ್ತೊಂದು ಕಡೆ 55ಕ್ಕೂ ಹೆಚ್ಚು ಮನೆಗಳ ಸುತ್ತ ನೀರು ಆವರಿಸಿ ಸಂಕಷ್ಟ ಎದುರಾಗಿದೆ. ಇದರಿಂದ ಇಲ್ಲಿಯ ಜನ ಮನೆ ತೊರೆದು ಶಾಲೆ, ಸಮುದಾಯ ಭವನಗಳಲ್ಲಿ ಜೀವನ ಮಾಡುತ್ತಿದ್ದಾರೆ. ಆದರೆ ತಾಲೂಕು ಆಡಳಿತ ಮಾತ್ರ ಈ ಕಡೆ ಮುಖಮಾಡಿಯೂ ನೋಡದಿರುವುದು ಇಲ್ಲಿಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಹುಲಿಕೆರೆಯ ಹಿರೇಕುಂಬಳಗುಂಟೆ ರಸ್ತೆಯ ಅಕ್ಕಪಕ್ಕದಲ್ಲಿರುವ 55ಕ್ಕೂ ಹೆಚ್ಚು ಮನೆಗಳ ಸುತ್ತ ಕೆರೆಯ ನೀರು ಆವರಿಸಿದೆ. ಈ ಮನೆಗಳಿಗೆ ಹೋಗಬೇಕಾದರೆ ಮೂರ್ನಾಲ್ಕು ಅಡಿ ನೀರಿನಲ್ಲಿ ನಡೆದುಕೊಂಡು ಹೋಗಬೇಕು. ಕೆಲವರು ಮನೆಗಳು ಬೀಳುತ್ತವೆ ಎಂಬುದನ್ನರಿತು ಬಾಡಿಗೆ ಮನೆಯಲ್ಲಿ ಮಾಡಿ ವಾಸ ಮಾಡುತ್ತಿದ್ದಾರೆ. ಬಾಡಿಗೆ ಕಟ್ಟಲು ಆಗದವರು ತಮ್ಮ ಮನೆಗಳನ್ನು ತೊರೆದು ಸರಕು ಸರಂಜಾಮುಗಳೊಂದಿಗೆ ಶಾಲೆಗಳ ಕಟ್ಟಡಗಳು, ಸಮುದಾಯ ಭವನಗಳನ್ನು ಸೇರಿಕೊಂಡಿದ್ದಾರೆ. ಇವರ ಬದುಕು ಅಕ್ಷರಶಃ ಬೀದಿಗೆ ಬಂದಿದೆ. ಆದರೆ, ಕೂಡ್ಲಿಗಿ ತಹಸೀಲ್ದಾರ್ ಮಾತ್ರ ತಮ್ಮ ಗೋಳು ಕೇಳುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಶಾಸಕರ ಭೇಟಿ

ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ನೀರು ನುಗ್ಗಿದ ಮನೆಗಳಿಗೆ ಭೇಟಿ ನೀಡಿ ಅಲ್ಲಿಯ ಜನತೆಯ ಸಮಸ್ಯೆ ಕೇಳಿಕೊಂಡು ಹೋಗಿದ್ದಾರೆ. ಆದರೆ, ತಾಲೂಕು ಆಡಳಿತದ ಕಿವಿ ಹಿಂಡಿ ಇಲ್ಲಿಯ ನಿರಾಶ್ರಿತರಿಗೆ ಕನಿಷ್ಠ ಕಾಳಜಿ ಕೇಂದ್ರವನ್ನಾದರೂ ತೆರೆದಿಲ್ಲ. ಮನೆಗಳನ್ನು ಬಿಟ್ಟು ಬೀದಿಯಲ್ಲಿ ವಾಸಿಸುವ ಹತ್ತಾರು ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಿಲ್ಲ. ಹೀಗಾಗಿ, ಇಲ್ಲಿಯ ನಿವಾಸಿಗಳು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಕಾಳಜಿ ಕೇಂದ್ರ ತೆರೆದಿಲ್ಲ

ನಮ್ಮೂರಿನಲ್ಲಿ 55 ವರ್ಷಗಳ ಆನಂತರ ಊರಪಕ್ಕದ ಕೆರೆ ತುಂಬಿದೆ. ಮತ್ತೊಂದೆಡೆ ಇಲ್ಲಿಯ 55ಕ್ಕೂ ಹೆಚ್ಚು ಕುಟುಂಬಗಳು ಮನೆಗಳನ್ನು ತೊರೆದು ಜೀವನ ಮಾಡಬೇಕಾದ ಅನಿವಾರ್ಯತೆ ಬಂದಿದ್ದರಿಂದ ದುಃಖವಾಗಿದೆ. ತಾಲೂಕು ಆಡಳಿತ, ಜನಪ್ರತಿನಿಧಿಗಳು ಇಲ್ಲಿ ವರೆಗೂ ಕನಿಷ್ಠ ಕಾಳಜಿ ಕೇಂದ್ರ ತೆರೆದಿಲ್ಲ. ಮನೆಗಳನ್ನು ತೊರೆದು ಸಮುದಾಯ ಭವನಗಳಲ್ಲಿ ವಾಸಿಸುವ ಜನತೆಗೆ ಕನಿಷ್ಠ ಆರ್ಥಿಕ ಸಹಾಯ ಮಾಡಿಲ್ಲ. ಹೀಗಾಗಿ, ನಾವು ಜಿಲ್ಲಾಧಿಕಾರಿ ಗಮನಕ್ಕೆ ತಂದು ನಿರಾಶ್ರಿತರಿಗೆ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ.

- ಟಿ. ಓಂಕಾರಪ್ಪ ವಕೀಲರು

ಕಷ್ಟ ಕೇಳಿಲ್ಲ

ಕೆರೆ ನೀರು ನುಗ್ಗಿದ್ದರಿಂದ ನಾವು ನಮ್ಮ ಮನೆ ತೊರೆದು ಸಮುದಾಯಭವನದ ಮುಂದೆ ಬಟ್ಟೆಬರೆ ಇಟ್ಟುಕೊಂಡು ಜೀವನ ಮಾಡ್ತೀವಿ, ಇಲ್ಲಿವರೆಗೂ ಯಾರೂ ನಮ್ಮ ಕಷ್ಟ ಕೇಳೋಕೆ ಬಂದಿಲ್ರೀ.

- ನಾಗವೇಣಿ ಸಂತ್ರಸ್ತೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!